ಕ್ರೀಡೆ

ಮುನ್ನಡೆಗಾಗಿ ಕರ್ನಾಟಕ ಹೋರಾಟ: ಬೃಹತ್ ಮೊತ್ತಕ್ಕೆ ನೆರವಾದ ಗೌತಮ್ ಶ್ರೇಯಸ್, ಮಧ್ಯಪ್ರದೇಶಕ್ಕೆ ಆರಂಭಿಕ ಆಘಾತ

ಶಿವಮೊಗ್ಗ: ಆಲ್ರೌಂಡರ್​ಗಳಾದ ಕೆ.ಗೌತಮ್ (82 ರನ್, 68 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ಶ್ರೇಯಸ್ ಗೋಪಾಲ್ (50 ರನ್, 87 ಎಸೆತ, 7 ಬೌಂಡರಿ) ಕೆಳ ಕ್ರಮಾಂಕದಲ್ಲಿ ತೋರಿದ ಬಿರುಸಿನ ಬ್ಯಾಟಿಂಗ್ ಫಲವಾಗಿ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ 8ನೇ ಸುತ್ತಿನ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿತು. ಬಳಿಕ ಎದುರಾಳಿ ಮಧ್ಯಪ್ರದೇಶ ತಂಡಕ್ಕೆ ಆರಂಭಿಕ ಆಘಾತ ನೀಡಿರುವ ಕರುಣ್ ನಾಯರ್ ಪಡೆ ಇನಿಂಗ್ಸ್ ಮುನ್ನಡೆಯ ಉತ್ಸಾಹದಲ್ಲಿದೆ.

ನವುಲೆಯ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3 ವಿಕೆಟ್​ಗೆ 233 ರನ್​ಗಳಿಂದ 2ನೇ ದಿನವಾದ ಬುಧವಾರ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡ 426 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಪ್ರವಾಸಿ ಮಧ್ಯಪ್ರವೇಶ ತಂಡ ದಿನದಂತ್ಯಕ್ಕೆ 2 ವಿಕೆಟ್​ಗೆ 60 ರನ್ ಕಲೆಹಾಕಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನೂ 366 ರನ್ ಪೇರಿಸಬೇಕಿದೆ.

ಮಧ್ಯಪ್ರದೇಶ ತಂಡಕ್ಕೆ ಆರಂಭಿಕ ನಿಯಂತ್ರಣ

ಆತಿಥೇಯ ಕರ್ನಾಟಕದ ಬೃಹತ್ ಮೊತ್ತದ ಬೆನ್ನಟ್ಟುವ ಹಾದಿಯಲ್ಲಿ ಎದುರಾಳಿ ಮಧ್ಯಪ್ರದೇಶಕ್ಕೆ ಕರ್ನಾಟಕದ ಬೌಲರ್​ಗಳು ಆರಂಭಿಕ ಆಘಾತ ನೀಡಿದರು. ಇನಿಂಗ್ಸ್​ನ ಎರಡನೇ ಓವರ್​ನಲ್ಲಿ ಆರಂಭಿಕ ರಜತ್ ಪಾಟೀದಾರ್ ಶೂನ್ಯಕ್ಕೆ ಪ್ರತೀಕ್ ಜೈನ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ಬಳಿಕ ರಕ್ಷಣಾತ್ಮಕ ನಿರ್ವಹಣೆಗೆ ಮುಂದಾದ ಮತ್ತೋರ್ವ ಆರಂಭಿಕ ರಮೀಜ್ ಖಾನ್ (22ರನ್, 91 ಎಸೆತ, 4 ಬೌಂಡರಿ) 28ನೇ ಓವರ್​ನಲ್ಲಿ ಅಭಿಮನ್ಯು ಮಿಥುನ್ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಇನಿಂಗ್ಸ್ ಮುನ್ನಡೆ ಗಳಿಸುವ ವಿಶ್ವಾಸದಲ್ಲಿರುವ ಕರ್ನಾಟಕ ತಂಡ ಪ್ರವಾಸಿ ತಂಡವನ್ನು ಆರಂಭಿಕ ಹಂತದಲ್ಲೇ ಒತ್ತಡಕ್ಕೆ ಸಿಲುಕಿಸಲು ಯಶಸ್ವಿಯಾಗಿದೆ. ಯಶ್ ದುಬೆ (17), ನಾಯಕ ಶುಭಂ ಶರ್ಮ(6) ಕ್ರೀಸ್​ನಲ್ಲಿದ್ದಾರೆ.

