ಕ್ರೀಡೆ

ಕರ್ನಾಟಕ-ಬಂಗಾಳ ಸೆಮಿಫೈನಲ್ ಫೈಟ್: ಇಂದಿನಿಂದ ಈಡನ್ ಗಾರ್ಡನ್ಸ್​ನಲ್ಲಿ ಹಣಾಹಣಿ

ಕೋಲ್ಕತ: ದೇಶೀಯ ಕ್ರಿಕೆಟ್ ಋತುವಿನಲ್ಲಿ ಮೂರನೇ ಬಾರಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸುವ ಹಂಬಲದಲ್ಲಿರುವ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಶನಿವಾರ ಆರಂಭವಾಗಲಿರುವ 86ನೇ ಆವೃತ್ತಿಯ ರಣಜಿ ಟ್ರೋಫಿ ಸೆಮಿಫೈನಲ್ ಹಣಾಹಣಿಗೆ ಸಜ್ಜಾಗಿದೆ. ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಪ್ರತಿಷ್ಠಿತ ಕದನದಲ್ಲಿ ಆತಿಥೇಯ ಬಂಗಾಳ ತಂಡವನ್ನು ಎದುರಿಸಲಿದೆ. ರಾಷ್ಟ್ರೀಯ ತಂಡದ ಸದಸ್ಯ ಕೆಎಲ್ ರಾಹುಲ್ ಆಗಮನದಿಂದಾಗಿ ಬ್ಯಾಟಿಂಗ್ ವಿಭಾಗದ ಬಲ ಹೆಚ್ಚಿಸಿಕೊಂಡಿರುವ ಕರುಣ್ ನಾಯರ್, ಆತಿಥೇಯರ ಸವಾಲು ಹಿಮ್ಮೆಟ್ಟಿಸಿ 15ನೇ ಬಾರಿ ರಣಜಿ ಫೈನಲ್​ಗೇರುವ ತವಕದಲ್ಲಿದೆ.

ಎರಡು ವರ್ಷಗಳ ಹಿಂದಷ್ಟೇ ಇದೇ ಮೈದಾನದಲ್ಲಿ ನಡೆದ ಸೆಮೀಸ್ ಹೋರಾಟದಲ್ಲಿ ವಿದರ್ಭ ಎದುರು ಕೇವಲ 5 ರನ್​ನಿಂದ ಕರ್ನಾಟಕ ಸೋಲನುಭವಿಸಿತ್ತು. ಕಳೆದ ಆವೃತ್ತಿಯ ಸೆಮೀಸ್​ನಲ್ಲಿ ಕರ್ನಾಟಕ ತಂಡ ತವರು ನೆಲ ಬೆಂಗಳೂರಿನಲ್ಲಿ ಅಂಪೈರ್​ಗಳ ಕೆಟ್ಟ ತೀರ್ಪಗಳ ಕಾರಣದಿಂದಾಗಿ ಸೌರಾಷ್ಟ್ರ ವಿರುದ್ಧ ಎಡವಿತ್ತು. ಈ ಬಾರಿ ಸೆಮಿಫೈನಲ್ಸ್​ಗೆ ಅಂಪೈರ್ ತೀರ್ಪು ಪರಾಮರ್ಶೆ ಪದ್ಧತಿ (ಡಿಆರ್​ಎಸ್) ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ತಂಡ ಯಾವುದೇ ಅಡೆತಡೆಯಿಲ್ಲದೆ ಫೈನಲ್​ಗೆ ರಹದಾರಿ ಪಡೆಯುವ ವಿಶ್ವಾಸದಲ್ಲಿದೆ. 2014-15ನೇ ಸಾಲಿನಲ್ಲಿ ಕಡೇ ಬಾರಿಗೆ ಫೈನಲ್ ಪ್ರವೇಶಿಸಿದ್ದ ಕರ್ನಾಟಕ ತಂಡ, 5 ವರ್ಷಗಳ ಬಳಿಕ ಮತ್ತೆ ಪ್ರಶಸ್ತಿ ಸನಿಹ ತಲುಪುವ ಹಂಬಲದಲ್ಲಿದೆ. ಉಭಯ ತಂಡಗಳು 2015-16ರಲ್ಲಿ ಕಡೇ ಬಾರಿಗೆ ಮುಖಾಮುಖಿಯಾಗಿದ್ದವು, ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು. ಬಂಗಾಳ ತಂಡ 2006-07ನೇ ಸಾಲಿನಲ್ಲಿ ಕಡೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿತ್ತು. ಟೂರ್ನಿಯ ಮತ್ತೊಂದು ಸೆಮಿಫೈನಲ್​ನಲ್ಲಿ ಗುಜರಾತ್ ಹಾಗೂ ಸೌರಾಷ್ಟ್ರ ತಂಡಗಳು ರಾಜ್​ಕೋಟ್​ನಲ್ಲಿ ಎದುರಾಗಲಿವೆ. -ಏಜೆನ್ಸೀಸ್

