ಗುವಾಹಟಿ: ತ್ರಿಪುರ ವಿರುದ್ಧ ಇನಿಂಗ್ಸ್ ಗೆಲುವಿನೊಂದಿಗೆ ನಾಕೌಟ್ಗೇರುವ ಅವಕಾಶ ವೃದ್ಧಿಸಿಕೊಂಡಿರುವ ಹಾಲಿ ರನ್ನರ್ ಅಪ್ ಕರ್ನಾಟಕ ತಂಡ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಬಸಾರ್ಪುರದ ಎಸಿಎ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾಗಲಿರುವ ಪ್ರತಿಷ್ಠಿತ ರಣಜಿ ಟ್ರೋಫಿಯ 4ನೇ ಸುತ್ತಿನಲ್ಲಿ ಆತಿಥೇಯ ಅಸ್ಸಾಂ ತಂಡದ ವಿರುದ್ಧ ಶ್ರೇಯಸ್ ಗೋಪಾಲ್ ಪಡೆ ಕಣಕ್ಕಿಳಿಯಲಿದ್ದು, ರೆಡ್ಬಾಲ್ ಟೂರ್ನಿಯ ಮೊದಲ ಚರಣದ ಕೊನೇ ಪಂದ್ಯವೂ ಇದಾಗಿರಲಿದೆ.
ಹಾಲಿ ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಆಂಧ್ರ, ಸೌರಾಷ್ಟ್ರ ಎದುರು ಇನಿಂಗಸ್ ಸಹಿತ ಡ್ರಾಕ್ಕೆ ತೃಪ್ತಿಪಟ್ಟಿದ್ದ ಕರ್ನಾಟಕ, ಹಿಂದಿನ ಪಂದ್ಯದಲ್ಲಿ ತ್ರಿಪುರ ಎದುರು ಇನಿಂಗ್ಸ್ ಜಯದೊಂದಿಗೆ ಬೋನಸ್ ಅಂಕ ಬಾಚಿಕೊಂಡಿತು. ಇದುವರೆಗೆ ಆಡಿರುವ 3 ಪಂದ್ಯಗಳಲ್ಲಿ 9 ಅಂಕ ಸಂಪಾದಿಸಿರುವ ರಾಜ್ಯ ತಂಡ ಸದ್ಯ ಬಿ ಗುಂಪಿನ 4ನೇ ಸ್ಥಾನದಲ್ಲಿದೆ. ಕಳೆದ ಋತುವಿನ ಮೂರನೇ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿರುವ ಶ್ರೇಯಸ್ ಗೋಪಾಲ್, ದೇವದತ್ ಪಡಿಕ್ಕಲ್-ಆರ್. ಸ್ಮರಣ್ ಗೈರಿನಲ್ಲಿ ತಂಡ ಮುನ್ನಡೆಸಲಿದ್ದಾರೆ.
ಹಿರಿಯ ಆಟಗಾರರಾದ ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಪ್ರಸಿದ್ಧ ಕೃಷ್ಣ ಅಲಭ್ಯತೆಯಲ್ಲಿ ಮುಖ್ಯ ಕೋಚ್ ಆರ್.ವಿನಯ್ ಕುಮಾರ್ ಯುವ ಪ್ರತಿಭೆಗಳ ಸಾಮರ್ಥ್ಯ ಅನಾವರಣಕ್ಕೆ ಅವಕಾಶ ಕಲ್ಪಿಸಿದ್ದು, ಇದು ಪೂರಕ ಫಲಿತಾಂಶವನ್ನೇ ನೀಡಿದೆ. ಆಲ್ರೌಂಡರ್ ಮನ್ವಂತ್ ಕುಮಾರ್, ಅನೀಶ್ವರ್ ಗೌತಮ್, ರೋಹನ್ ಪಾಟೀಲ್ ಹಾಗೂ ರಿತೇಶ್ ಭಟ್ಕಳ್ ಸಹಿತ ನಾಲ್ವರು ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳಲ್ಲಿ ಕೊಡುಗೆ ನೀಡಿದ್ದಾರೆ. ಹಾಲಿ ಋತುವಿನಲ್ಲಿ ಇನ್ನೂ ಅರ್ಧಶತಕ ಗಳಿಸದ ಮಾಜಿ ನಾಯಕ ಮಯಾಂಕ್ ಅಗರ್ವಾಲ್ ಲಯಕ್ಕೆ ಮರಳಬೇಕಿದ್ದು, ಅನುಭವಿ ಕರುಣ್ ನಾಯರ್ ತಲಾ 1 ಅರ್ಧಶತಕ, ಶತಕ ಸಹಿತ 305 ರನ್ ಗಳಿಸಿದ್ದಾರೆ.
ಬೌಲಿಂಗ್ ವಿಭಾಗ ಮತ್ತಷ್ಟು ಪರಿಣಾಮಕಾರಿ ಪ್ರದರ್ಶನ ತೋರಬೇಕಿದ್ದು, ಬರ್ಸಾಪುರ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚಿನ ನೆರವು ನೀಡುವ ನಿರೀಕ್ಷೆ ಇದೆ. ಕರ್ನಾಟಕಕ್ಕಿಂತ ಕೇವಲ 2 ಅಂಕ ಹಿಂದೆ ಉಳಿದಿರುವ ಅಸ್ಸಾಂ, ಹಿಂದಿನ ಪಂದ್ಯದಲ್ಲಿ ಸೌರಾಷ್ಟ್ರ ಎದುರು ಸೋತಿದೆ. ನಾಯಕ ಡೆನಿಶ್ ದಾಸ್ ಜತೆಗೆ ಅನುಭವಿ ಸಿಬ್ಶಂಕರ್ ರಾಯ್ ಬ್ಯಾಟಿಂಗ್ ಬಲ ಎನಿಸಿದ್ದು, ಮುಕ್ತಾರ್ ಹುಸೇನ್, ಹೃದೀಪ್ ದೇಕಾ, ಮೋಹಿತ್ ಠಾಕೂರ್ ಒಳಗೊಂಡ ಬೌಲಿಂಗ್ ವಿಭಾಗವೂ ರಾಜ್ಯಕ್ಕೆ ಸವಾಲೊಡ್ಡಬಹುದು.
ಪಂದ್ಯಕ್ಕೆ ಮಳೆ ಭೀತಿ ಇಲ್ಲದ ಕಾರಣ ಕರ್ನಾಟಕಕ್ಕೆ ಮತ್ತೊಮ್ಮೆ ಬೋನಸ್ ಸಹಿತ ಅಂಕ ಗಳಿಸಲು ಈ ಪಂದ್ಯ ಉತ್ತಮ ಅವಕಾಶ ಎನಿಸಿದೆ. ಗುವಾಹಟಿಯಲ್ಲಿ ಬೇಗನೇ ಸೂರ್ಯ ಮುಳುಗುವುದರಿಂದ ದಿನದಾಟ ಬೆಳಗ್ಗೆ 8.30ಕ್ಕೆ ಆರಂಭವಾಗಿ ಸಂಜೆ 4 ಗಂಟೆಗೆ ಮುಗಿಯಲಿದೆ.
ಆರಂಭ: ಬೆಳಗ್ಗೆ 8.30, ನೇರಪ್ರಸಾರ ಇರುವುದಿಲ್ಲ