Rashid Khan: ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮಧ್ಯೆ ನಡೆಯುತ್ತಿರುವ ಸಂಘರ್ಷವು ತಾರಕಕ್ಕೇರಿದ್ದು, ಇಂದು ಪಾಕ್ ಸೇನೆಯು ಆಫ್ಗನ್ ಮೇಲೆ ವೈಮಾನಿಕ ದಾಳಿಯಲ್ಲಿ ಆಫ್ಘಾನಿಸ್ತಾನದ 8 ನಾಗರಿಕರು ಸಾವನ್ನಪ್ಪಿದರು. ಅವರಲ್ಲಿ ಮೂವರು ಯುವ ಕ್ರಿಕೆಟಿಗರು ಬಲಿಯಾಗಿದ್ದಾರೆ. ಪಾಕಿಸ್ತಾನದ ಕುತಂತ್ರಕ್ಕೆ ಸಿಡಿದೆದ್ದಿರುವ ತಾಲಿಬಾನ್ ರಾಷ್ಟ್ರವು, ಪ್ರತೀಕಾರದ ಸೂಚನೆಯನ್ನು ನೀಡಿದೆ.
ಗಡಿಯ ಸಮೀಪವಿರುವ ಪಕ್ತಿಕಾ ಪ್ರಾಂತ್ಯದಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಸ್ಥಳೀಯ ಕ್ರಿಕೆಟಿಗರು ಸೇರಿದಂತೆ ಒಟ್ಟು 8 ಆಫ್ಗಾನ್ ನಾಗರಿಕರು ಸಾವನ್ನಪ್ಪಿದರು ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಪ್ರಾಂತೀಯ ರಾಜಧಾನಿ ಶರಾನಾದಲ್ಲಿ ಪಂದ್ಯ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ದಾಳಿ ಸಂಭವಿಸಿದೆ. ಮೃತ ಕ್ರಿಕೆಟಿಗರನ್ನು ಕಬೀರ್, ಸಿಬ್ಘತುಲ್ಲಾ ಮತ್ತು ಹರೂನ್ ಎಂದು ಗುರುತಿಸಲಾಗಿದೆ. ಈ ಘಟನೆ ಬೆನ್ನಲ್ಲೇ ತ್ರಿಕೋನ ಸರಣಿಯಲ್ಲಿ ಪಾಕ್ ಜತೆಗೆ ಆಡದಿರಲು ಆಫ್ಗನ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಸರ್ಕಾರದಿಂದ ದೀಪಾವಳಿ ಗಿಫ್ಟ್! ; GST 2.0 ದಿಂದ ಜನರ ಉಳಿತಾಯ ಹೆಚ್ಚು ಎಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಈ ಬೆಳವಣಿಗೆ ಹಿನ್ನೆಲೆ ಇದೀಗ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ರಶೀದ್ ಖಾನ್, ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ಬಯೋದಲ್ಲಿ ಹಾಕಿಕೊಂಡಿದ್ದ ಪಾಕಿಸ್ತಾನ ಸೂಪರ್ ಲೀಗ್ (PSL) ಫ್ರಾಂಚೈಸಿ ಲಾಹೋರ್ ಖಲಂದರ್ಸ್ ಹೆಸರನ್ನು ಡಿಲೀಟ್ ಮಾಡಿದ್ದಾರೆ. ಈ ಮೂಲಕ ತಾವು ಮುಂಬರುವ ದಿನಗಳಲ್ಲಿ ಪಾಕ್ ಆಯೋಜಿಸುವ ಟಿ20 ಲೀಗ್ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
"ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಗರಿಕರ ಸಾವು ಅತೀವ ದುಃಖ ತಂದೊಡ್ಡಿದೆ. ಅಮಾಯಕರನ್ನು ಗುರಿಯಾಗಿಸಿಕೊಳ್ಳುವುದು ಹೇಡಿತನ. ಈ ಅನ್ಯಾಯ ಮತ್ತು ಕಾನೂನುಬಾಹಿರ ಕ್ರಮಗಳು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ. ಇದನ್ನು ಸಹಿಸಲಾಗದು. ಮುಗ್ಧ ಜೀವಗಳ ಅಗಲಿಕೆ ಬೆನ್ನಲ್ಲೇ ಕ್ರಿಕೆಟ್ ಮಂಡಳಿ ತೆಗೆದುಕೊಂಡ ನಿರ್ಧಾರವು ಸ್ವಾಗತಾರ್ಹ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾನು ನಮ್ಮ ಜನರೊಂದಿಗೆ ನಿಲ್ಲುವೆ" ಎಂದು ರಶೀದ್ ತಮ್ಮ 'ಎಕ್ಸ್' ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ,(ಏಜೆನ್ಸೀಸ್).