ಜಮ್ಮು: ಆರಂಭಿಕ ಎರಡು ದಿನ ಮಂದ ಬೆಳಕು, ಮಳೆ, ಮೈದಾನದ ತೇವಾಂಶಕ್ಕೆ ಸಾಕ್ಷಿಯಾಗಿದ್ದ ಗಾಂಧಿ ಸ್ಮಾರಕ ವಿಜ್ಞಾನ ಕಾಲೇಜು ಮೈದಾನ, ಶನಿವಾರ ಕರ್ನಾಟಕ ತಂಡದ ಪತನಕ್ಕೆ ವೇದಿಕೆಯಾಗಿತ್ತು. ಪ್ರಸಕ್ತ ದೇಶೀಯ ಕ್ರಿಕೆಟ್ ಋತುವಿನಲ್ಲಿ ಸತತ ಎರಡು ಟ್ರೋಫಿ ಜಯಿಸಿದ ಗೌರವ ಹೊಂದಿರುವ 8 ಬಾರಿ ಚಾಂಪಿಯನ್ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಎದುರು ಇನಿಂಗ್ಸ್ ಹಿನ್ನಡೆ ಭೀತಿಯಲ್ಲಿದೆ. 4ನೇ ದಿನದಾಟದಲ್ಲಿ ಬೌಲರ್ಗಳ ಕೈ ಚಳಕ ತೋರಿದರಷ್ಟೇ ಹ್ಯಾಟ್ರಿಕ್ ಪ್ರಶಸ್ತಿಯ ಕನಸು ಜೀವಂತವಾಗಿ ಉಳಿಯಲಿದೆ.
2 ವಿಕೆಟ್ಗೆ 14 ರನ್ಗಳಿಂದ ಶನಿವಾರ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ ತಂಡ ಕೆವಿ ಸಿದ್ದಾರ್ಥ್ (76ರನ್, 189 ಎಸೆತ, 9 ಬೌಂಡರಿ) ಏಕಾಂಗಿ ನಿರ್ವಹಣೆ ನಡುವೆಯೂ 69.1 ಓವರ್ಗಳಲ್ಲಿ 206 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಜಮ್ಮು ಕಾಶ್ಮೀರ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ಗೆ 88 ರನ್ ಪೇರಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 118 ರನ್ ಬಾಕಿ ಇದೆ. ಕರ್ನಾಟಕ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ಬಳಿಕ ಇನಿಂಗ್ಸ್ ಆರಂಭಿಸಿದ ಜಮ್ಮು ಕಾಶ್ಮೀರ ತಂಡ ಕರ್ನಾಟಕ ದಾಳಿಯನ್ನು ಸಮರ್ಥವಾಗಿ ಎದುರಿಸಿದೆ. ಚಹಾ ವಿರಾಮದ ಬಳಿಕ ಇನಿಂಗ್ಸ್ ಆರಂಭಿಸಿದ ಜಮ್ಮು ಕಾಶ್ಮೀರ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಯೋಜನೆಯಲ್ಲಿರುವ ಪ್ರವಾಸಿ ಬೌಲರ್ಗಳಿಗೆ ಅನುಭವಿ ಶುಭಂ ಖಜೂರಿಯಾ ಅಡ್ಡಿಯಾದರು. ಆರಂಭಿಕರಾದ ಶುಭಂ ಖಜೂರಿಯಾ ಹಾಗೂ ಸೂರ್ಯಾಂಶ್ ರೈನಾ (12) ಜೋಡಿ ಮೊದಲ ವಿಕೆಟ್ಗೆ 30 ರನ್ ಪೇರಿಸಿ ಬೇರ್ಪಟ್ಟರೆ, 2ನೇ ವಿಕೆಟ್ಗೆ ಖಜೂರಿಯಾ ಜತೆಗೂಡಿ ಹೆನನ್ ನಜಿರ್ (12) 32 ರನ್ ಕಲೆಹಾಕಿದರು. ಅನುಭವಿ ಶುಭಂ ಖಜೂರಿಯಾ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಜಿಗುಟು ಬ್ಯಾಟಿಂಗ್ ಮೊರೆ ಹೋದ ಖಜೂರಿಯಾ ಹಾಗೂ ಶುಭಂ ಪುಂದಿರ್ (16*) ಜೋಡಿ ಮುರಿಯದ 3ನೇ ವಿಕೆಟ್ಗೆ 26 ರನ್ ಕಲೆಹಾಕಿದೆ.
