ಅಭ್ಯಾಸದ ವೇಳೆ ಮಯಾಂಕ್​ ಅಗರ್ವಾಲ್​ ಮತ್ತು ಕೆಎಲ್ ರಾಹುಲ್​. ಏಜೆನ್ಸಿ
ಕ್ರೀಡೆ

Ranji Trophy 2026-27: ಕರ್ನಾಟಕಕ್ಕೆ ಆಂಧ್ರ ಮೊದಲ ಸವಾಲು

ವಿಜಯವಾಡದಲ್ಲಿ ಆರ್​. ಸ್ಮರಣ್​ ಬಳಗ ಶುಭಾರಂಭದ ತವಕ

ಬೆಂಗಳೂರು: ಯುವ ಎಡಗೈ ಬ್ಯಾಟರ್​ ರವಿಚಂದ್ರನ್​ ಸ್ಮರಣ್​ ಸಾರಥ್ಯದ ಕರ್ನಾಟಕ ತಂಡ ವಿಜಯವಾಡದಲ್ಲಿ ಆತಿಥೇಯ ಆಂಧ್ರ ವಿರುದ್ಧ ಅಭಿಯಾನ ಆರಂಭಿಸಲಿದೆ. ಯುವ-ಅನುಭವಿ ಆಟಗಾರರ ಬಲವನ್ನು ಹೊಂದಿರುವ ಕರ್ನಾಟಕಕ್ಕೆ ಈ ಬಾರಿ ಮಾಜಿ ನಾಯಕ ಹಾಗೂ ವೇಗಿ ಆರ್​. ವಿನಯ್​ಕುಮಾರ್​ ಅವರ ಮಾರ್ಗದರ್ಶನವಿರುವುದು ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಕಳೆದ ವರ್ಷ ಹುಬ್ಬಳ್ಳಿಯಲ್ಲಿ ನಡೆದ ಫೈನಲ್​ನಲ್ಲಿ ಪ್ರಶಸ್ತಿ ವಂಚಿತವಾಗಿದ್ದ ರಾಜ್ಯ ತಂಡ, 2014-15ರ ಬಳಿಕ ಮತ್ತೊಮ್ಮೆ ಪ್ರಶಸ್ತಿ ಜಯಿಸುವ ಮೂಲಕ 12 ವರ್ಷಗಳ ಪ್ರಶಸ್ತಿ ಬರ ನೀಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಅಭಿಯಾನ ಆರಂಭಿಸಲಿದೆ.

ಕರ್ನಾಟಕ ತಂಡ: ಮಯಾಂಕ್​ ಅಗರ್ವಾಲ್​, ಕೆಎಲ್​ ರಾಹುಲ್​, ಅನೀಶ್ವರ್​ ಗೌತಮ್​, ಕರುಣ್​ ನಾಯರ್​, ಆರ್​. ಸ್ಮರಣ್​ (ನಾಯಕ), ಅನೀಶ್​ ಕೆ.ವಿ, ಶ್ರೇಯಸ್​ ಗೋಪಾಲ್​, ಕೃತಿಕ್​ ಕೃಷ್ಣ (ವಿ.ಕೀ), ಶಿಖರ್​ ಶೆಟ್ಟಿ, ಅಭಿಲಾಷ್​ ಶೆಟ್ಟಿ, ಎಲ್​. ಮನ್ವಂತ್​ ಕುಮಾರ್​, ಎಲ್​.ಆರ್​. ಕುಮಾರ್​, ರಿತೇಶ್​ ಭಟ್ಕಳ್​, ಕೆಎಲ್​ ಶ್ರೀಜಿತ್​ (ವಿ.ಕೀ), ಎಂ. ವೆಂಕಟೇಶ್​.