ಬಲ ತುಂಬಿದ ಕೆ.ಗೌತಮ್ ಶ್ರೇಯಸ್ಸಿನಾಟ

ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ಶರತ್ ಶ್ರೀನಿವಾಸ್ ನಿರ್ಗಮನದ ಬಳಿಕ ಶ್ರೇಯಸ್ ಗೋಪಾಲ್​ಗೆ ಜತೆಯಾದ ಕೆ.ಗೌತಮ್ 7ನೇ ವಿಕೆಟ್​ಗೆ ಅದ್ಭುತ ಇನಿಂಗ್ಸ್ ಕಟ್ಟಿದರು. ಈ ಜೋಡಿ ಎದುರಿಸಿದ 108 ಎಸೆತಗಳಲ್ಲಿ 126 ರನ್​ಗಳ ಜೊತೆಯಾಟದ ಮೂಲಕ ಏಕದಿನ ಶೈಲಿಯಲ್ಲಿ ರನ್​ಹೊಳೆ ಹರಿಸಿತು. ಟೂರ್ನಿಯುದ್ದಕ್ಕೂ ರನ್​ಗಳಿಸಲು ಪರದಾಡುತ್ತಿದ್ದ ಶ್ರೇಯಸ್ ಗೋಪಾಲ್ ಕಡೆಗೂ ಫಾಮ್ರ್ ಕಂಡುಕೊಂಡರು. ಈ ಜೋಡಿಯ ಅಬ್ಬರದ ಫಲವಾಗಿ ತಂಡದ ಮೊತ್ತ 400ರ ಗಡಿ ದಾಟಿತು. ಶ್ರೇಯಸ್ ಗೋಪಾಲ್ ನಿರ್ಗಮನದ ಬೆನ್ನ ಹಿಂದೆಯೇ ಕರ್ನಾಟಕ ತಂಡ ಕುಸಿತ ಕಂಡಿತು. ಕಡೇ 18 ರನ್​ಗಳ ಅಂತರದಲ್ಲಿ ಕೆಳಕ್ರಮಾಂಕದ 4 ವಿಕೆಟ್​ಗಳು ಪತನ ಕಂಡವು.

ಸಮರ್ಥ್-ಸಿದ್ಧಾರ್ಥ್​ಗೆ ಕಡಿವಾಣ

ಕರ್ನಾಟಕ ತಂಡಕ್ಕೆ ದಿನದ ಆರಂಭದಲ್ಲೇ ಪ್ರವಾಸಿ ತಂಡದ ವೇಗಿ ರವಿ ಯಾದವ್ (61ಕ್ಕೆ 3) ಆಘಾತ ನೀಡಿದರು. ಕ್ರಮವಾಗಿ 105 ರನ್ ಮತ್ತು 62 ರನ್​ಗಳಿಂದ ದಿನದಾಟ ಆರಂಭಿಸಿದ ಆರ್.ಸಮರ್ಥ್ (108) ಹಾಗೂ ಕೆವಿ ಸಿದ್ದಾರ್ಥ್ ಜೋಡಿ ದಿನದ ಆರಂಭದಲ್ಲೇ ಬೇರ್ಪಟ್ಟಿತು. ತಂಡದ ಮಂಗಳವಾರದ ಮೊತ್ತಕ್ಕೆ ಕೇವಲ 11 ರನ್ ಪೇರಿಸಲಷ್ಟೇ ಈ ಜೋಡಿ ಶಕ್ತವಾಯಿತು. ಇದರೊಂದಿಗೆ ಸಿದ್ಧಾರ್ಥ್ ಹಾಗೂ ಸಮರ್ಥ್ ನಡುವಿನ 161 ರನ್ ಜೊತೆಯಾಟ ಅಂತ್ಯವಾಯಿತು. ಆರ್.ಸಮರ್ಥ್ 108 ರನ್ ಗಳಿಸಿದಾಗ ರವಿ ಯಾದವ್ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಇದಾದ ಬಳಿಕ ಶರತ್ ಶ್ರೀನಿವಾಸ್ (15) ಹಾಗೂ ಶ್ರೇಯಸ್ ಗೋಪಾಲ್ 6ನೇ ವಿಕೆಟ್​ಗೆ 37 ರನ್ ಕಲೆಹಾಕಿದರು.

| ಅರವಿಂದ ಅಕ್ಲಾಪುರ