Rajat Patidar : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಟ್ರೋಫಿ ಬರ ನೀಗಿದೆ. ಸುದೀರ್ಘ 18 ವರ್ಷಗಳ ಕಾಯುವಿಕೆ ಬಳಿಕ ಆರ್‌ಸಿಬಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಹೊಸ ನಾಯಕ ರಜತ್ ಪಾಟೀದಾರ್ ನೇತೃತ್ವದಲ್ಲಿ, ಈ ಸೀಸನ್ನಲ್ಲಿ ಕಣಕ್ಕಿಳಿದ ಆರ್‌ಸಿಬಿ, ಎಲ್ಲರ ನಿರೀಕ್ಷೆಯಂತೆ ಟ್ರೋಫಿಗೆ ಮುತ್ತಿಟ್ಟಿದೆ.
18 ವರ್ಷದ ಬರ ನೀಗಿದ ಹಿನ್ನೆಲೆಯಲ್ಲಿ ಆರ್‌ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಇಡೀ ರಾಜ್ಯಾದ್ಯಂತ ಸಂಭ್ರಮ ಮನೆ ಮಾಡಿದೆ. ಗಣ್ಯ ವ್ಯಕ್ತಿಗಳು ಕೂಡ ಆರ್‌ಸಿಬಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. ಇಂಥದ್ದೊಂದು ಅದ್ಭುತ ಕ್ಷಣಕ್ಕೆ ಕಾರಣರಾದ ನಾಯಕ ರಜತ್ ಪಾಟೀದಾರ್ ಅವರಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಆರ್‌ಸಿಬಿಗೆ ಐಪಿಎಲ್ ಟ್ರೋಫಿಯನ್ನು ನೀಡಿದ ನಾಯಕನಾಗಿ ರಜತ್ ದಾಖಲೆ ಪುಸ್ತಕಗಳನ್ನು ಪ್ರವೇಶಿಸಿದ್ದಾರೆ.
ಐಪಿಎಲ್ ಗೆದ್ದ ಸಂಭ್ರಮಾಚರಣೆ ನಡುವೆ ನಾಯಕ ರಜತ್ ಪಾಟೀದಾರ್ ಅವರ ಈ ಹಿಂದಿನ ಹೇಳಿಕೆಗಳು ಮತ್ತೊಮ್ಮೆ ವೈರಲ್ ಆಗುತ್ತಿವೆ. ಆರ್‌ಸಿಬಿ ಫ್ರಾಂಚೈಸಿ ತನ್ನ ಮಾತನ್ನು ಮುರಿದಿತ್ತು ಮತ್ತು ಆ ತಂಡಕ್ಕೆ ಮತ್ತೆಂದೂ ಆಡಬಾರದೆಂದು ನಾನು ಭಾವಿಸಿದ್ದೆ ಅಂತ ರಜತ್ ಹಿಂದೊಮ್ಮೆ ಹೇಳಿದ್ದರು. ಐಪಿಎಲ್ 2025ರ ಸೀಸನ್ ಆರಂಭದಲ್ಲಿ ಆರ್‌ಸಿಬಿ ಪಾಡ್‌ಕಾಸ್ಟ್‌ನೊಂದಿಗೆ ಮಾತನಾಡುವಾಗ ರಜತ್ ಇದನ್ನು ಬಹಿರಂಗಪಡಿಸಿದ್ದರು. ಇದು 2022 ರಲ್ಲಿ ನಡೆದ ಘಟನೆ ಎಂದು ಹೇಳಿದ್ದರು.
ಆರ್‌ಸಿಬಿ ಆಡಳಿತ ಮಂಡಳಿಯು ಐಪಿಎಲ್ 2022ರ ಹರಾಜಿನಲ್ಲಿ ನನ್ನನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿತ್ತು. ನನಗೆ ಕರೆ ಮಾಡಿ, 2022ರ ಸೀಸನ್‌ಗೆ ಸಿದ್ಧರಾಗಿರಲು ಹೇಳಿದ್ದರು. ಈ ವೇಳೆ ಮತ್ತೆ ಆರ್‌ಸಿಬಿ ಪರ ಆಡಲಿದ್ದೇನೆ ಎಂದು ತಿಳಿದು ತುಂಬಾ ಸಂತೋಷವಾಗಿದ್ದೆ. ಆದರೆ, ಆರ್‌ಸಿಬಿ ಆ ಹರಾಜಿನಲ್ಲಿ ನನ್ನನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಇದರಿಂದ ನನಗೆ ತುಂಬಾ ನೋವಾಯಿತು ಎಂದು ರಜತ್ ಹೇಳಿದ್ದರು.