ಬೌಲರ್​ಗಳಿಗೆ ಗಾಯದ ಹಿನ್ನಡೆ

ಕರ್ನಾಟಕ ತನ್ನ ಮೊದಲ ಲೀಗ್​ ಪಂದ್ಯದಲ್ಲಿ ನಾಯಕ ದೇವದತ್​ ಪಡಿಕ್ಕಲ್​ ಗೈರಿನ ನಡುವೆ, ಟೆಸ್ಟ್​ ಆರಂಭಿಕ ಕೆಎಲ್​ ರಾಹುಲ್​ ಹಾಜರಿಯಿಂದ ಬಲ ಪಡೆದುಕೊಂಡಿದೆ. ಜತೆಗೆ ಅನುಭವಿ ಬ್ಯಾಟರ್​ಗಳಾದ ಮಯಾಂಕ್​ ಅಗರ್ವಾಲ್​, ಕರುಣ್​ ನಾಯರ್​ ಮತ್ತು ಇರಾನಿ ಕಪ್​ನಲ್ಲಿ ಶತಕ ಸಿಡಿಸಿ ಪಂದ್ಯಕ್ಕೆ ತಿರುವು ನೀಡಿದ್ದ ಹಂಗಾಮಿ ನಾಯಕ ಆರ್​. ಸ್ಮರಣ್​ ಬ್ಯಾಟಿಂಗ್​ ವಿಭಾಗಕ್ಕೆ ಭರವಸೆ ತುಂಬಿದ್ದಾರೆ. ಆದರೆ ಬೌಲಿಂಗ್​ ವಿಭಾಗದಲ್ಲಿ ವೇಗಿಗಳಾದ ಪ್ರಸಿದ್ಧಕೃಷ್ಣ, ವೈಶಾಖ್​ ವಿಜಯಕುಮಾರ್​ ಮತ್ತು ವಿದ್ವತ್​ ಕಾವೇರಪ್ಪ ಗಾಯದಿಂದಾಗಿ ಅಲಭ್ಯರಾಗಿರುವುದು ಹಿನ್ನಡೆ ತಂದಿದೆ. ಹೀಗಾಗಿ ಅನನುಭವಿಗಳಾದ ಅಭಿಲಾಷ್​ ಶೆಟ್ಟಿ, ಮನ್ವಂತ್​ ಕುಮಾರ್​, ಎಂ. ವೆಂಕಟೇಶ್​ರನ್ನು ನೆಚ್ಚಿಕೊಳ್ಳಬೇಕಿದೆ. ಸ್ಪಿನ್​ ಬೌಲಿಂಗ್​ನಲ್ಲಿ ಅನುಭವಿ ಶ್ರೇಯಸ್​ ಗೋಪಾಲ್​ಗೆ ಯುವ ಸ್ಪಿನ್ನರ್​ ಶಿಖರ್​ ಶೆಟ್ಟಿ ಬೆಂಬಲ ಒದಗಿಸಲಿದ್ದಾರೆ.

*ಹಾಲಿ ತಂಡದ ಆಟಗಾರರ ಅನುಭವದಲ್ಲಿ ಭಾರಿ ಅಂತರವಿದೆ. ಇದನ್ನು ಸರಿದೂಗಿಸುವ ಜವಾಬ್ದಾರಿ ನನ್ನ ಮೇಲಿದೆ. ಎಲ್ಲರಿಗೂ ಒತ್ತಡವಿಲ್ಲದೆ ಆಡುವ ವಾತಾವರಣ ಕಲ್ಪಿಸಲಿದ್ದೇನೆ.

| ಆರ್​. ವಿನಯ್​ಕುಮಾರ್​, ರಾಜ್ಯ ತಂಡದ ಕೋಚ್​

ಮುಂದಿನ ಪಂದ್ಯಕ್ಕೆ ಮತ್ತೆ ಹೊಸ ನಾಯಕ!

ಕಾಯಂ ನಾಯಕ ದೇವದತ್​ ಪಡಿಕ್ಕಲ್​ ಭಾರತ ಎ ತಂಡದಲ್ಲಿರುವ ಕಾರಣ ರಣಜಿ ಟ್ರೋಫಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಆರ್​. ಸ್ಮರಣ್​ಗೆ ಹಂಗಾಮಿ ಸಾರಥ್ಯ ವಹಿಸಲಾಗಿದೆ. ಅಕ್ಟೋಬರ್​ 18ರಿಂದ 21ರವರೆಗೆ ರಾಜ್ಯ ತಂಡ ತವರಿನ ಬೆಂಗಳೂರು ಹೊರವಲಯದ ಆಲೂರಿನಲ್ಲಿ ತನ್ನ 2ನೇ ಲೀಗ್​ ಪಂದ್ಯ ಆಡಲಿದೆ. ಆದರೆ, ಅ.24ರಿಂದ ನ್ಯೂಜಿಲೆಂಡ್​ನಲ್ಲಿ ಆಡಲಿರುವ ಚತುರ್ದಿನ ಪಂದ್ಯಗಳ ಸರಣಿಗೆ ಆರ್​. ಸ್ಮರಣ್​ ಕೂಡ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಸ್ಮರಣ್​ 2ನೇ ಲೀಗ್​ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದ್ದು, ಮತ್ತೆ ಹೊಸ ನಾಯಕನನ್ನು ಹುಡುಕುವ ಸವಾಲು ರಾಜ್ಯ ತಂಡದ ಮುಂದಿದೆ. ಈ ಬಾರಿ ಮತ್ತೆ ಯುವ ನಾಯಕನಿಗೆ ತಂಡದ ಸಾರಥ್ಯ ವಹಿಸುವ ಬದಲು, ಮಯಾಂಕ್​ ಅಗರ್ವಾಲ್​ ಅಥವಾ ಕರುಣ್​ ನಾಯರ್​ರಂಥ ಅನುಭವಿಗಳಿಗೆ ಹಂಗಾಮಿ ಜವಾಬ್ದಾರಿ ಒಪ್ಪಿಸುವ ಸಾಧ್ಯತೆ ಇದೆ.