ಬೆಂಗಳೂರು: ಪ್ರತಿಷ್ಠಿತ ದೇಶೀಯ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯ 92ನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ದುಲೀಪ್ ಟ್ರೋಫಿ ಮೂಲಕ 2026&27ರ ದೇಶೀಯ ಕ್ರಿಕೆಟ್ ಋತುವಿಗೆ ಆಗಸ್ಟ್ನಲ್ಲೇ ಚಾಲನೆ ದೊರೆತಿದ್ದರೆ, ಭಾನುವಾರದಿಂದ ನಡೆಯಲಿರುವ ರಣಜಿ ಹಣಾಹಣಿಯೊಂದಿಗೆ ರೆಡ್ಬಾಲ್ ಕ್ರಿಕೆಟ್ ಹಬ್ಬ ಇನ್ನಷ್ಟು ಮೆರುಗು ಪಡೆದುಕೊಳ್ಳಲಿದೆ. ದೇಶದ ಕಿರೀಟ ಭಾಗದ ಜಮ್ಮು-ಕಾಶ್ಮೀರ ತಂಡ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದ್ದರೆ, 8 ಬಾರಿಯ ಚಾಂಪಿಯನ್ ಹಾಗೂ ಹಾಲಿ ರನ್ನರ್ಅಪ್ ಕರ್ನಾಟಕ, 42 ಬಾರಿಯ ಚಾಂಪಿಯನ್ ಮುಂಬೈ, ತಮಿಳುನಾಡು, ವಿದರ್ಭ, ಸೌರಾಷ್ಟ್ರ, ಮಧ್ಯಪ್ರದೇಶ ಮತ್ತು ಬಂಗಾಳ ಯುವ&ಅನುಭವಿ ಆಟಗಾರರ ಮಿಶ್ರಣದೊಂದಿಗೆ ಪ್ರಶಸ್ತಿ ಪೈಪೋಟಿ ನಡೆಸಲಿವೆ. ಭಾರತದ ಯುವ ಟೆಸ್ಟ್ ತಂಡದಲ್ಲಿ ಸ್ಥಾನ ಸಂಪಾದಿಸುವ ಕನಸಿನಲ್ಲಿರುವವರಿಗೆ ಆಯ್ಕೆಗಾರರ ಗಮನಸೆಳೆಯಲು ಇದು ಉತ್ತಮ ಅವಕಾಶವೆನಿಸಿದೆ.
ಕಣದಲ್ಲಿದ್ದಾರೆ ಸ್ಟಾರ್ಸ್
ಈ ಬಾರಿ ರಣಜಿ ಮೊದಲ ಸುತ್ತಿನಲ್ಲಿ ಹಲವು ಸ್ಟಾರ್ ಆಟಗಾರರು ಕಣಕ್ಕಿಳಿಯಲಿದ್ದಾರೆ. ಕರ್ನಾಟಕ ಪರ ಕೆಎಲ್ ರಾಹುಲ್, ಸೌರಾಷ್ಟ್ರ ಪರ ರವೀಂದ್ರ ಜಡೇಜಾ, ಮುಂಬೈ ಪರ ಯಶಸ್ವಿ ಜೈಸ್ವಾಲ್, ಸ್ರಾರ್ಜ್ ಖಾನ್, ಹೈದರಾಬಾದ್ ಪರ ಮೊಹಮದ್ ಸಿರಾಜ್, ಬಂಗಾಳ ಪರ ಮೊಹಮದ್ ಶಮಿ ಕಣಕ್ಕಿಳಿಯಲಿದ್ದಾರೆ.
ಪ್ರಮುಖ ಮಿಸ್ಸಿಂಗ್
ರಣಜಿ ಮೊದಲ ಸುತ್ತಿನಲ್ಲಿ ಕೆಲ ಪ್ರಮುಖರು ಗೈರಾಗಲಿದ್ದಾರೆ. ಆಸೀಸ್ ಎ ವಿರುದ್ಧ ಏಕದಿನ ಸರಣಿ ಆಡುತ್ತಿರುವ ಭಾರತ ಎ ತಂಡದಲ್ಲಿರುವ ಕಾರಣ ಋತುರಾಜ್ ಗಾಯಕ್ವಾಡ್, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್, ಸಾಯಿ ಸುದರ್ಶನ್ ರಣಜಿಗೆ ಅಲಭ್ಯರಾಗಿದ್ದಾರೆ. ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಮೊದಲ ಪಂದ್ಯಕ್ಕೆ ಗೋವಾ ತಂಡದಲ್ಲಿ ಸ್ಥಾನ ಪಡೆಯದಿರುವುದು ಅಚ್ಚರಿ ತಂದಿದೆ. ಸೂರ್ಯಕುಮಾರ್ ಯಾದವ್, ಶಾರ್ದೂಲ್ ಠಾಕೂರ್, ವೆಂಕಟೇಶ್ ಅಯ್ಯರ್ ಮತ್ತಿತರರು ಫಿಟ್ನೆಸ್ ಸಹಿತ ಇತರ ಕೆಲ ಕಾರಣಗಳಿಂದ ಗೈರಾಗುತ್ತಿದ್ದಾರೆ.
