ಶತಕ ಬಾರಿಸಿದ ಜಮ್ಮು-ಕಾಶ್ಮೀರ (Ranaji Final) ತಂಡದ ಶುಭಂ ಪುಂದಿರ
ಹುಬ್ಬಳ್ಳಿ: ಆತಿಥೇಯ ಕರ್ನಾಟಕ ತಂಡದ (Ranaji Final) ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿದ ಜಮ್ಮು-ಕಾಶ್ಮೀರ ತಂಡ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿ ಫೈನಲ್ನಲ್ಲಿ ಮೊದಲ ದಿನದ ಗೌರವ ಸಂಪಾದಿಸಿದೆ. ಶುಭಂ ಪಂದಿರ ಅಜೇಯ ಶತಕ (117ರನ್, 221 ಎಸೆತ, 12 ಬೌಂಡರಿ, 2 ಸಿಕ್ಸರ್) ಹಾಗೂ ಯಾವರ್ ಹಸನ್ (88ರನ್, 150ಎಸೆತ, 13 ಬೌಂಡರಿ) ಮತ್ತು ಅಬ್ದುಲ್ ಸಮದ್ (52ರನ್ ಅ, 67ಎಸೆತ, 5ಬೌಂಡರಿ, 1ಸಿಕ್ಸರ್) ಅರ್ಧಶತಕಗಳ ನೆರವಿನಿಂದ ಪ್ರವಾಸಿಗರು ಬೃಹತ್ ಮೊತ್ತದತ್ತ ಚಿತ್ತ ನೆಟ್ಟಿದ್ದಾರೆ.
ಇಲ್ಲಿಯ ರಾಜನಗರ ಕೆಎಸ್ಸಿಎ ಮೈದಾನದಲ್ಲಿ ಮಂಗಳವಾರ ದಿನದಾಟದ ಅಂತ್ಯಕ್ಕೆ ಜಮ್ಮು ಕಾಶ್ಮೀರ 2 ವಿಕೆಟ್ಗೆ 284 ರನ್ ಗಳಿಸುವ ಮೂಲಕ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದನ್ನು ಸಮರ್ಥಿಸಿಕೊಂಡಿತು.
ಎರಡು ಶತಕದ ಜೊತೆಯಾಟಗಳು ಪ್ರವಾಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣವಾದವು. 2ನೇ ವಿಕೆಟ್ಗೆ ಹಸನ್ ಹಾಗೂ ಶುಭಂ 139ರನ್ ಸೇರಿಸಿದರು. ಪ್ರಸಿದ್ಧ ಕೃಷ್ಣ ಎಸೆತದಲ್ಲಿ ಹಸನ್ 2ನೇ ಸ್ಲಿಪ್ನಲ್ಲಿ ಕೆ.ಎಲ್. ರಾಹುಲ್ಗೆ ಕ್ಯಾಚ್ ನೀಡುವ ಮೂಲಕ ಈ ಜೊತೆಯಾಟ ಬೇರ್ಪಟ್ಟಿತು. ಮುರಿಯದ 3ನೇ ವಿಕೆಟ್ಗೆ ಶುಭಂ ಹಾಗೂ ಅಬ್ದುಲ್ ಸಮದ್ 105 ರನ್ ಸೇರಿಸಿದ್ದಾರೆ. ಈ ನಡುವೆ ಶಿಖರ ಶೆಟ್ಟಿ ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸಿ 186 ಎಸೆತಗಳಲ್ಲಿ ಶುಭಂ ಶತಕ ಪೂರೈಸಿದರು. ಇದು ಶುಭಂಗೆ ರಣಜಿಯಲ್ಲಿ 4ನೇ ಶತಕವಾಗಿದೆ.
ಜಮ್ಮು - ಕಾಶ್ಮೀರ: 87 ಓವರ್ಗಳಲ್ಲಿ 2 ವಿಕೆಟ್ಗೆ 284ರನ್ (ಯಾವರ್ ಹಸನ್ 88, ಶುಭಂ ಪುಂದಿರ್ 117ಅ, ಅಬ್ದುಲ್ ಸಮದ್ 52ಅ, ಪ್ರಸಿದ್ಧ ಕೃಷ್ಣ 36ಕ್ಕೆ 2).