ಕ್ರೀಡೆ

ರಣಜಿ ಟ್ರೋಫಿ: ಪೂರ್ಣಗೊಳ್ಳದ ಮೊದಲ ಇನಿಂಗ್ಸ್; ನೀರಸ ಡ್ರಾಕ್ಕೆ ತೃಪ್ತಿಪಟ್ಟ ಕರ್ನಾಟಕ

ಇಂದೋರ್​: ಪ್ರತಿಷ್ಠಿತ ದೇಶೀಯ ಕ್ರಿಕೆಟ್​ ಟೂರ್ನಿ ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಮಳೆ ಮತ್ತು ಮಂದಬೆಳಕಿನ ಅಡಚಣೆ ಎದುರಿಸಿದ ಕರ್ನಾಟಕ ಮತ್ತು ಮಧ್ಯಪ್ರದೇಶ ತಂಡಗಳು ನೀರಸ ಡ್ರಾಕ್ಕೆ ತೃಪ್ತಿಪಟ್ಟಿವೆ. ಉಭಯ ತಂಡಗಳ ಮೊದಲ ಇನಿಂಗ್ಸ್​ ಕೂಡ ಪೂರ್ಣಗೊಳ್ಳದ ಕಾರಣ, ಹಿನ್ನಡೆ&ಮುನ್ನಡೆ ಲೆಕ್ಕಾಚಾರಗಳಿಲ್ಲದೆ ತಲಾ ಒಂದು ಅಂಕ ಹಂಚಿಕೊಂಡವು.

ಮೂರನೇ ದಿನದಂತ್ಯಕ್ಕೆ 8 ವಿಕೆಟ್​ಗೆ 425 ರನ್​ ಗಳಿಸಿದ್ದ ಆತಿಥೇಯ ಮಧ್ಯಪ್ರದೇಶ 4ನೇ ಹಾಗೂ ಅಂತಿಮ ದಿನವಾದ ಸೋಮವಾರ ಮತ್ತೆ ಬ್ಯಾಟಿಂಗ್​ಗೆ ಇಳಿಯದೆ ಅದೇ ಮೊತ್ತಕ್ಕೆ ಡಿಕ್ಲೇರ್​ ಮಾಡಿಕೊಂಡಿತು. ಕರ್ನಾಟಕ ತಂಡ ಆರಂಭಿಕ ನಿಕಿನ್​ ಜೋಸ್​ (99 ರನ್​, 216 ಎಸೆತ, 8 ಬೌಂಡರಿ, 4 ಸಿಕ್ಸರ್​) ಶತಕವಂಚಿತ ಬ್ಯಾಟಿಂಗ್​ ಮತ್ತು ಶ್ರೇಯಸ್​ ಗೋಪಾಲ್​ (60*ರನ್​, 110 ಎಸೆತ, 7 ಬೌಂಡರಿ, 1 ಸಿಕ್ಸರ್​) ಹೋರಾಟದಿಂದ 75 ಓವರ್​ಗಳಲ್ಲಿ 5 ವಿಕೆಟ್​ಗೆ 206 ರನ್​ ಗಳಿಸಿ ಡ್ರಾ ಸಾಧಿಸಿತು. ಮಂದಬೆಳಕಿನ ಅಡಚಣೆಯಿಂದ ದಿನದ ಕೊನೇ ಅವಧಿಯಲ್ಲಿ ಹೆಚ್ಚಿನ ಆಟ ನಷ್ಟಗೊಂಡಿತು. ಇದಕ್ಕೆ ಮುನ್ನ ಪಂದ್ಯದ 2ನೇ ದಿನದಾಟ ಮಳೆಯಿಂದಾಗಿ ಒಂದೂ ಎಸೆತವಿಲ್ಲದೆ ರದ್ದುಗೊಂಡಿತ್ತು. 4 ದಿನಗಳಲ್ಲಿ ಒಟ್ಟಾರೆ 360 ಓವರ್​ಗಳ ಆಟ ನಡೆಯಬೇಕಿದ್ದಲ್ಲಿ, 215 ಓವರ್​ಗಳ ಆಟವಷ್ಟೇ ನಡೆಯಿತು.

