ಸಿಡ್ನಿ: ಭಾರತ ಟೆಸ್ಟ್ ತಂಡದ ಭಾಗವಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿರುವ ಆಫ್-ಸ್ಪಿನ್ನರ್ ಆರ್. ಅಶ್ವಿನ್, ಸಿಡ್ನಿಯಲ್ಲಿ ಕ್ವಾರಂಟೈನ್‌ನಲ್ಲಿ ಶುಕ್ರವಾರ ಪತ್ನಿ ಪ್ರೀತಿ ಜತೆಗೆ 9ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಆಚರಿಸಿದ್ದಾರೆ.
ಪತ್ನಿ ಮತ್ತು ಇಬ್ಬರು ಪುತ್ರಿಯರ ಜತೆಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಮೂಲಕ ಅಶ್ವಿನ್, ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಜತೆಗೆ, ‘ಸಮಯ ಸಾಗುತ್ತದೆ. ಪ್ರೀತಿ ಜತೆಗೆ 9 ವರ್ಷಗಳೇ ಕಳೆದುಹೋದವು’ ಎಂದು ಬರೆದುಕೊಂಡಿದ್ದಾರೆ. ‘ನಮ್ಮಿಬ್ಬರಿಗೆ ಸಂತಸದ 9 ವರ್ಷ. ಜತೆಯಾಗಿ ಕ್ವಾರಂಟೈನ್‌ನಲ್ಲಿರುವುದಕ್ಕಿಂತ ಹೆಚ್ಚಿನ ರೋಮ್ಯಾಂಟಿಕ್ ಬೇರೆ ಯಾವುದಿದೆ? ತಪ್ಪಿಸಿಕೊಳ್ಳಲು ದಾರಿಯೇ ಇಲ್ಲ’ ಎಂದು ಪ್ರೀತಿ ಕೂಡ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಅಶ್ವಿನ್ ಆಡಿದ್ದರು. ಈ ಹಿನ್ನೆಲೆಯಲ್ಲಿ ಡೆಲ್ಲಿ ಫ್ರಾಂಚೈಸಿ ಕೂಡ ಟ್ವಿಟರ್‌ನಲ್ಲಿ ಅಶ್ವಿನ್-ಪ್ರೀತಿ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದೆ.
ಅಶ್ವಿನ್ 2011ರ ನವೆಂಬರ್ 13ರಂದು ಬಾಲ್ಯದ ಗೆಳತಿ ಪ್ರೀತಿ ಅವರನ್ನು ವಿವಾಹವಾಗಿದ್ದರು. ಅದರ ಮರುದಿನವೇ ಅವರು ಕೋಲ್ಕತದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯ ಆಡಲಿಳಿದಿದ್ದರು. ದಂಪತಿಗೆ 5 ವರ್ಷದ ಅಖಿರಾ ಮತ್ತು 4 ವರ್ಷದ ಆಧ್ಯಾ ಎಂಬಿಬ್ಬರು ಮಕ್ಕಳಿದ್ದಾರೆ.