ನ್ಯೂಯಾರ್ಕ್: ಕೆಲವು ವರ್ಷಗಳ ಹಿಂದಿನವರೆಗೂ ಅಫ್ಘಾನಿಸ್ತಾನ ತಂಡವನ್ನು ಎಲ್ಲರೂ ಕ್ರಿಕೆಟ್ ಶಿಶುವಿನಂತೆ ನೋಡುತ್ತಿದ್ದರು. ಅದರ ಪ್ರದರ್ಶನವೂ ಕೂಡ ಅಷ್ಟೇ ಕಳಪೆಯಾಗಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಆಫ್ಗಾನ್ ಇಂದು ಅಪಾಯಕಾರಿ ತಂಡವಾಗಿದೆ. ರಶೀದ್ ಖಾನ್, ಮೊಹಮ್ಮದ್ ನಬಿ, ರೆಹಮಾನುಲ್ಲಾ ಗುರ್ಬಾಜ್, ಒಮರ್ಜಾಯ್ ಅವರಂತಹ ಆಟಗಾರರು ವಿಶ್ವ ದರ್ಜೆಯ ಗುಣಮಟ್ಟವನ್ನು ಹೊಂದಿದ್ದಾರೆ. ಇದಕ್ಕಾಗಿ ಸಾಕಷ್ಟು ಶ್ರಮ ಸಹ ಪಟ್ಟಿದ್ದಾರೆ. ಪ್ರಪಂಚದಾದ್ಯಂತ ಸಣ್ಣ ಲೀಗ್‌ಗಳಲ್ಲಿ ಆಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಹೀಗಾಗಿ ಅಫ್ಘಾನ್ ತಂಡ ಇಂದು ಬಲಿಷ್ಠವಾಗಿದೆ. ಕಳೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಶ್ರೀಲಂಕಾದಂತಹ ದೊಡ್ಡ ತಂಡಗಳಿಗೆ ಆಫ್ಘಾನ್ ಆಘಾತ ನೀಡಿತ್ತು. ಪ್ರಸಕ್ತ ಟಿ20 ವಿಶ್ವಕಪ್‌ನಲ್ಲೂ ಅದೇ ಹುಮ್ಮಸ್ಸು ಆಫ್ಗಾನ್ ತಂಡದಲ್ಲಿ ಮುಂದುವರಿದಿದೆ.
ಅಫ್ಘಾನಿಸ್ತಾನ ಲೀಗ್ ಹಂತದಲ್ಲಿ ತೋರಿದ ಪ್ರದರ್ಶನವನ್ನು ಸೂಪರ್-8ರಲ್ಲೂ ನೀಡಲು ತೀರ್ಮಾನಿಸಿದೆ. ಇಂದು (ಜೂನ್ 20) ನಡೆಯಲಿರುವ ಪಂದ್ಯದಲ್ಲಿ ಹೇಗಾದರೂ ಭಾರತವನ್ನು ಸೋಲಿಸುವ ನಿರೀಕ್ಷೆಯಲ್ಲಿದೆ. ಕೆರಿಬಿಯನ್ ಪಿಚ್‌ಗಳಲ್ಲಿ ಗ್ರೂಪ್ ಹಂತದ ಪಂದ್ಯಗಳಿಗೆ ಒಗ್ಗಿಕೊಂಡಿರುವ ಆಫ್ಘಾನ್, ಸೂಪರ್ ಫಾರ್ಮ್‌ನಲ್ಲಿದ್ದು, ರೋಹಿತ್ ತಂಡಕ್ಕೆ ಆಘಾತ ನೀಡಬಹುದು ಎಂದು ಆಫ್ಘಾನ್ನರು ನಂಬಿದ್ದಾರೆ. ಆದರೆ ಆ ತಂಡದ ನಾಯಕ ರಶೀದ್ ಖಾನ್ಗೆ ಭಾರತದ ಬ್ಯಾಟರ್ ಕಂಡರೆ ಭಯ. ಆ ಬ್ಯಾಟರ್ಗೆ ಬೌಲಿಂಗ್ ಮಾಡುವುದು ಕಷ್ಟ ಎಂದು ರಶೀದ್ ಹೇಳಿದ್ದಾರೆ.
ಅಂದಹಾಗೆ ರಶೀದ್ರಲ್ಲಿ ಇಷ್ಟೊಂದು ಭಯ ಹುಟ್ಟಿಸಿರುವ ಆಟಗಾರ ಬೇರೆ ಯಾರೂ ಅಲ್ಲ ಕಿಂಗ್ ಕೊಹ್ಲಿ. ವೇಗಿ ಹಾಗೂ ಸ್ಪಿನ್ ಅನ್ನು ಸಮರ್ಥವಾಗಿ ಎದುರಿಸುವ ವಿರಾಟ್ಗೆ ಬೌಲಿಂಗ್ ಮಾಡುವುದು ತುಂಬಾ ಕಷ್ಟ ಎಂದು ರಶೀದ್ ಹೇಳಿದ್ದಾರೆ.
ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವುದು ತುಂಬಾ ಕಷ್ಟ. ಯಾವುದೇ ಕಠಿಣ ಚೆಂಡನ್ನು ಎದುರಿಸುವ ಸಾಮರ್ಥ್ಯ ಅವರಲ್ಲಿದೆ. ನಾವು ಎಷ್ಟೇ ಚೆನ್ನಾಗಿ ಬೌಲಿಂಗ್ ಮಾಡಿದರೂ ರನ್ ಗಳಿಸುವ ದಾರಿಯನ್ನು ಅವರು ಹೇಗೋ ಹುಡುಕುತ್ತಾರೆ. ಸ್ಕೋರ್ಬೋರ್ಡ್ನಲ್ಲಿ ರನ್ ಮಾಡುವ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡವನ್ನು ಹೆಚ್ಚಿಸುತ್ತಾರೆ. ಆತ ವಿಶ್ವ ದರ್ಜೆಯ ಆಟಗಾರ. ಅವರನ್ನು ತಡೆಯುವುದು ತುಂಬಾ ಕಷ್ಟ ಎಂದು ರಶೀದ್ ಖಾನ್, ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರನ್ನೂ ಆಫ್ಘಾನ್ ನಾಯಕ ರಶೀದ್ ಹೊಗಳಿದ್ದಾರೆ. ಪುಲ್ ಶಾಟ್ ಆಡುವುದರಲ್ಲಿ ಹಿಟ್‌ಮ್ಯಾನ್ ದಿಟ್ಟತನ ತೋರಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಅವರಂತೆ ಪುಲ್ ಶಾಟ್ ಆಡುವ ಮತ್ತೊಬ್ಬ ಬ್ಯಾಟ್ಸ್‌ಮನ್ ಇಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)