ಕ್ರೀಡೆ

ಗೆದ್ದ ಕರ್ನಾಟಕ, ಎಂಟರ ಘಟ್ಟಕ್ಕೆ ಎಂಟ್ರಿ: ಕರುಣ್ ನಾಯರ್ ಅರ್ಧಶತಕದಾಟ, ಬರೋಡ ವಿರುದ್ಧ ಆತಿಥೇಯರಿಗೆ 8 ವಿಕೆಟ್ ಜಯ

ಬೆಂಗಳೂರು: ನಿರ್ಣಾಯಕ ಹಣಾಹಣಿಯಲ್ಲಿ ಬರೋಡ ತಂಡವನ್ನು ಮಣಿಸಿದ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ 86ನೇ ಆವೃತ್ತಿಯ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಎಂಟರ ಘಟ್ಟಕ್ಕೆ ಪ್ರವೇಶ ಪಡೆಯಿತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ಮುಕ್ತಾಯಗೊಂಡ 9ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಕರುಣ್ ನಾಯರ್ ಪಡೆ 8 ವಿಕೆಟ್​ಗಳಿಂದ ಪ್ರವಾಸಿ ಬರೋಡ ತಂಡವನ್ನು ಸೋಲಿಸಿತು. ಕ್ವಾರ್ಟರ್​ಫೈನಲ್​ಗೇರಲು ಕನಿಷ್ಠ ಇನಿಂಗ್ಸ್ ಮುನ್ನಡೆ ಗಳಿಸುವ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಕರ್ನಾಟಕ, ಸರ್ವಾಂಗೀಣ ನಿರ್ವಹಣೆಯೊಂದಿಗೆ 3ನೇ ದಿನದಾಟದಲ್ಲೇ ಗೆಲುವು ಒಲಿಸಿಕೊಂಡಿತು.

ಬರೋಡ ನೀಡಿದ 149 ರನ್ ಗೆಲುವಿನ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ, ನಾಯಕ ಕರುಣ್ ನಾಯರ್ (71*ರನ್, 126 ಎಸೆತ, 7 ಬೌಂಡರಿ) ಅರ್ಧಶತಕದಾಸರೆ ಹಾಗೂ ಕೆವಿ ಸಿದ್ದಾರ್ಥ್ (29*ರನ್, 68 ಎಸೆತ, 3 ಬೌಂಡರಿ, 1 ಸಿಕ್ಸರ್) ಜತೆಗೂಡಿ ಮುರಿಯದ 3ನೇ ವಿಕೆಟ್​ಗೆ ಸೇರಿಸಿದ 91 ರನ್ ಜತೆಯಾಟದ ನೆರವಿನಿಂದ 44.4 ಓವರ್​ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಜಯದ ನಗೆ ಬೀರಿತು. ಇದಕ್ಕೂ ಮೊದಲು 5 ವಿಕೆಟ್​ಗೆ 208 ರನ್​ಗಳಿಂದ ದಿನದಾಟ ಆರಂಭಿಸಿದ ಬರೋಡ ತಂಡ, ಪ್ರಸಿದ್ಧ ಕೃಷ್ಣ (45ಕ್ಕೆ 4), ರೋನಿತ್ ಮೋರೆ (68ಕ್ಕೆ 3) ಜೋಡಿಯ ಮಾರಕ ದಾಳಿಗೆ ನಲುಗಿ 296 ರನ್​ಗಳಿಗೆ ಸರ್ವಪತನ ಕಂಡಿತು. ಬರೋಡ ಮೊದಲ ಇನಿಂಗ್ಸ್​ನಲ್ಲಿ 85 ರನ್ ಗಳಿಸಿದ್ದರೆ, ಕರ್ನಾಟಕ 233 ರನ್ ಗಳಿಸಿ 148 ರನ್ ಮುನ್ನಡೆ ಸಾಧಿಸಿತ್ತು.

ನಿರಾಸೆ ಮೂಡಿಸಿದ ಪಡಿಕಲ್: ಸಾಧಾರಣ ಮೊತ್ತ ಬೆನ್ನಟ್ಟಿದ ಕರ್ನಾಟಕ ತಂಡ ಆರಂಭದಲ್ಲೇ ದೇವದತ್ ಪಡಿಕಲ್ (6) ವಿಕೆಟ್ ಕಳೆದುಕೊಂಡಿತು. ಮಂದಗತಿಯಲ್ಲೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ರಕ್ಷಣಾತ್ಮಕ ಚೇಸಿಂಗ್​ಗೆ ಮುಂದಾಯಿತು. ಭಾರ್ಗವ್ ಭಟ್ ಎಸೆದ ಇನಿಂಗ್ಸ್​ನ 6ನೇ ಓವರ್​ನಲ್ಲಿ 2ನೇ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ ಪಡಿಕಲ್, ಮರು ಎಸೆತದಲ್ಲಿ ಅಂಥದ್ದೇ ಹೊಡೆತಕ್ಕೆ ಮುಂದಾಗಿ ಬದಲಿ ಫೀಲ್ಡರ್ ಪ್ರತ್ಯೂಷ್ ಕುಮಾರ್​ಗೆ ಕ್ಯಾಚ್ ನೀಡಿದರು. ಈ ಮೂಲಕ ಕರ್ನಾಟಕ ಭೋಜನ ವಿರಾಮದ ವೇಳೆಗೆ 1 ವಿಕೆಟ್​ಗೆ 14 ರನ್ ಪೇರಿಸಿತು.

