ಕ್ರೀಡೆ

ನಮ್ಮ ನ್ಯೂನ್ಯತೆಗಳು ಬೆತ್ತಲಾಗಿದ್ದೇ ಇವರಿಂದ… ಟೀಮ್ ಇಂಡಿಯಾ ವಿರುದ್ಧ ಕಿಡಿಕಾರಿದ ಪಾಕ್ ಮಾಜಿ ಕ್ರಿಕೆಟಿಗ

ರಾವಲ್​ಪಿಂಡಿ: ಟೀಮ್ ಇಂಡಿಯಾ ವಿರುದ್ಧ ನೆಗೆಟಿವ್ ಕಮೆಂಟ್ ಮಾಡೋದು, ಸರಣಿ ಆರೋಪಗಳನ್ನು ಲೇಪಿಸಿವುದು ಹೀಗೆ ಭಾರತೀಯ ಕ್ರಿಕೆಟಿಗರ ಮೇಲೆ ಇಲ್ಲಸಲ್ಲದ ವಿಚಾರಗಳಿಗೆ ವಾಗ್ದಾಳಿ ನಡೆಸುವ ಪಾಕಿಸ್ತಾನ ಆಟಗಾರರ ಚಾಳಿ ಇಂದು ನಿನ್ನೆಯದಲ್ಲ! ಈ ಹಿಂದಿನಿಂದಲೂ ಇಂತಹ ಅಭ್ಯಾಸ ಅವರಿಗಿದೆ ಎಂದರೆ ತಪ್ಪಾಗಲಾರದು. 2025ರ ಚಾಂಪಿಯನ್ಸ್​ ಟ್ರೋಫಿಗಾಗಿ ತಮ್ಮ ನೆಲಕ್ಕೆ ಟೀಮ್ ಇಂಡಿಯಾ ಬರುವುದಿಲ್ಲ ಎಂಬುದನ್ನು ಅರಿತ ಪಾಕ್​ ಮಾಜಿ ಆಟಗಾರರು, ಹೇಗಾದರೂ ಮಾಡಿ ಭಾರತವನ್ನು ಪಾಕಿಸ್ತಾನಕ್ಕೆ ಕರೆಸಿಕೊಳ್ಳಬೇಕು ಎಂದು ನಾನಾ ರೀತಿಯಲ್ಲಿ ಕಸರತ್ತು ಮಾಡಿದರು. ಆದ್ರೆ, ಅದ್ಯಾವುದು ಫಲಿಸಲಿಲ್ಲ. ಈಗ ಟೀಮ್ ಇಂಡಿಯಾ ಮೇಲೆ ಮತ್ತೊಂದು ಆರೋಪ ಎಸಗಿರುವ ರಮೀಜ್ ರಾಜಾ, ನಮ್ಮ ನ್ಯೂನ್ಯತೆಗಳು ಎಲ್ಲರಿಗೂ ಗೊತ್ತಾಗಿದ್ದೆ ಭಾರತದಿಂದ ಎಂದು ಕಿಡಿಕಾರಿದ್ದಾರೆ.

ಎರಡು ಪಂದ್ಯಗಳ ಮೊದಲ ಟೆಸ್ಟ್​ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ 10 ವಿಕೆಟ್​ಗಳ ಅಂತರದಿಂದ ಹೀನಾಯವಾಗಿ ಸೋತ ಪಾಕಿಸ್ತಾನ, ತಮ್ಮನ್ನು ನಿರಂತರವಾಗಿ ಬೆಂಬಲಿಸಿಕೊಂಡು ಬಂದ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿತು. ಬಾಂಗ್ಲಾ ಬೌಲರ್​ಗಳ ಎದುರು ನಮ್ಮ ವೇಗಿಗಳು ಕಮಾಲ್ ಮಾಡಲಿಲ್ಲ ಎಂದು ತೀವ್ರ ಅಸಮಾಧಾನಗೊಂಡ ರಮೀಜ್​, ಮೊದಲು ತಂಡದ ಆಯ್ಕೆಯೇ ಸರಿಯಿಲ್ಲ. ಒಬ್ಬ ಸ್ಪಿನ್ನರ್​ನೂ ಕೂಡ ಪರಿಗಣಿಸದೆ ಕೇವಲ ಪೇಸರ್​ಗಳನ್ನೇ ತಂಡಕ್ಕೆ ಸೇರಿಸಿಕೊಂಡಿದ್ದು ದೊಡ್ಡ ತಪ್ಪು ಎಂದು ಆಯ್ಕೆ ಸಮಿತಿಯನ್ನು ದೂಷಿಸಿದರು.

"ನಮ್ಮ ಬೌಲರ್​ಗಳಲ್ಲಿ ಆತ್ಮವಿಶ್ವಾಸ ಕುಂದಿದೆ. ಇದಕ್ಕೆ ಕಾರಣ 2023ರ ಏಷ್ಯಾ ಕಪ್​ನಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು. ಪಾಕ್​ ವೇಗಿಗಳ ಬೌಲಿಂಗ್​ನ ಬಹಳ ಸಿಂಪಲ್ ಆಗಿ ಪರಿಗಣಿಸಿದ ಬ್ಯಾಟರ್ಸ್​, ಅಂದು ಹಿಗ್ಗಾಮುಗ್ಗಾ ರನ್​ಗಳನ್ನು ಸ್ಕೋರ್​ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ನಮ್ಮವರಲ್ಲಿ ಬೌಲಿಂಗ್ ಸೀಕ್ರೆಟ್​ ಇಲ್ಲವೇ ಇಲ್ಲ. ಅವರ ವೇಗದಲ್ಲಿ ಕುಂಠಿತವಿದೆ. ಇದೆಲ್ಲದಕ್ಕೂ ಟೀಮ್ ಇಂಡಿಯಾನೇ ಕಾರಣ" ಎಂದು ರಮೀಜ್ ಹೇಳಿದ್ದಾರೆ. ಸದ್ಯ ರಾಜಾ ಹೇಳಿಕೆಯು ಸಂಪೂರ್ಣವಾಗಿ ಆಧಾರರಹಿತವಾಗಿದ್ದು, ಮತ್ತೊಮ್ಮೆ ನೆಟ್ಟಿಗರ ಕೆಂಗಣಿಗೆ ಗುರಿಯಾಗಿದ್ದಾರೆ,(ಏಜೆನ್ಸೀಸ್).