33- ಕರ್ನಾಟಕ 33ನೇ ಬಾರಿಗೆ ರಣಜಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಇದುವರೆಗೂ ಆಡಿರುವ 32 ಸೆಮೀಸ್​ನಲ್ಲಿ 14 ಬಾರಿ ಫೈನಲ್​ಗೇರಿದೆ. ಇದರಲ್ಲಿ 8 ಬಾರಿ ಜಯ ದಾಖಲಿಸಿದ್ದರೆ, 6 ಬಾರಿ ಇನಿಂಗ್ಸ್ ಮುನ್ನಡೆಯೊಂದಿಗೆ ಈ ಸಾಧನೆ ಮಾಡಿದೆ.

05- ರಣಜಿಯಲ್ಲಿ ಉಭಯ ತಂಡಗಳು 5ನೇ ಬಾರಿಗೆ ಸೆಮೀಸ್​ನಲ್ಲಿ ಎದುರಾಗುತ್ತಿವೆ. 1941-42ರಲ್ಲಿ ಕರ್ನಾಟಕ ತಂಡ 17 ರನ್​ಗಳಿಂದ ಗೆದ್ದಿದ್ದರೆ, ಬಳಿಕ ಸತತ 3 ಪಂದ್ಯಗಳಲ್ಲೂ ಬಂಗಾಳವೇ ಜಯಿಸಿದೆ.

ಆತಿಥೇಯರಿಗೆ ಬೌಲರ್​ಗಳೇ ಆಧಾರ

ಬಂಗಾಳದ ಇದುವರೆಗಿನ ಯಶಸ್ಸಿನಲ್ಲೂ ಬೌಲರ್​ಗಳದ್ದೇ ಪಾರುಪತ್ಯ. ಅಕ್ಷದೀಪ್ ಹಾಗೂ ಮುಖೇಶ್ ಕುಮಾರ್ ಜೋಡಿ 46 ವಿಕೆಟ್ ಹಂಚಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಮಾಜಿ ನಾಯಕ ಮನೋಜ್ ತಿವಾರಿ 1 ತ್ರಿಶತಕ ಸಹಿತ 651 ರನ್ ಕಲೆಹಾಕಿದ್ದು, ಮಧ್ಯಮ ಕ್ರಮಾಂಕದಲ್ಲಿ ಶಕ್ತಿಯಾಗಿದ್ದಾರೆ. ತವರಿನ ಹೊರಗೆ ಭರ್ಜರಿ ನಿರ್ವಹಣೆ ತೋರಿರುವ ಬಂಗಾಳ, ಲೀಗ್ ಹಂತದಲ್ಲಿ ಈಡನ್​ನಲ್ಲಿ ಆಡಿದ 3 ಪಂದ್ಯಗಳಲ್ಲೂ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಕಳೆದ 13 ವರ್ಷಗಳಿಂದ ಮರೀಚಿಕೆಯಾಗಿರುವ ಪ್ರಶಸ್ತಿ ಹಂತಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸಲಿದೆ.

