ಕ್ರೀಡೆ

ಬಾಂಗ್ಲಾದೇಶ ಎದುರು ಒಂದು ವಿಕೆಟ್ ಪಡೆದು ಐದು ದಾಖಲೆ ಬರೆದ ರವೀಂದ್ರ ಜಡೇಜಾ

ಕಾನ್ಪುರ: ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೋಮವಾರ, ಮೊದಲ ದಿನದ 3 ವಿಕೆಟ್‌ಗೆ 107 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಬಾಂಗ್ಲಾ, ಮಾಮಿನುಲ್ ಹಕ್ (107 ರನ್, 194 ಎಸೆತ, 17 ಬೌಂಡರಿ, 1 ಸಿಕ್ಸರ್) ಶತಕದ ನೆರವಿನಿಂದ ಭೋಜನಾ ವಿರಾಮದ ಬಳಿಕ 74.2 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಪ್ರತಿ ಓವರ್‌ಗೆ 8.22ರ ಸರಾಸರಿಯಲ್ಲಿ ರನ್ ಪೇರಿಸುವ ಮೂಲಕ ಬಾಂಗ್ಲಾ ಬೌಲರ್‌ಗಳನ್ನು ಬೆಂಡೆತ್ತಿದ ಭಾರತ, ದಿನದ ಆಟ ಮುಕ್ತಾಯಕ್ಕೆ ಇನ್ನೂ ಕೆಲ ಓವರ್‌ಗಳು ಬಾಕಿಯಿರುವಂತೆಯೇ 34.4 ಓವರ್‌ಗಳಲ್ಲಿ 9 ವಿಕೆಟ್‌ಗೆ 285 ರನ್‌ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ (72 ರನ್, 51 ಎಸೆತ, 12 ಬೌಂಡರಿ, 2 ಸಿಕ್ಸರ್) ಹಾಗೂ ಕನ್ನಡಿಗ ಕೆಎಲ್ ರಾಹುಲ್ (68 ರನ್, 43 ಎಸೆತ, 7 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ 52 ರನ್‌ಗಳ ಅಮೂಲ್ಯ ಮುನ್ನಡೆ ಸಾಧಿಸಿತು. ಬಾಂಗ್ಲಾ ದಿನದಂತ್ಯಕ್ಕೆ ತನ್ನ 2ನೇ ಇನಿಂಗ್ಸ್‌ನಲ್ಲಿ 11 ಓವರ್‌ಗಳಲ್ಲಿ 2 ವಿಕೆಟ್‌ಗೆ 26 ರನ್‌ಗಳಿಸಿದ್ದು, ಇನ್ನೂ 26 ರನ್ ಹಿನ್ನಡೆಯಲ್ಲಿದೆ. ಆರಂಭಿಕ ಶಾದ್ಮನ್ ಇಸ್ಲಾಂ (7*) ಜತೆ ಮಾಮಿನುಲ್ ಹಕ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಒಂದು ವಿಕೆಟ್, ಐದು ದಾಖಲೆ 35 ವರ್ಷದ ಆಲ್ರೌಂಡರ್ ರವೀಂದ್ರ ಜಡೇಜಾ ಬಾಂಗ್ಲಾದೇಶದ ಖಾಲಿದ್ ಅಹ್ಮದ್ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ವೈಯಕ್ತಿಕವಾಗಿ ಹಲವು ಮೈಲಿಗಲ್ಲು ಸ್ಥಾಪಿಸಿದರು. ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಹಾಗೂ 3 ಸಾವಿರ ಪ್ಲಸ್ ರನ್ ಸಾಧನೆ ಮಾಡಿದ ವಿಶ್ವದ 11ನೇ ಹಾಗೂ ಮೂರನೇ ಭಾರತೀಯ ಎನಿಸಿದರು. ಆರ್.ಅಶ್ವಿನ್, ಕಪಿಲ್ ದೇವ್ ಮೊದಲಿಬ್ಬರು ಭಾರತೀಯರಾಗಿದ್ದಾರೆ. ಜತೆಗೆ 74ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 2ನೇ ಅತಿವೇಗವಾಗಿ ಸಾಧಿಸಿದ ಆಟಗಾರ ಎನಿಸಿದರು. ಇಂಗ್ಲೆಂಡ್ ಇಯಾನ್ ಬಾಥಂ (72) ಅಗ್ರಸ್ಥಾನದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದ 7ನೇ ಭಾರತೀಯ ಬೌಲರ್ ಎನಿಸಿದ ಜಡೇಜಾ, ವಿಶ್ವದ ಮೂರನೇ ಎಡಗೈ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಂಗನಾ ಹೆರಾತ್ (433), ಡೇನಿಯಲ್ ವೆಟ್ಟೋರಿ (362) ಹಿಂದಿನ ಸಾಧಕರು.