Anil Kumble : ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದರೂ ಟೀಮ್ ಇಂಡಿಯಾ ಗೆಲುವು ಸಾಧ್ಯವಾಗಲಿಲ್ಲ. ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್ ಮತ್ತು ಬ್ರೈಡನ್ ಕಾರ್ಸೆ ಅವರ ಮೊನೆಚಾದ ಬೌಲಿಂಗ್ ದಾಳಿಗೆ ಟೀಮ್ ಇಂಡಿಯಾದ ಅಗ್ರ ಮತ್ತು ಮಧ್ಯಮ ಕ್ರಮಾಂಕ ಕುಸಿಯಿತು.
ಒಂದು ಹಂತದಲ್ಲಿ, ಭಾರತದ ಸ್ಕೋರ್ 7 ವಿಕೆಟ್‌ಗಳಿಗೆ 82 ಆಗಿತ್ತು. ಇದಾದ ಸ್ವಲ್ಪ ಸಮಯದ 8 ವಿಕೆಟ್‌ಗಳಿಗೆ 112 ಆಯಿತು. ಈ ಸಮಯದಲ್ಲಿ, ಇಂಗ್ಲೆಂಡ್ ಬೆಳಗಿನ ಅವಧಿಯಲ್ಲಿಯೇ ಪಂದ್ಯವನ್ನು ಕೊನೆಗೊಳಿಸುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಜಡೇಜಾ ಜವಾಬ್ದಾರಿಯನ್ನು ತೆಗೆದುಕೊಂಡು ಕೊನೆಯವರೆಗೂ ಹೋರಾಡಿದರು. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಬೆಂಬಲದೊಂದಿಗೆ ಅವರು ಪಂದ್ಯವನ್ನು ಕೊನೆಯ ಅವಧಿವರೆಗೂ ಕೊಂಡೊಯ್ದರು.
ಕ್ರಿಸ್ ವೋಕ್ಸ್ ಎಸೆದ 48ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಉದ್ದೇಶವನ್ನು ಪ್ರದರ್ಶಿಸಿದರು. ಆದರೆ, ಆ ನಂತರ, ಅವರು 107 ಎಸೆತಗಳಲ್ಲಿ ಒಂದು ಬೌಂಡರಿ ಕೂಡ ಬಾರಿಸಲಿಲ್ಲ. ಸ್ಟೋಕ್ಸ್, ಕಾರ್ಸೆ ಮತ್ತು ಆರ್ಚರ್ ಬೌಲಿಂಗ್ ವಿರುದ್ಧ ಮಾತ್ರವಲ್ಲದೆ, ಕ್ರಿಸ್ ವೋಕ್ಸ್, ಶೋಯೆಬ್ ಬಶೀರ್ ಮತ್ತು ಜೋ ರೂಟ್ ಅವರ ಬೌಲಿಂಗ್ ವಿರುದ್ಧವೂ ಜಡೇಜಾ ರಿಸ್ಕ್ ತೆಗೆದುಕೊಳ್ಳಲಿಲ್ಲ. ಜಯದ ಸಮೀಪಕ್ಕೆ ಬಂದಾಗ, ಸಿರಾಜ್ ಬೌಲ್ಡ್ ಆದರು. ಇದರಿಂದಾಗಿ ಭಾರತ ಗುರಿಯಿಂದ 22 ರನ್‌ಗಳ ದೂರದಲ್ಲಿದ್ದಾಗ ಸೋಲನ್ನು ಒಪ್ಪಿಕೊಂಡಿತು.
ಟೀಮ್ ಇಂಡಿಯಾ ಸೋಲಿನ ಬೆನ್ನಲ್ಲೇ ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಜಡೇಜಾ ಇನ್ನಿಂಗ್ಸ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಜಡೇಜಾ ಸ್ವಲ್ಪ ರಿಸ್ಕ್ ತೆಗೆದುಕೊಂಡು ಆಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ವೋಕ್ಸ್ ಸೇರಿದಂತೆ ಸ್ಪಿನ್ನರ್‌ಗಳ ಮೇಲೆ ಸ್ಫೋಟಕ ಆಟ ನಡೆಸಿದ್ದರೆ, ಟೀಮ್ ಇಂಡಿಯಾ ಗುರಿಯ ಹತ್ತಿರ ಬರುತ್ತಿತ್ತು ಎಂದು ಕುಂಬ್ಳೆ ಹೇಳಿದ್ದಾರೆ.
