ಹರಾರೆ: ಪಾಕಿಸ್ತಾನ ಮೂಲದ ಆಲ್ರೌಂಡರ್ ಸಿಕಂದರ್ ರಾಜಾ ಜಿಂಬಾಬ್ವೆ ಟಿ20 ತಂಡದ ನೂತನ ನಾಯಕರಾಗಿ ನೇಮಕಗೊಂಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಅರ್ಹತಾ ಟೂರ್ನಿಗೆ ಪೂರ್ವಭಾವಿಯಾಗಿ ಸಿಕಂದರ್ಗೆ ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಜವಾಬ್ದಾರಿಯನ್ನು ಒಪ್ಪಿಸಿದೆ.
ಇದುವರೆಗೆ ಎಲ್ಲ ಮಾದರಿಯಲ್ಲಿ ಜಿಂಬಾಬ್ವೆ ತಂಡವನ್ನು ಮುನ್ನಡೆಸುತ್ತಿದ್ದ ಕ್ರೇಗ್ ಇರ್ವಿನ್ ಇನ್ನು ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಮಾತ್ರ ನಾಯಕರಾಗಿರಲಿದ್ದಾರೆ. 2024ರಲ್ಲಿ ವೆಸ್ಟ್ ಇಂಡೀಸ್-ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಅರ್ಹತೆ ತಂದುಕೊಡುವುದು ಸಿಕಂದರ್ ಮುಂದಿರುವ ಸವಾಲಾಗಿದೆ.
ಪಾಕಿಸ್ತಾನದ ಸಿಯಾಲ್ಕೋಟ್ನಲ್ಲಿ ಜನಿಸಿದ ಸಿಕಂದರ್ ರಾಜಾ, 2002ರಲ್ಲಿ ಜಿಂಬಾಬ್ವೆಗೆ ವಲಸೆ ಹೋಗಿದ್ದರು. ಪಾಕಿಸ್ತಾನದ ವಾಯು ಸೇನೆ ಸೇರುವ ಹಂಬಲ ಹೊಂದಿದ್ದ ಸಿಕಂದರ್ ರಾಜಾ, ದೃಷ್ಟಿ ಪರೀಕ್ಷೆಯಲ್ಲಿ ವಿಫಲರಾಗಿದ್ದರಿಂದ ಈ ಹುದ್ದೆ ಸಂಪಾದಿಸುವ ಅವಕಾಶದಿಂದ ವಂಚಿತರಾಗಿದ್ದರು. ಜಿಂಬಾಬ್ವೆಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಸಿಕಂದರ್ ಬಳಿಕ ಅರೆಕಾಲಿಕ ಕ್ರಿಕೆಟರ್ ಆಗಿ ಮಾರ್ಪಟ್ಟಿದ್ದರು. ಜಿಂಬಾಬ್ವೆ ಕ್ರಿಕೆಟ್ನಲ್ಲಿ ಯಶಸ್ಸು ಸಿಕ್ಕ ಬಳಿಕ ವೃತ್ತಿಪರ ಕ್ರಿಕೆಟಿಗರಾಗಿ ಬದಲಾಗಿದ್ದರು. ಕಳೆದ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದ್ದರು.