Ravichandran Ashwin : ಇತ್ತೀಚೆಗೆ, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿ ಭಾರಿ ಸುದ್ದಿಯಾಗಿದ್ದ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ, ಈ ಬಾರಿ ಕ್ರಿಕೆಟ್ ಹೊರತಾಗಿ ಬೇರೆ ವಿಚಾರಕ್ಕೆ ಚರ್ಚೆಗೆ ಗ್ರಾಸವಾಗಿದ್ದಾರೆ.
ಕಾಲೇಜು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಶ್ವಿನ್, ಹಿಂದಿ ಭಾಷೆಯ ಕುರಿತು ನೀಡಿದ ಹೇಳಿಕೆಗಳು ಇದೀಗ ಪರ-ವಿರೋಧ ಚರ್ಚೆಯ ವಿಷಯವಾಗಿದೆ.
ಚೆನ್ನೈನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಆರ್. ಅಶ್ವಿನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅಶ್ವಿನ್, ಇಂಗ್ಲಿಷ್, ತಮಿಳು ಮತ್ತು ಹಿಂದಿ ಭಾಷೆಯನ್ನು ಎಷ್ಟು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ಕೇಳಿದರು. ಮೊದಲು ಇಂಗ್ಲಿಷ್ ಎಂದು ಹೇಳಿದಾಗ ಸ್ವಲ್ಪವೇ ಮಂದಿ ಕೈ ಎತ್ತಿ ಕೂಗಿದರು. ಬಳಿಕ ತಮಿಳಿನ ಬಗ್ಗೆ ಕೇಳಿದಾಗ ಬಹುತೇಕ ಮಂದಿ ಕೈ ಎತ್ತಿ ಜೋರಾಗಿ ಕೂಗಿದರು.
ಇದೇ ಸಂದರ್ಭದಲ್ಲಿ ಹಿಂದಿ ಭಾಷೆಯ ಬಗ್ಗೆ ಕೇಳಿದಾಗ ಯಾರೊಬ್ಬರು ಸಹ ಧ್ವನಿ ಎತ್ತಲಿಲ್ಲ. ಇಡೀ ಸಮಾರಂಭವೇ ಮೌನವಾಯಿತು. ಬಳಿಕ ಪ್ರತಿಕ್ರಿಯಿಸಿದ ಅಶ್ವಿನ್, ಇಲ್ಲಿ ನಿಮಗಾಗಿ ಹೇಳಬೇಕಾದ ಒಂದು ವಿಷಯವಿದೆ. ಅದೇನೆಂದರೆ, ಹಿಂದಿ ಕೇವಲ ಅಧಿಕೃತ ಭಾಷೆಯಷ್ಟೇ ರಾಷ್ಟ್ರೀಯ ಭಾಷೆಯಲ್ಲ ಎಂದರು. ಈ ಮೂಲಕ ಮತ್ತೆ ಹಿಂದಿ ಭಾಷೆಯ ಮೇಲಿನ ಚರ್ಚೆಗೆ ಅಶ್ವಿನ್ ಪ್ರಚೋದನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಶುರುವಾಗಿದೆ.
ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸೇರಿದಂತೆ ಹಲವಾರು ವಿಪಕ್ಷಗಳು ಕೇಂದ್ರವು ರಾಜ್ಯಗಳ ಮೇಲೆ ವಿಶೇಷವಾಗಿ ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಸಮಯದಲ್ಲಿ ಅಶ್ವಿನ್ ಅವರ ಈ ಕಾಮೆಂಟ್ ಹೊಸ ಚರ್ಚೆಗೆ ನಾಂದಿ ಹಾಡಬಹುದು.
ಇದೇ ಕಾರ್ಯಕ್ರಮದಲ್ಲಿ ಅಶ್ವಿನ್ ಅವರು ತಮ್ಮ ವೃತ್ತಿಜೀವನದ ಹಲವು ವಿಷಯಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಅಲ್ಲದೆ, ಪ್ರತಿಯೊಬ್ಬರ ಜೀವನದಲ್ಲಿ ಜೀವಮಾನದ ವಿದ್ಯಾರ್ಥಿಯಾಗಿರುವುದು ಬಹಳ ಮುಖ್ಯ. ನಾವು ಕಲಿಯುವವರೆಗೆ ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಕಲಿಕೆ ನಿರಂತರವಾಗಿದ್ದರೆ, ಯಶಸ್ಸು ತನ್ನಿಂದ ತಾನೇ ಬರುತ್ತದೆ ಎಂದು ಅಶ್ವಿನ್ ಹೇಳಿದರು. (ಏಜೆನ್ಸೀಸ್)