ಜಮ್ಮು: ಸ್ಪಿನ್ನರ್ ಕೆ.ಗೌತಮ್ (54ಕ್ಕೆ 7) ಮಾರಕ ದಾಳಿ ನೆರವಿನಿಂದ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಆತಿಥೇಯ ಜಮ್ಮು-ಕಾಶ್ಮೀರ ತಂಡವನ್ನು 167 ರನ್ಗಳಿಂದ ಮಣಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿತು. ಮಳೆ, ಮಂದ ಬೆಳಕು, ಮೈದಾನದ ತೇವಾಂಶದಿಂದಾಗಿ ಆರಂಭಿಕ ಎರಡು ದಿನದಾಟಕ್ಕೆ ಅಡಚಣೆಯಾಗಿದ್ದರಿಂದ ನಿರಾಸೆ ಅನುಭವಿಸಿದ್ದ ಕರುಣ್ ನಾಯರ್ ಪಡೆ, ಅಂತಿಮ ದಿನದಾಟದಲ್ಲಿ ಗೆಲುವಿನ ಸಂಭ್ರಮದಲ್ಲಿ ಮುಳುಗಿತು. ಒಂದು ಹಂತದಲ್ಲಿ ಇನಿಂಗ್ಸ್ ಮುನ್ನಡೆಗೂ ಪರದಾಡಿದ್ದ ಪ್ರವಾಸಿಗರು ಭರ್ಜರಿ ಗೆಲುವಿನೊಂದಿಗೆ ಟೂರ್ನಿಯಲ್ಲಿ ಸತತ 3ನೇ ಬಾರಿಗೆ ಉಪಾಂತ್ಯಕ್ಕೇರಿದರು.
ಗಾಂಧಿ ಸ್ಮಾರಕ ವಿಜ್ಞಾನ ಕಾಲೇಜು ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ 4 ವಿಕೆಟ್ಗೆ 245 ರನ್ಗಳಿಂದ ಅಂತಿಮ ದಿನದಾಟ ಆರಂಭಿಸಿದ ಕರ್ನಾಟಕ, ಕೆವಿ ಸಿದ್ದಾರ್ಥ್ (98 ರನ್, 177 ಎಸೆತ, 10 ಬೌಂಡರಿ, 2 ಸಿಕ್ಸರ್) ಶತಕ ವಂಚಿತ ಬ್ಯಾಟಿಂಗ್ ನಡುವೆಯೂ ಅಬಿದ್ ಮುಷ್ತಾಕ್ (83ಕ್ಕೆ 6) ಮಾರಕ ದಾಳಿಗೆ ನಲುಗಿ 316 ರನ್ಗಳಿಗೆ ಆಲೌಟ್ ಆಯಿತು. ಇದರಿಂದ 331 ರನ್ ಗುರಿ ಪಡೆದ ಜಮ್ಮು-ಕಾಶ್ಮೀರ ತಂಡ 163 ರನ್ಗಳಿಗೆ ಸರ್ವಪತನ ಕಂಡಿತು. ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 206 ರನ್ ಗಳಿಸಿದ್ದರೆ, ಜಮ್ಮು-ಕಾಶ್ಮೀರ 192 ರನ್ ಗಳಿಸಿ ಪ್ರವಾಸಿ ತಂಡಕ್ಕೆ 14 ರನ್ಗಳ ಅಲ್ಪಮುನ್ನಡೆ ಬಿಟ್ಟುಕೊಟ್ಟಿತ್ತು. ಇನಿಂಗ್ಸ್ ಮುನ್ನಡೆಯಿಂದಾಗಿ ಕರ್ನಾಟಕಕ್ಕೆ 4ನೇ ದಿನವೇ ಸೆಮಿಫೈನಲ್ ಸ್ಥಾನ ಬಹುತೇಕ ಖಚಿತಗೊಂಡಿತ್ತು. -ಪಿಟಿಐ/ಏಜೆನ್ಸೀಸ್
ಸೆಮೀಸ್ಗೆ ಕೆಎಲ್ ರಾಹುಲ್ ಬಲ
ಸ್ಟಾರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಸೆಮಿಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಜಮ್ಮು-ಕಾಶ್ಮೀರ ಎದುರು ಜಯ ದಾಖಲಿಸಿದ ಬೆನ್ನಲ್ಲೇ ಕೆಎಸ್ಸಿಎ ಸೋಮವಾರ ಸೆಮೀಸ್ ಪಂದ್ಯಕ್ಕೆ ತಂಡ ಪ್ರಕಟಿಸಿತು. ರಾಹುಲ್ ಆಗಮನದಿಂದ ಆಲ್ರೌಂಡರ್ ಪವನ್ ದೇಶಪಾಂಡೆ ತಂಡದಿಂದ ಹೊರಬಿದ್ದಿದ್ದಾರೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಸೆಮಿಫೈನಲ್ನಲ್ಲಿ ಬಂಗಾಳ ಎದುರಾಳಿ
ಕರ್ನಾಟಕ ತಂಡಕ್ಕೆ ಫೆಬ್ರವರಿ 29ರಂದು ಕೋಲ್ಕತದಲ್ಲಿ ಆರಂಭವಾಗ ಲಿರುವ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಬಂಗಾಳ ತಂಡ ಎದುರಾಗಲಿದೆ. ಬಂಗಾಳ ತಂಡ ಒಡಿಶಾ ತಂಡವನ್ನು ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಹಿಂದಿಕ್ಕಿತು. ರಾಜ್ಕೋಟ್ನಲ್ಲಿ ನಡೆಯಲಿರುವ ಮತ್ತೊಂದು ಸೆಮಿಫೈನಲ್ನಲ್ಲಿ ಗುಜರಾತ್-ಸೌರಾಷ್ಟ್ರ ಮುಖಾಮುಖಿಯಾಗಲಿವೆ.
