ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಗಣರಾಜ್ಯೋತ್ಸವದ ದಿನವಾದ ಭಾನುವಾರ ಉದ್ಯಾನನಗರಿಯ ಚಳಿಗಾಲದ ಡರ್ಬಿ, ಬೆಂಗಳೂರು ರ್ಟ್ ಕ್ಲಬ್ನಲ್ಲಿ ಯಶಸ್ವಿಯಾಗಿ ಆಯೋಜನೆಗೊಂಡಿದೆ. ಒಟ್ಟು 1.26 ಕೋಟಿ ರೂಪಾಯಿ ಬಹುಮಾನ ಮೊತ್ತದ ಪ್ರತಿಷ್ಠಿತ "ಎಚ್ಪಿಎಸ್ಎಲ್ ಬೆಂಗಳೂರು ಡರ್ಬಿ'ಯಲ್ಲಿ ಫೇವರಿಟ್ ರೀಡಿಫೈನ್ಡ್ ಕುದುರೆಯನ್ನು ಬದಿಗೊತ್ತಿದ ರಾಂಕ್ವೆಲಿನೊ ಗೆಲುವಿನ ಕೇಕೆ ಹಾಕಿದೆ.
ಬೆಂಗಳೂರು ಟರ್ಫ್ ಕ್ಲಬ್ನಲ್ಲಿ ಸಾವಿರಾರು ರೇಸ್ ಪ್ರಿಯರು, ಕುದುರೆಗಳ ಓಟವನ್ನು ಕಣ್ತುಂಬಿಕೊಂಡರು. ಎಂದಿನಂತೆ ಈ ಬಾರಿಯೂ ಹೆಚ್ಚು ಗ್ಲಾಮರಸ್ ಬೆಡಗಿಯರು ಪಾಲ್ಗೊಂಡು ರೇಸ್ಗೆ ಮೆರುಗು ನೀಡಿದರು. ಆಕರ್ಷಕ ಉಡುಗೆಗಳನ್ನು ತೊಟ್ಟು ಕ್ಯಾಮರಾಗಳಿಗೆ ಪೋಸ್ ನೀಡಿ, ನೆಚ್ಚಿನ ಕುದುರೆ ಓಡುವಾಗ ಪ್ರೋತ್ಸಾಹಿಸಿದರು.
ಜಾಕಿ ಎ. ಸಂದೇಶ್ ಸವಾರಿ ನಡೆಸಿದ ಮತ್ತು ಡಿ. ಬೈರಾಮ್ಜಿ ತರಬೇತಿ ನೀಡಿದ ರಾಂಕ್ವೆಲಿನೊ, 9 ಕುದುರೆಗಳ ಸ್ಪರ್ಧೆಯಲ್ಲಿ ಮೊದಲನೆಯದಾಗಿ ಓಟ ಮುಗಿಸಿ ತನ್ನ ಮಾಲೀಕರಿಗೆ 61.78 ಲಕ್ಷ ರೂ. ನಗದು ಬಹುಮಾನ ಮತ್ತು 1.25 ಲಕ್ಷ ರೂ. ಬೆಲೆಬಾಳುವ ಮಿರುಗುವ ಟ್ರೋಫಿಯನ್ನು ಗೆದ್ದುಕೊಟ್ಟಿತು. ಫೇವರಿಟ್ ರೀಡಿಫೈನ್ಡ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಮಾನ್ಸ ಮೂಸ 3ನೇ ಸ್ಥಾನ ಗಳಿಸಿತು.
ಚಿತ್ರಗಳು: ರಾಘವೇಂದ್ರ ಸಿ.