ಬಲ ತುಂಬಲಿರುವ ಕೆಎಲ್ ರಾಹುಲ್

ನ್ಯೂಜಿಲೆಂಡ್ ಪ್ರವಾಸದ ಟಿ20 ಹಾಗೂ ಏಕದಿನ ಸರಣಿಯಲ್ಲಿ ಮಿಂಚಿದ್ದ ಕೆಎಲ್ ರಾಹುಲ್ ಸೇರ್ಪಡೆಯಿಂದಾಗಿ ತಂಡದ ಆಯ್ಕೆಯೇ ದೊಡ್ಡ ತಲೆನೋವಾಗಿದೆ. ಜಮ್ಮು-ಕಾಶ್ಮೀರ ಎದುರು ಆರಂಭಿಕ ಎರಡು ದಿನದಾಟ ರದ್ದುಗೊಂಡಿದ್ದರೂ ಕೇವಲ ಎರಡೂವರೆ ದಿನ ಜಯ ದಾಖಲಿಸಿದ್ದ ಕರ್ನಾಟಕ ತಂಡದ ಇದುವರೆಗಿನ ಯಶಸ್ಸಿನಲ್ಲಿ ಬೌಲರ್​ಗಳದ್ದೇ ಮೇಲುಗೈ ಆಗಿದೆ. 20ರ ಹರೆಯದ ದೇವದತ್ ಪಡಿಕಲ್, ರಣಜಿ ಟ್ರೋಫಿಯಲ್ಲಿ ಇದುವರೆಗೆ ದೊಡ್ಡ ಮೊತ್ತ ಬಾರಿಸಿಲ್ಲ. ಪಂದ್ಯದಿಂದ ಪಂದ್ಯಕ್ಕೆ ಅಸ್ಥಿರ ಫಾಮ್ರ್ ಕೊರತೆ ಎದುರಿಸುತ್ತಿದ್ದಾರೆ. ವಿಜಯ್ ಹಜಾರೆ (609) ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ (580) ಟಿ20 ಗೆಲುವಿನಲ್ಲಿ ಇವರ ಪಾತ್ರ ದೊಡ್ಡದು. ರಾಹುಲ್ ಆಗಮನದಿಂದಾಗಿ ಪಡಿಕಲ್ ಅಥವಾ ಸಮರ್ಥ್ ಕೈ ಬಿಡುವುದು ಅನಿವಾರ್ಯ. ಐದು ದಿನದ ಪಂದ್ಯವಾಗಿರುವುದರಿಂದ ರಾಹುಲ್​ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡುವುದು ಕಷ್ಟಸಾಧ್ಯ. ನಾಯಕ ಕರುಣ್ ನಾಯರ್ ಫಾಮ್ರ್ ಕೂಡ ಚಿಂತಕರ ಛಾವಡಿಯನ್ನು ಚಿಂತೆಗೀಡು ಮಾಡಿದೆ. ಇದುವರೆಗಿನ ಯಶಸ್ಸಿ ಸಿಂಹ ಪಾಲು ಹೊಂದಿರುವ ಬೌಲಿಂಗ್ ವಿಭಾಗವೇ ತಂಡದ ಪ್ರಬಲ ಅಸ್ತ್ರವಾಗಿದೆ.

ರಾಹುಲ್ ಆಗಮನದಿಂದ ತಂಡದ ವಿಶ್ವಾಸ ಇಮ್ಮಡಿಯಾಗಿದೆ. ತಂಡದ ಯೋಜನೆ ದೃಷ್ಟಿಯಿಂದಲೂ ಅವರು ನೆರವಾಗಲಿದ್ದಾರೆ. ಅವರೊಂದಿಗೆ ಹೆಚ್ಚು ಕ್ರಿಕೆಟ್ ಆಡಿರುವುದರಿಂದ ಯೋಜನೆ ರೂಪಿಸಲು ಸಹಾಯವಾಗುತ್ತದೆ. ಸತತ 3ನೇ ಬಾರಿ ಸೆಮೀಸ್​ನಲ್ಲಿ ಆಡುತ್ತಿದ್ದು, ಈ ಬಾರಿ ಇನ್ನೊಂದು ಹೆಜ್ಜೆ ಮುನ್ನಡೆಯುವ ವಿಶ್ವಾಸದಲ್ಲಿದ್ದೇವೆ. | ಕರುಣ್ ನಾಯರ್ ಕರ್ನಾಟಕ ತಂಡದ ನಾಯಕ

ಮುಖಾಮುಖಿ: 15 ಕರ್ನಾಟಕ: 4

ಬಂಗಾಳ: 4 ಡ್ರಾ : 7

ಕೋಲ್ಕತದಲ್ಲಿ ಕರ್ನಾಟಕ: 8

ಗೆಲುವು: 2 ಸೋಲು: 3 ಡ್ರಾ: 3

ಪಂದ್ಯ ಆರಂಭ: ಬೆಳಗ್ಗೆ 9.15 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್

ಅಂಕಿ ಅಂಶ: ಚನ್ನಗಿರಿ ಕೇಶವಮೂರ್ತಿ