ಉಪಾಂತ್ಯದತ್ತ ಸೌರಾಷ್ಟ್ರ, ಬಂಗಾಳ, ಗುಜರಾತ್
ಎದುರಾಳಿ ತಂಡಗಳ ಮೇಲೆ ಬಿಗಿ ಹಿಡಿತ ಸಾಧಿಸಿರುವ ಸೌರಾಷ್ಟ್ರ, ಬಂಗಾಳ ಹಾಗೂ ಮಾಜಿ ಚಾಂಪಿಯನ್ ಗುಜರಾತ್ ತಂಡಗಳು ಉಪಾಂತ್ಯ ಹಾದಿಯನ್ನು ಸುಗಮವಾಗಿಸಿಕೊಂಡಿವೆ. ವಲ್ಸಡ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್ ತಂಡ ಗೋವಾ ಎದುರು ಇನಿಂಗ್ಸ್ ಸಾಧಿಸುವುದರ ಜತೆಗೆ ಒಟ್ಟಾರೆ 587 ರನ್ ಮುನ್ನಡೆ ಸಾಧಿಸಿದೆ. ಕಟಕ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ಒಡಿಶಾ ಎದುರು ಇನಿಂಗ್ಸ್ ಮುನ್ನಡೆ ಪಡೆದ ಬಂಗಾಳ 161 ರನ್ ಮುನ್ನಡೆ ಹೊಂದಿದೆ. ಮತ್ತೊಂದೆಡೆ, ಆಂಧ್ರ ತಂಡಕ್ಕೆ ಕಡಿವಾಣ ಹಾಕಿರುವ ಸೌರಾಷ್ಟ್ರ 376 ರನ್ ಮುನ್ನಡೆ ಸಂಪಾದಿಸಿದೆ.
ಕೆವಿ ಸಿದ್ದಾರ್ಥ್-ಮನೀಷ್ ಹೋರಾಟ
ಅಗ್ರಕ್ರಮಾಂಕದ ವೈಫಲ್ಯದಿಂದ ಬಳಲುತ್ತಿದ್ದ ಕರ್ನಾಟಕ ತಂಡಕ್ಕೆ ಕೆವಿ ಸಿದ್ದಾರ್ಥ್ ಆಸರೆಯಾದರು. ಮನೀಷ್ ಪಾಂಡೆ (37ರನ್, 26 ಎಸೆತ, 7 ಬೌಂಡರಿ) ಹಾಗೂ ಶರತ್ ಶ್ರೀನಿವಾಸ್ (26) ಜತೆಗೂಡಿ ಇನಿಂಗ್ಸ್ ಕಟ್ಟಲು ಯತ್ನಿಸಿದರು. ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದ ಮನೀಷ್ ಪಾಂಡೆ ಕುಸಿಯುತ್ತಿದ್ದ ಇನಿಂಗ್ಸ್ ಆಸರೆಯಾದರು. ಮನೀಷ್-ಸಿದ್ದಾರ್ಥ್ ಜೋಡಿ 4ನೇ ವಿಕೆಟ್ಗೆ 61 ರನ್ ಕಲೆಹಾಕಿತು. ಚೇತರಿಕೆ ಕಂಡುಕೊಳ್ಳಲು ಯತ್ನಿಸಿದ ಕರ್ನಾಟಕ ತಂಡಕ್ಕೆ ಮುಜ್ತಬಾ ಯೂಸುಫ್, ಮನೀಷ್ ಪಾಂಡೆ ವಿಕೆಟ್ ಕಬಳಿಸಿ ಆಘಾತ ನೀಡಿದರು. ಭೋಜನ ವಿರಾಮಕ್ಕೂ ಮೊದಲೇ ಕರ್ನಾಟಕ ಪ್ರಮುಖ ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡಿತು. ಮನೀಷ್ ನಿರ್ಗಮನದ ಬಳಿಕ ಕ್ರೀಸ್ಗಿಳಿದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಶರತ್ ಶ್ರೀನಿವಾಸ್ (26ರನ್, 91 ಎಸೆತ, 4 ಬೌಂಡರಿ) ವಿಕೆಟ್ ಕಾಯ್ದುಕೊಳ್ಳಲು ಯತ್ನಿಸಿತು. ಸಿದ್ದಾರ್ಥ್-ಶರತ್ ಜೋಡಿ 5ನೇ ವಿಕೆಟ್ಗೆ 69 ರನ್ ಜತೆಯಾಟವಾಡಿದ್ದ ವೇಳೆ ಕರ್ನಾಟಕ ತಂಡಕ್ಕೆ ಮುಜ್ತಬಾ ಯೂಸುಫ್ ಮತ್ತೊಮ್ಮೆ ವಿಲನ್ ಆದರು.