ದಡ ಸೇರಿಸಿದ ಕರುಣ್- ಸಿದ್ಧಾರ್ಥ್

ಪಡಿಕಲ್ ನಿರ್ಗಮನದ ಬಳಿಕ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಕಣಕ್ಕಿಳಿದ ನಾಯಕ ಕರುಣ್ ನಾಯರ್, ಆರಂಭಿಕ ಸಮರ್ಥ್ ಜತೆಗೂಡಿ ಮಂದಗತಿಯಲ್ಲೇ ರನ್​ಗಳಿಸಲು ಮುಂದಾದರು. ಪ್ರಮುಖ ಬೌಲರ್ ಬಾಬಾಶಫಿ ಪಠಾಣ್ ಗಾಯದ ಸಮಸ್ಯೆಯಿಂದಾಗಿ ಮೈದಾನಕ್ಕಿಳಿಯಲಿಲ್ಲ. ಇದರಿಂದ ಬಾಬಾಶಫಿ ಸೇವೆ ಕಳೆದುಕೊಂಡ ಬರೋಡ ತಂಡದ ದಾಳಿಯನ್ನು ಸಮರ್ಥ್-ಕರುಣ್ ಜೋಡಿ ಜವಾಬ್ದಾರಿಯುತವಾಗಿ ಇನಿಂಗ್ಸ್ ಕಟ್ಟುವ ಮೂಲಕ ಎಚ್ಚರಿಕೆ ವಹಿಸಿತು. ವೈಯಕ್ತಿಕ ಮೊತ್ತ 25 ರನ್ ಗಳಿಸಿದ್ದ ವೇಳೆ ಸಮರ್ಥ್, ಭಾರ್ಗವ್ ಭಟ್ ಎಸೆತದಲ್ಲಿ ಬೌಲ್ಡ್ ಆದರು. ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದ ಕೆವಿ ಸಿದ್ದಾರ್ಥ್ ನಾಯಕನ ಜತೆಗೂಡಿ ಇನಿಂಗ್ಸ್ ಕಟ್ಟಿದರು. ಚಹಾ ವಿರಾಮದವರೆಗೂ ಈ ಜೋಡಿ ವಿಕೆಟ್ ಕಾಯ್ದುಕೊಂಡಿತು. ದಿನದ ಮೂರನೇ ಅವಧಿಯಲ್ಲಿ ರನ್​ವೇಗಕ್ಕೆ ಚುರುಕು ನೀಡುವ ಮೂಲಕ ಒತ್ತಡ ಮುಕ್ತವಾಗಿ ಆಡಿತು. ಕೊನೇ ಅವಧಿಯ ಆರಂಭಿಕ 40 ನಿಮಿಷಗಳ ಆಟದಲ್ಲೇ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿತು. ಈ ಅವಧಿಯಲ್ಲಿ ಕರುಣ್-ಸಿದ್ದಾರ್ಥ್ ಜೋಡಿ ಎದುರಿಸಿದ 58 ಎಸೆತಗಳಲ್ಲಿ 51 ರನ್ ಜತೆಯಾಟವಾಡಿತು.