ಬೇರೆ ಯಾವುದೇ ಕೆಲಸವಿಲ್ಲದ ಕಾರಣ ಸ್ಥಳೀಯ ಪಂದ್ಯಗಳನ್ನು ಆಡುತ್ತಿದ್ದೆ. ಈ ಸಂದರ್ಭದಲ್ಲಿ ಆರ್‌ಸಿಬಿಯಿಂದ ಮತ್ತೆ ಕರೆ ಬಂತು. ಲವೆನಿತ್ ಸಿಸೋಡಿಯಾ ಗಾಯಗೊಂಡಿದ್ದಾರೆ ಮತ್ತು ಅವರ ಬದಲಿ ಆಟಗಾರನಾಗಿ ನಿಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು. ನಿಜ ಹೇಳಬೇಕೆಂದರೆ, ಆ ಸಮಯದಲ್ಲಿ ನಾನು ಆರ್‌ಸಿಬಿ ಪರ ಆಡಲು ಬಯಸಲಿಲ್ಲ. ಏಕೆಂದರೆ ನಾನು ಗಾಯದ ಬದಲಿಯಾಗಿ ಹೋದರೆ, ಅಂತಿಮ ತಂಡದಲ್ಲಿ ನನಗೆ ಹೆಚ್ಚಿನ ಅವಕಾಶಗಳು ಸಿಗುವುದಿಲ್ಲ. ನಾನು ಡಗೌಟ್‌ನಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ನಾನು ಡಗೌಟ್‌ನಲ್ಲಿ ಕುಳಿತುಕೊಂಡು ಪಂದ್ಯಗಳನ್ನು ನೋಡುವುದು ನನಗೆ ಇಷ್ಟವಿಲ್ಲ ಎಂದು ರಜತ್ ಆರ್‌ಸಿಬಿ ಪಾಡ್ಕಾಸ್ಟ್ನಲ್ಲಿ ಹೇಳಿದ್ದರು.
ಇದೀಗ ಆರ್‌ಸಿಬಿ ಮೊದಲ ಟ್ರೋಪಿ ಜಯಿಸಿದ್ದು, ಇದೇ ಸಂದರ್ಭದಲ್ಲಿ ರಜತ್ ಅವರ ಹಳೆ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ಅಭಿಮಾನಿಗಳು ನಿಜವಾದ ಯಶಸ್ಸು ಅಂದ್ರೆ ಇದೇ ನೋಡಿ ಎಂದು ಕೊಂಡಾಡುತ್ತಿದ್ದಾರೆ.
ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿತು. ವಿರಾಟ್ ಕೊಹ್ಲಿ (43 ರನ್, 35 ಎಸೆತ, 3 ಬೌಂಡರಿ) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮಯಾಂಕ್ ಅಗರ್ವಾಲ್ (24), ರಜತ್ ಪಟಿದಾರ್ (26), ಲಿಯಾಮ್ ಲಿವಿಂಗ್‌ಸ್ಟೋನ್ (25), ಮತ್ತು ಜಿತೇಶ್ ಶರ್ಮಾ (24) ಉಪಯುಕ್ತ ರನ್ಗಳ ಕಾಣಿಕೆ ನೀಡಿದರು. ಪಂಜಾಬ್ ಬೌಲರ್‌ಗಳಲ್ಲಿ ಅರ್ಷದೀಪ್ ಸಿಂಗ್ ಮತ್ತು ಜೇಮಿಸನ್ ತಲಾ ಮೂರು ವಿಕೆಟ್ ಪಡೆದರು. ವಿಜಯ್ ಕುಮಾರ್ ವೈಶಾಕ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಪಂಜಾಬ್ ಪರ ಶಶಾಂಕ್ ಸಿಂಗ್ (ಅಜೇಯ 61 ರನ್, 30 ಎಸೆತ, 3 ಬೌಂಡರಿ, 6 ಸಿಕ್ಸರ್) ಮತ್ತು ಜೋಶ್ ಇಂಗ್ಲಿಷ್ (39 ರನ್, 23 ಎಸೆತ, 1 ಬೌಂಡರಿ, 4 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲರಾದರು, ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 184 ರನ್‌ಗಳಿಗೆ ಸೀಮಿತವಾಯಿತು. ಆರ್‌ಸಿಬಿ ಬೌಲರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು. ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್)