ಪುಣೆ: ಗೋವಾ ವಿರುದ್ಧ ಇನಿಂಗ್ಸ್ ಗೆಲುವಿನೊಂದಿಗೆ ಬೋನಸ್ ಅಂಕ ಸಂಪಾದಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ರೆಡ್‌ಬಾಲ್ ಟೂರ್ನಿಯಲ್ಲಿ ಶನಿವಾರ ಆರಂಭವಾಗಲಿರುವ 4ನೇ ಸುತ್ತಿನ ಪಂದ್ಯದಲ್ಲಿ ಆತಿಥೇಯ ಮಹಾರಾಷ್ಟ್ರ ಎದುರು ಕಣಕ್ಕಿಳಿಯಲಿದೆ. ಸತತ 2ನೇ ಜಯದ ನಿರೀಕ್ಷೆಯಲ್ಲಿರುವ ಮಯಾಂಕ್ ಅಗರ್ವಾಲ್ ಪಡೆ ಎಲೀಟ್ ಬಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವನ್ನೂ ಹೊಂದಿದೆ.
ಎಂಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮಹಾರಾಷ್ಟ್ರ ತಂಡಕ್ಕೆ ಋತುರಾಜ್ ಗಾಯಕ್ವಾಡ್, ಪೃಥ್ವಿ ಷಾ, ವಿಕ್ಕಿ ಒಸ್ವಾಲ್‌ರಂಥ ತಾರೆಯರ ಬಲವಿದೆ. ಕರ್ನಾಟಕ ತಂಡ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ 2 ಡ್ರಾ, 1 ಗೆಲುವಿನೊಂದಿಗೆ ಒಟ್ಟು 11 ಅಂಕ ಸಂಪಾದಿಸಿ ಬಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಗೋವಾ ಸಹ 11 ಅಂಕ ಹೊಂದಿದ್ದು, ರನ್‌ರೇಟ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಮಹಾರಾಷ್ಟ್ರ ತಂಡ 1 ಜಯ, 2 ಡ್ರಾ ಲಿತಾಂಶದೊಂದಿಗೆ 10 ಅಂಕ ಸಂಪಾದಿಸಿದೆ. ಹಾಲಿ ಆವೃತ್ತಿಯಲ್ಲಿ ತವರಿನಾಚೆ ಮೊದಲ ಜಯ ಕಂಡಿರುವುದು ಮಯಾಂಕ್ ಬಳಗದ ಆತ್ಮಸ್ಥೈರ್ಯ ಹೆಚ್ಚಿಸಿದೆ. ಎರಡನೇ ಹಂತಕ್ಕೂ ಮುನ್ನ ಎದುರಾಳಿ ನೆಲದಲ್ಲಿ ಕರ್ನಾಟಕಕ್ಕೆ ಕೊನೇ ಪಂದ್ಯ ಇದಾಗಿದ್ದು, ನಂತರ ಹುಬ್ಬಳ್ಳಿಯಲ್ಲಿ ಚಂಡೀಗಢ ಎದುರು ಆಡಲಿದೆ. ಉಭಯ ತಂಡಗಳ ಹಿಂದಿನ ಐದು ಮುಖಾಮುಖಿಯಲ್ಲಿ ಕರ್ನಾಟಕ 4 ಬಾರಿ ಮಹಾರಾಷ್ಟ್ರವನ್ನು ಮಣಿಸಿದ ದಾಖಲೆ ಹೊಂದಿದೆ. 2018ರ ಬಳಿಕ ಮೊದಲ ಬಾರಿಗೆ ಉಭಯ ತಂಡಗಳು ರಣಜಿ ಟೂರ್ನಿಯಲ್ಲಿ ಎದುರಾಗಲಿವೆ.
ಕರುಣ್ ಬ್ಯಾಟಿಂಗ್ ಬಲ
ಎರಡು ಆವೃತ್ತಿಗಳ ಬಳಿ ತವರು ರಾಜ್ಯ ತಂಡಕ್ಕೆ ಮರಳಿರುವ 33 ವರ್ಷದ ಕರುಣ್ ನಾಯರ್ ಬ್ಯಾಟಿಂಗ್ ಫಾರ್ಮ್ ಕರ್ನಾಟಕಕ್ಕೆ ಪ್ರಮುಖ ಬಲ ತುಂಬಿದೆ. ಕರುಣ್ ನಾಯರ್ ಇದುವರೆಗೆ ಆಡಿರುವ 4 ಇನಿಂಗ್ಸ್‌ಗಳಲ್ಲಿ 2 ಶತಕ ಸಹಿತ 488 ರನ್ ಸೇರಿಸಿದ್ದು, ಹಾಲಿ ಟೂರ್ನಿಯಲ್ಲಿ 2ನೇ ಗರಿಷ್ಠ ರನ್ ಸ್ಕೋರರ್ ಎನಿಸಿದ್ದಾರೆ. ಎಡಗೈ ಬ್ಯಾಟರ್ ಆರ್.ಸ್ಮರಣ್ 310 ರನ್‌ಗಳಿಸಿದ್ದಾರೆ. ನಾಯಕ ಮಯಾಂಕ್ ಲಯಕ್ಕೆ ಮರಳಿದರೆ ರಾಜ್ಯ ತಂಡದ ಬ್ಯಾಟಿಂಗ್ ಮತ್ತಷ್ಟು ಸದೃಢವಾಗಲಿದೆ. ಆರಂಭಿಕ ಜೋಡಿಯ ನಿರ್ವಹಣೆ ಹಿನ್ನಡೆ ಎನಿಸಿದೆ. ಅನೀಶ್ ಕೆವಿ ಇನ್ನೊಂದು ಅವಕಾಶ ನಿರೀಕ್ಷೆಯಲ್ಲಿದ್ದಾರೆ. ರೈಸಿಂಗ್ ಸ್ಟಾರ್ ಏಷ್ಯಾಕಪ್ ಟೂರ್ನಿಗೆ ವೈಶಾಕ್ ವಿಜಯ್‌ಕುಮಾರ್ ಭಾರತ ಎ ತಂಡಕ್ಕೆ ಆಯ್ಕೆ ಆಗಿದ್ದು, ಮಹಾರಾಷ್ಟ್ರ ಎದುರು ಆಡುವುದು ಅನುಮಾನ ಎನಿಸಿದೆ. ಮಹಾರಾಷ್ಟ್ರ ಪರ ಪೃಥ್ವಿ ಷಾ (325), ಋತುರಾಜ್ (298) ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.
ಆರಂಭ: ಬೆಳಗ್ಗೆ 9.30