ಕಾಬೂಲ್: ಅಫ್ಘಾನಿಸ್ತಾನ ತಂಡದ ಸ್ಟಾರ್ ಆಲ್‌ರೌಂಡರ್ ರಶೀದ್ ಖಾನ್ ( Rashid Khan ) ಅವರು ಗುರುವಾರ (ಅ.03) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಧಾನಿ ಕಾಬೂಲ್ನಲ್ಲಿರುವ ಐಷಾರಾಮಿ ಹೋಟೆಲ್ನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆಯಿತು.
ರಶೀದ್ ಖಾನ್ ಮದುವೆಯನ್ನು ಪಶ್ತೂನ್ ಪದ್ಧತಿಗಳ ಪ್ರಕಾರ ನಡೆಸಲಾಯಿತು. ಈ ಸಮಾರಂಭಕ್ಕೆ ಅಫ್ಘಾನಿಸ್ತಾನದ ಎಲ್ಲ ಕ್ರಿಕೆಟಿಗರು ಹಾಜರಾಗಿ, ಶುಭಕೋರಿದರು. ರಶೀದ್ ಮದುವೆಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮಾಹಿತಿ ಪ್ರಕಾರ ರಶೀದ್ ಜೊತೆಗೆ ಆತನ ಮೂವರು ಸಹೋದರರು ಕೂಡ ಮದುವೆಯಾಗಿದ್ದಾರೆ. ರಶೀದ್ ಖಾನ್ ಕೈಹಿಡಿದಿರುವ ವಧು ಯಾರೆಂಬುದರ ಬಗ್ಗೆ ಮಾಹಿತಿ ಇನ್ನು ತಿಳಿದುಬಂದಿಲ್ಲ. ಆದರೆ, ತಮ್ಮ ಸಂಬಂಧಿಯನ್ನೇ ಮದುವೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ರಶೀದ್ ಖಾನ್ ಅವರು ಮದುವೆಯಾಗುವ ಮೂಲಕ ದೊಡ್ಡ ಭರವಸೆಯನ್ನು ಮುರಿದ್ದಾರೆ. ಕೆಲ ವರ್ಷಗಳ ಹಿಂದೆ ರಶೀದ್, ಸಂದರ್ಶನವೊಂದರಲ್ಲಿ ಅಫ್ಘಾನಿಸ್ತಾನ ತಂಡ ವಿಶ್ವಕಪ್ ಗೆದ್ದ ನಂತರ ಮದುವೆಯಾಗುವುದಾಗಿ ಹೇಳಿದ್ದರು. ಆದರೆ, ಇದೀಗ ಆ ಮಾತನ್ನು ಬದಿಗಿಟ್ಟು ಮದುವೆಯಾಗಿದ್ದಾರೆ. ಅಂದಹಾಗೆ ಅಫ್ಘಾನಿಸ್ತಾನ 2024ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿತ್ತು ಎಂಬುದು ಗಮನಾರ್ಹ.
ರಶೀದ್ ಖಾನ್ ಅವರ ಮದುವೆಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಎಲ್ಲ ಸಹ ಕ್ರಿಕೆಟಿಗರು ಭಾಗವಹಿಸಿದ್ದರು. ತಂಡದ ಅನುಭವಿ ಆಲ್‌ರೌಂಡರ್ ಮೊಹಮ್ಮದ್ ನಬಿ ಮತ್ತು ಆಲ್‌ರೌಂಡರ್ ಅಜ್ಮತುಲ್ಲಾ ಒಮರ್ಜಾಯ್ ಕೂಡ ಕಾಣಿಸಿಕೊಂಡರು. ನಜೀಬುಲ್ಲಾ ಜದ್ರಾನ್, ರಹಮತ್ ಶಾ, ಮುಜೀಬ್ ಉರ್ ರೆಹಮಾನ್ ಸೇರಿದಂತೆ ಅನೇಕ ಸ್ಟಾರ್ ಕ್ರಿಕೆಟಿಗರು ಕಾಣಿಸಿಕೊಂಡರು. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಸಿಇಒ ನಸೀಬ್ ಖಾನ್ ಕೂಡ ರಶೀದ್ ಮದುವೆಯಲ್ಲಿ ಪಾಲ್ಗೊಂಡಿದ್ದರು.
ರಶೀದ್ ಖಾನ್ ನಾಯಕತ್ವದಲ್ಲಿ ಅಫ್ಘಾನಿಸ್ತಾನ ತಂಡವು 2024ರ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲ ದೊಡ್ಡ ತಂಡಗಳಿಗೂ ಭಾರಿ ಹೊಡೆತ ನೀಡಿ ಅಚ್ಚರಿಗೊಳಿಸಿತು. ಮೊದಲನೆಯದಾಗಿ, ಅಫ್ಘಾನಿಸ್ತಾನವು ಗುಂಪು ಹಂತದಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸುವ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿತು.
ಇದಾದ ಬಳಿಕ ಸೂಪರ್-8ರಲ್ಲಿ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಅಫ್ಘಾನಿಸ್ತಾನ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು. ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾವನ್ನು ಎದುರಿಸಿತು. ಅಲ್ಲಿ ಆಫ್ಘಾನಿಸ್ತಾನ ತಂಡ ಸೋಲನ್ನು ಎದುರಿಸಬೇಕಾಯಿತು. ಆದರೆ ಅಫ್ಘಾನಿಸ್ತಾನ ಐಸಿಸಿ ಟೂರ್ನಮೆಂಟ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದು ಇದೇ ಮೊದಲು. ಹೀಗಾಗಿ ಆಫ್ಘಾನ್ ತಂಡ ಜಗತ್ತಿನ ಗಮನ ಸೆಳೆಯಿತು. (ಏಜೆನ್ಸೀಸ್)