ಕೈಕೊಟ್ಟ ಪ್ರಮುಖರು

ಕರ್ನಾಟಕ ತಂಡದ ಪ್ರಮುಖ ಬ್ಯಾಟರ್​ಗಳಾದ ನಾಯಕ ಮಯಾಂಕ್​ ಅಗರ್ವಾಲ್​ (0), ದೇವದತ್​ ಪಡಿಕ್ಕಲ್​ (16), ಮನೀಷ್​ ಪಾಂಡೆ (9) ಜತೆಗೆ ಪದಾರ್ಪಣೆ ಪಂದ್ಯವಾಡಿದ ಆರ್​. ಸ್ಮರಣ್​ (17) ಬೇಗನೆ ಔಟಾಗಿ ನಿರಾಸೆ ಮೂಡಿಸಿದರು. ಆದರೆ ನಿಕಿನ್​ ಜೋಸ್​ ಮತ್ತು ಶ್ರೇಯಸ್​ ಗೋಪಾಲ್​ ಹೋರಾಟದಿಂದಾಗಿ ಕರ್ನಾಟಕ ಆಲೌಟ್​ನಿಂದ ಪಾರಾಗಿ, ಇನಿಂಗ್ಸ್​ ಹಿನ್ನಡೆಯೊಂದಿಗೆ ಎದುರಾಳಿಗೆ 3 ಅಂಕ ಬಿಟ್ಟುಕೊಡುವ ಅಪಾಯ ತಪ್ಪಿಸಿಕೊಂಡಿತು. ಜೋಸ್​-ಶ್ರೇಯಸ್​ 5ನೇ ವಿಕೆಟ್​ಗೆ 127 ರನ್​ ಜತೆಯಾಟವಾಡಿದರು. ಆದರೆ ಜೋಸ್​ ಕೇವಲ 1 ರನ್​ನಿಂದ ತನ್ನ 3ನೇ ಶತಕ ತಪ್ಪಿಸಿಕೊಂಡರು. ಕೇರಳದಿಂದ ರಾಜ್ಯ ತಂಡಕ್ಕೆ ಮರಳಿರುವ ಶ್ರೇಯಸ್​ ಬೌಲಿಂಗ್​ನಲ್ಲಿ ನಿರಾಸೆ ಮೂಡಿಸಿದ್ದರೂ, ಬ್ಯಾಟಿಂಗ್​ನಲ್ಲಿ ಅಮೂಲ್ಯ ಕೊಡುಗೆ ನೀಡಿದರು.

ಮಧ್ಯಪ್ರದೇಶ: 8 ವಿಕೆಟ್​ಗೆ 425 ಡಿಕ್ಲೇರ್​; ಕರ್ನಾಟಕ: 5 ವಿಕೆಟ್​ಗೆ 206 (ನಿಕಿನ್​ ಜೋಸ್​ 99, ಮಯಾಂಕ್​ 0, ಪಡಿಕ್ಕಲ್​ 16, ಸ್ಮರಣ್​ 17, ಮನೀಷ್​ ಪಾಂಡೆ 9, ಶ್ರೇಯಸ್​ ಗೋಪಾಲ್​ 60*, ಸುಜಯ್​ 2*, ಕಾರ್ತಿಕೇಯ 68ಕ್ಕೆ 3, ಸಾರಾಂಶ್​ ಜೈನ್​ 103ಕ್ಕೆ 2).

*ಕರ್ನಾಟಕದ ಮುಂದಿನ ಪಂದ್ಯ

ಯಾವಾಗ: ಅ.18-21

ಎದುರಾಳಿ: ಕೇರಳ

ಸ್ಥಳ: ಬೆಂಗಳೂರು (ಆಲೂರು)