ಗುಂಪುಗಳು
ಎ: ಬರೋಡ, ಬಿಹಾರ, ಗೋವಾ, ಜಮ್ಮು&ಕಾಶ್ಮೀರ, ಮಧ್ಯಪ್ರದೇಶ, ಪುದುಚೇರಿ, ಉತ್ತರ ಪ್ರದೇಶ, ವಿದರ್ಭ.
ಬಿ: ಕರ್ನಾಟಕ, ಆಂಧ್ರ, ಅಸ್ಸಾಂ, ಛತ್ತೀಸ್ಗಢ, ಹೈದರಾಬಾದ್, ಪಂಜಾಬ್, ಸೌರಾಷ್ಟ್ರ, ತ್ರಿಪುರ.
ಸಿ: ಬಂಗಾಳ, ದೆಹಲಿ, ಗುಜರಾತ್, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಒಡಿಶಾ, ಸರ್ವೀಸಸ್.
ಡಿ: ಚಂಡೀಗಢ, ಹರಿಯಾಣ, ಹಿಮಾಚಲ ಪ್ರದೇಶ, ಮುಂಬೈ, ರೈಲ್ವೇಸ್, ರಾಜಸ್ಥಾನ, ತಮಿಳುನಾಡು, ಉತ್ತರಾಖಂಡ.
ಪ್ಲೇಟ್: ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ.
ಎರಡು ಹಂತಗಳಲ್ಲಿ ಟೂರ್ನಿ
ರಣಜಿ ಟ್ರೋಫಿ ಟೂರ್ನಿಯನ್ನು ಈ ಬಾರಿ ಕೂಡ 2 ಹಂತಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ ಎಲ್ಲ ತಂಡಗಳೂ ನವೆಂಬರ್ 5ರವರೆಗೆ ತಲಾ 4 ಲೀಗ್ ಪಂದ್ಯಗಳನ್ನು ಆಡಲಿವೆ. ನಂತರದಲ್ಲಿ ಎರಡು ವೈಟ್ಬಾಲ್ ಕ್ರಿಕೆಟ್ ಟೂರ್ನಿಗಳು ಅಂದರೆ ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿ ಟಿ20 (ನ. 14-ಡಿ.6) ಮತ್ತು ವಿಜಯ್ ಹಜಾರೆ ಟ್ರೋಫಿ ಏಕದಿನ (ಡಿ.14-ಜ.8) ಟೂರ್ನಿಗಳು ನಡೆಯಲಿವೆ. ನಂತರ ಜ.17ರಿಂದ ರಣಜಿಯ ಕೊನೇ 3 ಲೀಗ್ ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 9ರಿಂದ ನಾಕೌಟ್ ಪಂದ್ಯಗಳು ನಡೆಯಲಿವೆ. ಫೆಬ್ರವರಿ 27ರಿಂದ ಮಾರ್ಚ್ 3ರವರೆಗೆ ನಡೆಯಲಿರುವ ಫೈನಲ್ ಪಂದ್ಯದೊಂದಿಗೆ 2026-27ರ ದೇಶೀಯ ಕ್ರಿಕೆಟ್ ಋತುವಿಗೆ ತೆರೆ ಬೀಳಲಿದೆ. ಟೂರ್ನಿಯಲ್ಲಿ ಒಟ್ಟು 135 ಪಂದ್ಯಗಳು ನಡೆಯಲಿವೆ.
ಟೂರ್ನಿ ಸ್ವರೂಪ
ಟೂರ್ನಿಯಲ್ಲಿ ಭಾಗವಹಿಸುವ ಒಟ್ಟು 38 ತಂಡಗಳ ಪೈಕಿ ಎಲೀಟ್ ಹಂತದಲ್ಲಿರುವ 32 ತಂಡಗಳನ್ನು ತಲಾ 8ರಂತೆ 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಉಳಿದ 6 ತಂಡಗಳು ಪ್ಲೇಟ್ ಗುಂಪಿನಲ್ಲಿವೆ. ಎಲೀಟ್ ಗುಂಪಿನ ಅಗ್ರ 2 ತಂಡಗಳು ನೇರವಾಗಿ ಕ್ವಾರ್ಟರ್ಫೈನಲ್ಗೇರಲಿವೆ. ಪ್ಲೇಟ್ ಗುಂಪಿನ ಅಗ್ರ 2 ತಂಡಗಳು ಪ್ಲೇಟ್ ಫೈನಲ್ನಲ್ಲಿ ಆಡಲಿವೆ. ಇದರಲ್ಲಿ ಗೆದ್ದ ತಂಡ 2027-28ರ ಸಾಲಿನಲ್ಲಿ ಎಲೀಟ್ ಗುಂಪಿಗೆ ಪ್ರವೇಶಿಸಲಿದೆ.