ಬರೋಡಕ್ಕೆ ರಾಜ್ಯದ ವೇಗಿಗಳಿಂದ ಬ್ರೇಕ್

ದಿನದ ಆರಂಭದಲ್ಲೇ ಕಡಿಮೆ ಮೊತ್ತಕ್ಕೆ ಬರೋಡ ತಂಡಕ್ಕೆ ಕಡಿವಾಣ ಹಾಕುವ ಯೋಜನೆಯಲ್ಲಿದ್ದ ಕರ್ನಾಟಕ ತಂಡಕ್ಕೆ ಪಾರ್ಥ ಕೊಹ್ಲಿ (42) ಹಾಗೂ ಅಭಿಮನ್ಯುಸಿಂಗ್ ರಜಪೂತ್ (52) ಜೋಡಿ ಕೆಲಕಾಲ ಪ್ರತಿರೋಧ ತೋರಿತು. ಕ್ರಮವಾಗಿ 31 ಹಾಗೂ 4 ರನ್​ಗಳಿಂದ ದಿನದಾಟ ಆರಂಭಿಸಿದ ಅಭಿಮನ್ಯು ಹಾಗೂ ಪಾರ್ಥ ಜೋಡಿ ರಾಜ್ಯದ ವೇಗದ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಈ ಜೋಡಿಗೆ ರಾಜ್ಯದ ವೇಗಿ ರೋನಿತ್ ಮೋರೆ ಬ್ರೇಕ್ ಹಾಕಿದರು. ದಿನದಾಟದಲ್ಲಿ 6ನೇ ವಿಕೆಟ್​ಗೆ 32 ರನ್, ಒಟ್ಟಾರೆ 52ರನ್ ಕಲೆಹಾಕಿ ಈ ಜೋಡಿ ಬೇರ್ಪಟ್ಟಿತು. ಅಭಿಮನ್ಯುಸಿಂಗ್ ಔಟಾದ ಬಳಿಕ ಪಾರ್ಥ ಕೆಲಕಾಲ ಏಕಾಂಗಿ ನಿರ್ವಹಣೆ ತೋರಿ ಮಿಥುನ್ ಎಸೆತದಲ್ಲಿ ಎಲ್​ಬಿಯಾದರು. ಈ ವೇಳೆ ಪ್ರಸಿದ್ಧ ಕೃಷ್ಣ 2 ವಿಕೆಟ್ ಕಬಳಿಸಿದರು. ಬಳಿಕ ಗಾಯದ ನಡುವೆಯೂ ಕ್ರೀಸ್​ಗಿಳಿದ ವಿಕೆಟ್ ಕೀಪರ್- ಬ್ಯಾಟ್ಸ್​ಮನ್ ವಿರಾಜ್ ಬೋಸಲೆ (16*) ಮೊತ್ತವನ್ನು 300ರ ಸನಿಹ ತಂದರು.

ಕ್ವಾರ್ಟರ್​ಫೈನಲ್​ಪ್ರವೇಶಿಸಿದ ಬಂಗಾಳ

ಪಟಿಯಾಲದಲ್ಲಿ ಮುಕ್ತಾಯಗೊಂಡ ಎ ಮತ್ತು ಬಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ಆತಿಥೇಯ ಪಂಜಾಬ್ ತಂಡವನ್ನು 48 ರನ್ ಗಳಿಂದ ಮಣಿಸಿದ ಬಂಗಾಳ ಎಂಟರ ಘಟ್ಟಕ್ಕೇರಿತು. ಮೊದಲ ಇನಿಂಗ್ಸ್ ಹಿನ್ನಡೆ ನಡುವೆಯೂ ಬಂಗಾಳ ತಂಡ ಪಂದ್ಯದಲ್ಲಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಯಿತು. ಬಂಗಾಳ ನೀಡಿದ 190 ರನ್ ಗುರಿ ಬೆನ್ನಟ್ಟಿದ ಪಂಜಾಬ್ 141 ರನ್​ಗಳಿಗೆ ಸರ್ವಪತನ ಕಂಡಿತು.

ಜಮ್ಮು ಕಾಶ್ಮೀರ ಎದುರಾಳಿ?

ಲೀಗ್ ಹಂತದಲ್ಲಿ 4ನೇ ಜಯ ದಾಖಲಿಸಿದ ಕರ್ನಾಟಕ ತಂಡ 31 ಅಂಕಗಳಿಂದ ಎ ಮತ್ತು ಬಿ ಗುಂಪಿನಿಂದ ಸದ್ಯ 2ನೇ ಸ್ಥಾನಕ್ಕೇರಿದೆ. 3ನೇ ಸ್ಥಾನದಲ್ಲಿರುವ ಗುಜರಾತ್, ಆಂಧ್ರ ಎದುರು ಬಿಗಿ ಹಿಡಿತ ಸಾಧಿಸಿದ್ದು, ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ. ಇದರಿಂದ ಕರ್ನಾಟಕ 3ನೇ ಸ್ಥಾನಿಯಾಗಿ ಕ್ವಾರ್ಟರ್​ಫೈನಲ್​ಗೇರುವ ಸಾಧ್ಯತೆಗಳಿವೆ. ಎಲೈಟ್ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಜಮ್ಮು ಕಾಶ್ಮೀರ 6ನೇ ತಂಡವಾಗಿ ಎಂಟರ ಘಟ್ಟಕ್ಕೆ ಪ್ರವೇಶ ಪಡೆಯುವುದು ಖಚಿತವಾಗಿದೆ. ಇದರಿಂದ ಕರ್ನಾಟಕ ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದರೆ, ಜಮ್ಮು-ಕಾಶ್ಮೀರ ಎಂಟರ ಘಟ್ಟದಲ್ಲಿ ಎದುರಾಗಲಿದೆ. ಕ್ವಾರ್ಟರ್​ಫೈನಲ್ ಪಂದ್ಯಗಳು ಫೆಬ್ರವರಿ 20ರಿಂದ 24ರವರೆಗೆ ನಡೆಯಲಿವೆ.

| ರಘುನಾಥ್ ಡಿ.ಪಿ.