ರೂಟ್, ಬಶೀರ್ ಮತ್ತು ವೋಕ್ಸ್ ವಿರುದ್ಧ ಜಡೇಜಾ ರಿಸ್ಕ್ ತೆಗೆದುಕೊಳ್ಳಬೇಕಿತ್ತು. ರೂಟ್ ಮತ್ತು ಬಶೀರ್ ಆಫ್-ಸ್ಪಿನ್ನರ್‌ಗಳು. ಅವರ ಚೆಂಡು ಲಾರ್ಡ್ಸ್‌ನಲ್ಲಿ ಹೆಚ್ಚು ತಿರುಗುವುದಿಲ್ಲ. ಆದ್ದರಿಂದ, ಹೊರಗಿನ ಅಂಚಿನ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಕಠಿಣ ಪಿಚ್‌ಗಳಲ್ಲಿ ಜಡೇಜಾ ಉತ್ತಮ ಬೌಲರ್‌ಗಳನ್ನು ಎದುರಿಸಿದ್ದಾರೆ. ಅವರು ಒಂದು ಅಥವಾ ಎರಡು ಅವಕಾಶಗಳನ್ನು ತೆಗೆದುಕೊಳ್ಳಬೇಕಿತ್ತು ಎಂದು ನಾನು ಭಾವಿಸಿದೆ. ಬುಮ್ರಾ ಮತ್ತು ಸಿರಾಜ್ ಕ್ರೀಸ್‌ನಲ್ಲಿದ್ದರೆ ಮತ್ತು ಅವರು ಇನ್ನೂ ಕೆಲವು ಸಿಂಗಲ್ಸ್ ಮತ್ತು ಡಬಲ್ಸ್ ತೆಗೆದುಕೊಂಡಿದ್ದರೆ ಉತ್ತಮವಾಗುತ್ತಿತ್ತು. ಜಡೇಜಾ ರಿಸ್ಕ್ ತೆಗೆದುಕೊಂಡು 1 ಅಥವಾ 2 ದೊಡ್ಡ ಹೊಡೆತಗಳನ್ನು ಆಡಿದ್ದರೆ ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂದು ಅನಿಲ್ ಕುಂಬ್ಳೆ ಹೇಳಿದರು.
ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡ ಪ್ರತಿಕ್ರಿಯೆ ನೀಡಿದ್ದು, ಕೊಟ್ಟ ಗುರಿಯನ್ನು ಬೆನ್ನತ್ತಲು ಟೀಮ್ ಇಂಡಿಯಾ ಬ್ಯಾಟರ್ಗಳ ಎಡವಟ್ಟೇ ಕಾರಣ ಎಂದಿದ್ದಾರೆ. “ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಕನಿಷ್ಠ 60ರಿಂದ 70 ರನ್‌ಗಳ ಕೊಡುಗೆಯನ್ನು ನೀಡಿದ್ದರೆ, ಫಲಿತಾಂಶ ಬೇರೆಯೇ ಆಗ್ತಿತ್ತು. ಆದರೆ, ಟೀಮ್ ಇಂಡಿಯಾ ಬ್ಯಾಟರ್ಗಳು ಹಾಗೆ ಮಾಡಲಿಲ್ಲ. ಸ್ಪಿನ್ನರ್‌ಗಳಾದ ಜೋ ರೂಟ್ ಮತ್ತು ಶೋಯೆಬ್ ಬಶೀರ್ ಬೌಲಿಂಗ್ ಮಾಡುವಾಗ ಜಡೇಜಾ ಆಕ್ರಮಣಕಾರಿಯಾಗಿ ಆಡಬೇಕಿತ್ತು ಎಂದು ಹಲವರು ಟೀಕಿಸಿದ್ದಾರೆ. ಆದರೆ, ಆ ಸಮಯದಲ್ಲಿ ಜಡೇಜಾ ಆಡಿದ ರೀತಿ ಸರಿಯೇ ಇತ್ತು. ಕಾರಣ, ಅವರೊಂದಿಗೆ ಬ್ಯಾಟಿಂಗ್ ಸಾಥ್ ಕೊಡಲು ಇನ್ಯಾರು ಇರಲಿಲ್ಲ” ಎಂದಿದ್ದಾರೆ.
ಇಲ್ಲಿ ಜಡೇಜಾ ಏಕಾಂಗಿ ಹೋರಾಟಕ್ಕೆ ನಾನು ಫುಲ್ ಮಾರ್ಕ್ಸ್ಗಳನ್ನು ಕೊಡುತ್ತೇನೆ. ಆದರೆ, ಆತನ ಮಂದಗತಿಯ ಬ್ಯಾಟಿಂಗ್ ಪ್ರದರ್ಶನ ತಂಡದ ಸೋಲಿಗೆ ಕಾರಣವಾಯಿತು. ವೇಗವಾಗಿ ಇನ್ನಿಂಗ್ಸ್ ಆಡಿದಿದ್ದರೆ ಖಂಡಿತ ಟೀಮ್ ಇಂಡಿಯಾ ಗೆಲ್ಲುವ ಸಾಧ್ಯತೆಗಳು ಹೆಚ್ಚಿತ್ತು” ಎಂದು ಗವಾಸ್ಕರ್ ಹೇಳಿದ್ದಾರೆ. (ಏಜೆನ್ಸೀಸ್)