ಮನ್ವಂತ್​ಕುಮಾರ್-ಕರುಣ್​ ನಾಯರ್​ ಏಜೆನ್ಸಿ
ಕ್ರೀಡೆ

Ranji Trophy: ಕರ್ನಾಟಕವನ್ನು ಸೋಲಿನಿಂದ ಪಾರು ಮಾಡುವರೇ ಕರುಣ್​-ಸ್ಮರಣ್?

ಪಂದ್ಯದ ಕೊನೇ ದಿನವಾದ ಬುಧವಾರ ಆರ್​. ಸ್ಮರಣ್​ ಬಳಗ ದಿಟ್ಟ ಬ್ಯಾಟಿಂಗ್​ ನಿರ್ವಹಣೆ ತೋರದಿದ್ದರೆ ಸೋಲಿನಿಂದ ಪಾರಾಗುವುದು ಕಠಿಣವಾಗಲಿದೆ.

ವಿಜಯವಾಡ: ಮೊದಲ ಇನಿಂಗ್ಸ್​ ಹಿನ್ನಡೆಯ ಬಳಿಕ ಎರಡನೇ ಸರದಿಯಲ್ಲೂ ಆರಂಭಿಕ ಆಘಾತ ಎದುರಿಸಿರುವ ಹಾಲಿ ರನ್ನರ್​ಅಪ್​ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಆಂಧ್ರ ವಿರುದ್ಧ ಸೋಲಿನ ಭೀತಿಯಲ್ಲಿದೆ. ಪಂದ್ಯದ ಕೊನೇ ದಿನವಾದ ಬುಧವಾರ ಆರ್​. ಸ್ಮರಣ್​ ಬಳಗ ದಿಟ್ಟ ಬ್ಯಾಟಿಂಗ್​ ನಿರ್ವಹಣೆ ತೋರದಿದ್ದರೆ ಸೋಲಿನಿಂದ ಪಾರಾಗುವುದು ಕಠಿಣವಾಗಲಿದೆ.

ಮುಲಪಾಡುವಿನ ಎಸಿಎ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮಂಗಳವಾರ 6 ವಿಕೆಟ್​ಗೆ 331 ರನ್​ಗಳಿಂದ ಮೂರನೇ ದಿನದಾಟ ಮುಂದುವರಿಸಿದ ಆಂಧ್ರ, ಮತ್ತೆ 87 ರನ್​ ಸೇರಿಸಿ 121.5 ಓವರ್​ಗಳಲ್ಲಿ 418 ರನ್​ಗಳಿಗೆ ಆಲೌಟ್​ ಆಯಿತು. 144 ರನ್​ ಮೊದಲ ಇನಿಂಗ್ಸ್​ ಹಿನ್ನಡೆಯೊಂದಿಗೆ 2ನೇ ಸರದಿ ಆರಂಭಿಸಿದ ಕರ್ನಾಟಕ, 43 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಆಘಾತ ಎದುರಿಸಿತು. ಆಗ ಅನುಭವಿ ಬ್ಯಾಟರ್​ ಕರುಣ್​ ನಾಯರ್​ (81*ರನ್​, 130 ಎಸೆತ, 8 ಬೌಂಡರಿ, 2 ಸಿಕ್ಸರ್​) ಆಸರೆಯಾಗಿ ನಿಂತರು. ಇದರಿಂದ ಕರ್ನಾಟಕ ದಿನದಂತ್ಯಕ್ಕೆ 60 ಓವರ್​ಗಳಲ್ಲಿ 4 ವಿಕೆಟ್​ಗೆ 176 ರನ್​ ಕಲೆಹಾಕಿದ್ದು, ಸದ್ಯ 32 ರನ್​ ಮುನ್ನಡೆಯಲ್ಲಿದೆ.

