ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಅಭಿಮಾನಿ ಹಾಗೂ ಕ್ರೀಡಾವಲಯದಲ್ಲಿ ಮೂಡಿತ್ತು. ರಜತ್ ಪಾಟಿದಾರ್ಗೆ ನಾಯಕತ್ವದ ಪಟ್ಟವನ್ನು ನೀಡುವ ಮೂಲಕ ಆರ್ಸಿಬಿ ಫ್ರಾಂಚೈಸಿಯು ಕುತೂಹಲಕ್ಕೆ ತೆರೆ ಎಳೆದಿದ್ದು, ಅಭಿಮಾನಿಗಳು ಈ ಸಲ ಕಪ್ ನಮ್ದೆ ಎಂದು ಹೇಳುತ್ತಿದ್ದಾರೆ. ಆದರೆ. ಆರ್ಸಿಬಿ (RCB) ಮೊದಲ ಆಯ್ಕೆ ವಿರಾಟ್ ಕೊಹ್ಲಿ ಆಗಿದ್ದರು ಎಂಬ ವಿಚಾರ ರಿವೀಲ್ ಆಗಿದೆ.
ರಜತ್ ನೇಮಕಕ್ಕೂ ಮುನ್ನ ಬಹುತೇಕರು ವಿರಾಟ್ ನಾಯಕನಾಗುತ್ತಾರೆ ಎಂದು ಭಾವಿಸಿದ್ದರು. ಮಾಜಿ ಆಟಗಾರೆರು ವಿರಾಟ್ ಆರ್ಸಿಬಿ (RCB) ನಾಯಕರಾದರೆ ಏನೆಲ್ಲಾ ಪ್ರಯೋಜನ ಆಗುತ್ತದೆ ಎಂದು ಸರಣಿ ಹೇಳಿಕೆಗಳನ್ನು ನೀಡಿದ್ದರು. ಆದರೆ, ಕ್ಯಾಪ್ಟನ್ಸಿ ವಿಚಾರವಾಗಿ ಟ್ವಿಸ್ಟ್ ನೀಡಿರುವ ಆರ್ಸಿಬಿ ಫ್ರಾಂಚೈಸಿ ಕೊಹ್ಲಿ ಆಪ್ತನಿಗೆ ನಾಯಕತ್ವದ ಪಟ್ಟವನ್ನು ನೀಡಿದ್ದು, ಕೊಹ್ಲಿಗೆ ನಾಯಕತ್ವ ನೀಡದಿರುವ ಬಗ್ಗೆ ಸ್ಪಷ್ಟನೆಯನ್ನು ನೀಡಿದೆ.
ಈ ಕುರಿತು ಮಾತನಾಡಿರುವ ಆರ್ಸಿಬಿ ನಿರ್ದೇಶಕ ಮೊ ಬೊಬಾಟ್, ಭಾರತದ ಆಟಗಾರರನ್ನು ನಾಯಕನನ್ನಾಗಿ ಮಾಡಬೇಕು ಎಂಬುದು ನಮ್ಮ ಆಲೋಚನೆ ಆಗಿತ್ತು. ಇದು ಭಾರತೀಯ ಲೀಗ್ ಆಗಿರುವುದರಿಂದ, ಸ್ಥಳೀಯ ವಿಚಾರಗಳ ಬಗ್ಗೆ ಹೆಚ್ಚು ಮಾಹಿತಿ ಇರುವ ಭಾರತೀಯ ಆಟಗಾರನಿಗೆ ನಾವು ಮೊದಲ ಆದ್ಯತೆ ನೀಡುವ ಉದ್ದೇಶ ಹೊಂದಿದ್ದೆವು.
ವಿರಾಟ್ ಅವರ ಹೆಸರೂ ಲಿಸ್ಟ್ನಲ್ಲಿ ಇತ್ತು. ಕಳೆದ ಬಾರಿ ಫಾಪ್ ಡುಪ್ಲೆಸಿಸ್ ಕ್ಯಾಪ್ಟನ್ ಆಗಿದ್ದರು. ಈ ವೇಳೆ ಕೊಹ್ಲಿ ಹಿಂದಿನಿಂದ ತಂಡವನ್ನು ಮುನ್ನಡೆಸುತ್ತಿದ್ದರು. ರಜತ್ ಅವರ ಸ್ಟ್ರೈಕ್ ರೇಟ್ ಚೆನ್ನಾಗಿದೆ. ಅವರು ಹಿಂದಿನ ಸೀಸನ್ನಲ್ಲಿ ಉತ್ತಮವಾಗಿ ಆಡಿದ್ದಾರೆ. ಕ್ಯಾಪ್ಟನ್ ಹೌದೋ ಅಥವಾ ಅಲ್ಲವೋ ಕೊಹ್ಲಿ ಯಾವಾಗಲೂ ತಂಡದ ನಾಯಕನಾಗಿರುತ್ತಾರೆ. ಈಗಾಗಲೇ ಅವರು ಪಾಟಿದಾರ್ಗೆ ಬೆಂಬಲ ನೀಡುವಂತೆ ಕೋರಿದ್ದಾರೆ. ಫಾಪ್ ಕ್ಯಾಪ್ಟನ್ ಆಗುವುದಕ್ಕೂ ಮೊದಲು ಕೊಹ್ಲಿ ಅವರೇ ಸ್ವತಃ ನಾಯಕತ್ವದಿಂದ ಹಿಂದೆ ಸರಿದಿದ್ದರು. ಆ ಬಳಿಕ ಫಾಪ್ ಅವರು ನಾಯಕತ್ವ ಪಡೆದುಕೊಂಡಿದ್ದರು ಎಂದು ಆರ್ಸಿಬಿ (RCB) ನಿರ್ದೇಶಕ ಮೊ ಬೊಬಾಟ್ ಹೇಳಿದ್ದಾರೆ.