ಕ್ರೈಸ್ಟ್ಚರ್ಚ್: ಆಲ್ರೌಂಡರ್ ರವೀಂದ್ರ ಜಡೇಜಾ ಓರ್ವ ಅದ್ಭುತ ಫೀಲ್ಡರ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ನಮ್ಮ ಮುಂದಿವೆ. ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಜಡೇಜಾ ಹಿಡಿದಂತಹ ಅತ್ಯದ್ಭುತ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
2ನೇ ಟೆಸ್ಟ್ ಪಂದ್ಯ ಕ್ರೈಸ್ಸ್ಚರ್ಚ್ನ ಹ್ಯಾಗ್ಲೆ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಂದು ಮೊದಲನೇ ಇನ್ನಿಂಗ್ಸ್ ಮುಂದುವರಿಸಿದ ಕಿವೀಸ್ಗೆ ಜಡೇಜಾ ಅವರು ಕ್ಯಾಚ್ ಮೂಲಕ ಶಾಕ್ ನೀಡಿದರು. ಮಹಮ್ಮದ್ ಶಮಿ ಓವರನ್ನಲ್ಲಿ ನೈಲ್ ವ್ಯಾಗ್ನರ್ ಹೊಡೆದಂತಹ ಫುಲ್ ಅಪ್ ಶಾಟ್ನಿಂದ ಚಿಮ್ಮಿದ ಚೆಂಡ್ ಸ್ಕ್ವೇರ್ಲೆಗ್ ವಿಭಾಗದಲ್ಲಿ ನಿಂತಿದ್ದ ಜಡೇಜಾ ಅವರ ಮೇಲೆ ಹಾರಿ ಹೋಗುತ್ತಿತ್ತು, ಈ ವೇಳೆ ಹಿಮ್ಮುಖವಾಗಿ ಓಡಿ ಹೋಗಿ ಗಾಳಿಯಲ್ಲಿ ಹಾರಿ ಎಡಗೈನಲ್ಲಿ ಮನೋಹರವಾಗಿ ಕ್ಯಾಚ್ ಜಡೇಜಾ ಕ್ಯಾಚ್ ಹಿಡಿದರು. ಈ ಮೂಲಕ 9ನೇ ವಿಕೆಟ್ಗೆ ಉತ್ತಮ ಜತೆಯಾಟವಾಡುತ್ತಿದ್ದ ಕೈಲಿ ಜೇಮಿಸನ್ ಮತ್ತು ನೈಲ್ ವ್ಯಾಗ್ನರ್ ಜೋಡಿಗೆ ತಡೆವೊಡ್ಡುವ ಮೂಲಕ ಕಿವೀಸ್ ಪಡೆಗೆ ಜಡೇಜಾ ಶಾಕ್ ನೀಡಿದರು.
ಇದಾದ ಕೆಲವೇ ಕ್ಷಣಗಳಲ್ಲಿ ಜಡೇಜಾ ಅವರ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದು ವರ್ಷದ ಅತ್ಯುತ್ತಮ ಕ್ಯಾಚ್ ಎಂತಲೂ ಬಣ್ಣಿಸಿದ್ದಾರೆ.
ಇನ್ನು ಟೆಸ್ಟ್ ವಿಚಾರಕ್ಕೆ ಬಂದರೆ ನಿನ್ನೆ ಆರಂಭವಾದ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ಕಿವೀಸ್ ಪಡೆಯ ಬೌಲಿಂಗ್ ದಾಳಿಗೆ ನಲುಗಿ 63 ಓವರ್ಗಳಲ್ಲಿ 242 ರನ್ಗೆ ಆಲೌಟ್ ಆಗಿತ್ತು. ಬಳಿಕ ಪ್ರಥಮ ಇನ್ನಿಂಗ್ಸ್ ಆರಂಭಿಸಿದ್ದ ಕಿವೀಸ್ ಪಡೆ ಮೊದಲ ದಿನದಾಟದ ಅಂತ್ಯಕ್ಕೆ 23 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿ 2ನೇ ದಿನದಾಟವನ್ನು ಕಾಯ್ದುಕೊಂಡಿತು. ಇಂದು ಇನ್ನಿಂಗ್ಸ್ ಮುಂದುವರಿಸಿದ ಕಿವೀಸ್ ಪಡೆಗೆ ಶಮಿ(4 ವಿಕೆಟ್) ಮತ್ತು ಬೂಮ್ರ(3) ಶಾಪವಾಗಿ ಕಾಡಿದರು. ಅಂತಿಮವಾಗಿ 73.1 ಓವರ್ಗಳಲ್ಲಿ 235 ರನ್ಗೆ ಆಲೌಟ್ ಆಯಿತು. ಸದ್ಯ ಏಳು ರನ್ಗಳ ಮುನ್ನೆಡೆಯಿಂದ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ 18 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿ ಆಡುತ್ತಿದೆ. (ಏಜೆನ್ಸೀಸ್)