ಕೆಎಲ್​ ರಾಹುಲ್​ (1) ಮತ್ತು ಮಯಾಂಕ್​ ಅಗರ್ವಾಲ್​ (18) ಮತ್ತೊಮ್ಮೆ ಅಗ್ಗಕ್ಕೆ ಔಟಾದರೆ, 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಆಡಿದ ಮನ್ವಂತ್​ ಕುಮಾರ್​ (44) ಜತೆ ಕರುಣ್​ 4ನೇ ವಿಕೆಟ್​ಗೆ 94 ರನ್​ ಸೇರಿಸುವ ಮೂಲಕ ಚೇತರಿಕೆ ಒದಗಿಸಿದರು. ಕರುಣ್​ ಜತೆ ನಾಯಕ ಆರ್​. ಸ್ಮರಣ್​ (21*) ಕೊನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಶಿಖರ್​ ಶೆಟ್ಟಿಗೆ 6 ವಿಕೆಟ್​

ಎಡಗೈ ಸ್ಪಿನ್ನರ್​ ಶಿಖರ್​ ಶೆಟ್ಟಿ (115ಕ್ಕೆ 6) ಜೀವನಶ್ರೇಷ್ಠ ಬೌಲಿಂಗ್​ ನಿರ್ವಹಣೆಯ ಮೂಲಕ ಆಂಧ್ರ ಮುನ್ನಡೆಗೆ ನಿಯಂತ್ರಣ ಹೇರಿದರು. 3ನೇ ದಿನ ಉರುಳಿದ ಆಂಧ್ರದ 4 ವಿಕೆಟ್​ಗಳಲ್ಲಿ 3 ಶಿಖರ್​ ಪಾಲಾದವು. 108 ರನ್​ಗಳಿಂದ ದಿನದಾಟ ಆರಂಭಿಸಿದ ಶತಕವೀರ ಸೀರಂ ವೆಂಕಟ ರಾಹುಲ್​ (119), ದಿನದ 12ನೇ ಓವರ್​ನಲ್ಲಿ ರಿತೇಶ್​ ಭಟ್ಕಳ್​ಗೆ ವಿಕೆಟ್​ ಒಪ್ಪಿಸಿದರು. ಬಳಿಕ ಕೆವಿ ಶಶಿಕಾಂತ್​ (39) ಮತ್ತು ಸೌರಭ್​ ಕುಮಾರ್​ (24) ಕೆಲಕಾಲ ರಾಜ್ಯವನ್ನು ಕಾಡಿದರು. ಅಂತಿಮವಾಗಿ ಶಿಖರ್​ 23 ರನ್​ ಅಂತರದಲ್ಲಿ ಕೊನೇ 3 ವಿಕೆಟ್​ ಕಬಳಿಸಿ ಆಂಧ್ರವನ್ನು ಸರ್ವಪತನಗೊಳಿಸಿದರು.

ಕರ್ನಾಟಕ: 274 ಮತ್ತು 60 ಓವರ್​ಗಳಲ್ಲಿ 4 ವಿಕೆಟ್​ಗೆ 176 (ಮಯಾಂಕ್​ 18, ರಾಹುಲ್​ 1, ಮನ್ವಂತ್​ 44, ಕೆವಿ ಅನೀಶ್​ 6, ಕರುಣ್​ 81*, ಆರ್​. ಸ್ಮರಣ್​ 21*, ಸೌರಭ್​ 40ಕ್ಕೆ 3, ಲಲಿತ್​ 55ಕ್ಕೆ 1), ಆಂಧ್ರ: 121.5 ಓವರ್​ಗಳಲ್ಲಿ 418 (ಸೀರಂ ರಾಹುಲ್​ 119, ಶಶಿಕಾಂತ್​ 39, ಸೌರಭ್​ 24, ಲಲಿತ್​ ಮೋಹನ್​ 16*, ಶಿಖರ್​ ಶೆಟ್ಟಿ 115ಕ್ಕೆ 6, ಮಾಧವ್​ 94ಕ್ಕೆ 2, ರಿತೇಶ್​ 109ಕ್ಕೆ 2).

*6: ಶಿಖರ್​ ಶೆಟ್ಟಿ 115 ರನ್​ಗಳಿಗೆ 6 ವಿಕೆಟ್​ ಕಬಳಿಸಿ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ತನ್ನ ಜೀವನಶ್ರೇಷ್ಠ ಬೌಲಿಂಗ್​ ನಿರ್ವಹಣೆ ತೋರಿದರು. ಅವರಿಗೆ ಇದು 2ನೇ ಬಾರಿ 5 ವಿಕೆಟ್​ ಗೊಂಚಲು ಆಗಿದೆ.