ಗೌತಮ್ ಸ್ಪಿನ್ ದಾಳಿಗೆ ಜಮ್ಮು-ಕಾಶ್ಮೀರ ಪರೇಡ್
ಕೊನೆಯ ದಿನದಾಟದಲ್ಲಿ ಕರ್ನಾಟಕ ನೀಡಿದ ಅಸಾಧ್ಯ ಮೊತ್ತ ಬೆನ್ನಟ್ಟಿದ ಆತಿಥೇಯ ತಂಡಕ್ಕೆ ಕೆ.ಗೌತಮ್ ಆಘಾತ ನೀಡಿದರು. ಬಿರುಸಿನ ಹೊಡೆತಕ್ಕೆ ಮುಂದಾದ ಜಮ್ಮು-ಕಾಶ್ಮೀರ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಕೆ.ಗೌತಮ್ ದಾಳಿಗೆ ಜಮ್ಮು-ಕಾಶ್ಮೀರ ತಂಡ ನಾಟಕೀಯ ಕುಸಿತ ಕಂಡಿತು. ಮೊದಲ ಇನಿಂಗ್ಸ್ ಅರ್ಧಶತಕ ಸಾಧಕ ಶುಭಂ ಖಜೂರಿಯಾ (30) ಆರಂಭಿಕ ಹಂತದಲ್ಲಿ ಕೆಲಕಾಲ ಪ್ರತಿರೋಧ ವ್ಯಕ್ತಪಡಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ಮನ್ಗಳು ಸಂಪೂರ್ಣ ವಿಫಲರಾದರು. ಗೌತಮ್ ಮಾರಕ ದಾಳಿಯಿಂದಾಗಿ ಕೇವಲ 98 ರನ್ಗಳಿಗೆ ಆತಿಥೇಯ 7 ವಿಕೆಟ್ ಕೈಚೆಲ್ಲಿತು. ಅಕಿಬ್ ನಬಿ (26), ಮುಜ್ತಾಬ ಯೂಸುಫ್ (11) ಹಾಗೂ ಉಮರ್ ನಜೀರ್ (24) ಕೆಲಕಾಲ ಪ್ರತಿರೋಧ ವ್ಯಕ್ತಪಡಿಸಿದರು. ಅಕಿಬ್-ಉಮರ್ ಜೋಡಿ ಕಡೇ ವಿಕೆಟ್ಗೆ 32 ರನ್ ಪೇರಿಸಿ ತಂಡವನ್ನು ಹೀನಾಯ ಸೋಲಿನಿಂದ ಪಾರು ಮಾಡಿತು.
ಶತಕವಂಚಿತ ಸಿದ್ಧಾರ್ಥ್
ಮೊದಲ ಇನಿಂಗ್ಸ್ ಮುನ್ನಡೆಯ ಬಲದೊಂದಿಗೆ ಅಂತಿಮ ದಿನದಾಟ ಮುಂದುವರಿಸಿದ ಕರ್ನಾಟಕ ತಂಡಕ್ಕೆ ಅಬಿದ್ ಮುಷ್ತಾಕ್ ಕಡಿವಾಣ ಹಾಕಿದರು. ಕ್ರಮವಾಗಿ 75 ಹಾಗೂ 9 ರನ್ಗಳಿಂದ ಇನಿಂಗ್ಸ್ ಮುಂದುವರಿಸಿದ ಕೆವಿ ಸಿದ್ದಾರ್ಥ್ ಹಾಗೂ ಶರತ್ ಶ್ರೀನಿವಾಸ್ ಜೋಡಿ ಆರಂಭಿಕ ಹಂತದಲ್ಲಿ ಎಚ್ಚರಿಕೆಯ ಆಟವಾಡಿತು. ಮೊದಲ ಇನಿಂಗ್ಸ್ ನಲ್ಲೂ ಅರ್ಧಶತಕದ ಮೂಲಕ ತಂಡಕ್ಕೆ ಆಸರೆಯಾಗಿದ್ದ ಕೆವಿ ಸಿದ್ದಾರ್ಥ್ ಮತ್ತೊಮ್ಮೆ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದರು. ಆದರೆ, ಕೇವಲ 2 ರನ್ಗಳಿಂದ ಶತಕ ತಪ್ಪಿಸಿಕೊಂಡರು. ಭಾನುವಾರದ ಮೊತ್ತಕ್ಕೆ 30 ರನ್ ಪೇರಿಸಿ ಈ ಜೋಡಿ ಬೇರ್ಪಟ್ಟಿತು. ಇದರೊಂದಿಗೆ ಕರ್ನಾಟಕ ತಂಡದ ಕುಸಿತ ಕೂಡ ಆರಂಭಗೊಂಡಿತು. ಭರವಸೆಯ ಕೆ.ಗೌತಮ್ (4) ಹಾಗೂ ಸುಚಿತ್ (4) ವಿಫಲರಾದರು. ಕರ್ನಾಟಕ ತಂಡ 71 ರನ್ಗಳಿಗೆ ಕೊನೆಯ 5 ವಿಕೆಟ್ ಕೈಚೆಲ್ಲಿ ಭೋಜನ ವಿರಾಮಕ್ಕೂ ಮೊದಲೇ ಸರ್ವಪತನ ಕಂಡಿತು.