ಮುಂಬೈಗೆ ಬರೋಡ ಶಾಕ್​

ಹಾಲಿ ಹಾಗೂ 42 ಬಾರಿಯ ಚಾಂಪಿಯನ್​ ಮುಂಬೈ ತಂಡ ಸೋಲಿನ ಆರಂಭ ಕಂಡಿದೆ. ಇತ್ತೀಚೆಗೆ ಇರಾನಿ ಕಪ್​ ಗೆದ್ದು ಬೀಗಿದ್ದ ಮುಂಬೈ, ವಡೋದರದಲ್ಲಿ ಆತಿಥೇಯ ಬರೋಡ ಎದುರು 84 ರನ್​ಗಳಿಂದ ಶರಣಾಯಿತು. ಈ ಮೂಲಕ ಬರೋಡ 26 ವರ್ಷಗಳ ಬಳಿಕ ಮುಂಬೈ ವಿರುದ್ಧ ಗೆಲುವಿನ ಸಂಭ್ರಮ ಕಂಡಿತು. 262 ರನ್​ ಸವಾಲು ಪಡೆದ ಮುಂಬೈ, ಭಾರ್ಗವ್​ ಭಟ್​ (55ಕ್ಕೆ 6) ದಾಳಿಗೆ ಕುಸಿದು 177 ರನ್​ಗಳಿಗೆ ಸರ್ವಪತನ ಕಂಡಿತು. ಪ್ರಮುಖ ಬ್ಯಾಟರ್​ಗಳಾದ ಪೃಥ್ವಿ ಷಾ (12), ನಾಯಕ ಅಜಿಂಕ್ಯ ರಹಾನೆ (12), ಶ್ರೇಯಸ್​ ಅಯ್ಯರ್​ (30) ವೈಫಲ್ಯ ಕಂಡರು.

ಮಿಂಚಿದ ಸಮರ್ಥ್​, ಸುಚಿತ್​, ಕಾರಿಯಪ್ಪ

ಹಾಲಿ ಋತುವಿನಲ್ಲಿ ಉತ್ತರಾಖಂಡಕ್ಕೆ ವಲಸೆ ಹೋಗಿ ನಾಯಕರೂ ಆಗಿರುವ ಕನ್ನಡಿಗ ಆರ್​. ಸಮರ್ಥ್​ (112) ಶತಕ ಸಿಡಿಸಿ ಮಿಂಚಿದ್ದಾರೆ. ಆದರೆ ಇದರ ನಡುವೆಯೂ ಉತ್ತರಾಖಂಡ ತಂಡ ಹಿಮಾಚಲ ಪ್ರದೇಶ ವಿರುದ್ಧ ಇನಿಂಗ್ಸ್​ ಮತ್ತು 97 ರನ್​ಗಳಿಂದ ಶರಣಾಯಿತು. ನಾಗಾಲ್ಯಾಂಡ್​ಗೆ ವಲಸೆ ಹೋಗಿರುವ ಕನ್ನಡಿಗ ಜೆ. ಸುಚಿತ್​ ಪಂದ್ಯದಲ್ಲಿ ಒಟ್ಟು 9 ವಿಕೆಟ್​ (5+4) ಕಬಳಿಸುವ ಮೂಲಕ ಅರುಣಾಚಲ ಪ್ರದೇಶ ವಿರುದ್ಧದ ಪ್ಲೇಟ್​ ಲೀಗ್​ ಪಂದ್ಯದಲ್ಲಿ ಇನಿಂಗ್ಸ್​ ಮತ್ತು 290 ರನ್​ ಗೆಲುವಿನ ರೂವರಿ ಎನಿಸಿದರು. ಇದಕ್ಕೆ ಮುನ್ನ ನಾಗಾಲ್ಯಾಂಡ್​ ಪರ ಆಡುತ್ತಿರುವ ಮತ್ತಿಬ್ಬರು ಕನ್ನಡಿಗರಾದ ಡಿ. ನಿಶ್ಚಲ್​ (149) ಶತಕ ಮತ್ತು ಆರ್​. ಜೊನಾಥನ್​ (225) ದ್ವಿಶತಕ ಸಿಡಿಸಿ ಬೃಹತ್​ ಮೊತ್ತಕ್ಕೆ ನೆರವಾಗಿದ್ದರು. ಮಿಜೋರಾಂಗೆ ವಲಸೆ ಹೋಗಿರುವ ಕನ್ನಡಿಗ ಕೆಸಿ ಕಾರಿಯಪ್ಪ ಒಟ್ಟು 12 (7+5) ವಿಕೆಟ್​ ಕಬಳಿಸಿ ಮಿಂಚಿದರೂ, ಸಿಕ್ಕಿಂ ಎದುರು 137 ರನ್​ಗಳಿಂದ ಸೋಲು ಎದುರಾಯಿತು. ಕೊಡಗಿನ ಕಾರಿಯಪ್ಪ 51 ಮತ್ತು 75 ರನ್​ ಗಳಿಸಿ ಬ್ಯಾಟಿಂಗ್​ನಲ್ಲೂ ಪ್ರತಿರೋಧ ತೋರಿದರೂ ಸೋಲು ತಪ್ಪಿಸಲಾಗಲಿಲ್ಲ.