ಕ್ರೀಡೆ

ಶಾರ್ಜಾದಲ್ಲಿ ಇಂದು ರಾಯಲ್ಸ್-ಕ್ಯಾಪಿಟಲ್ಸ್ ಮುಖಾಮುಖಿ

ಶಾರ್ಜಾ: ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ರಾಜಸ್ಥಾನ ರಾಯಲ್ಸ್ ತಂಡ ಶುಕ್ರವಾರ ನಡೆಯಲಿರುವ ಐಪಿಎಲ್-13ರ ತನ್ನ 6ನೇ ಪಂದ್ಯದಲ್ಲಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಆರಂಭಿಕ ಎರಡೂ ಪಂದ್ಯಗಳಲ್ಲಿ ಜಯ ದಾಖಲಿಸಿ ಉತ್ತಮ ಆರಂಭ ಕಂಡಿದ್ದ ರಾಜಸ್ಥಾನ ತಂಡ ಬಳಿಕ ಹ್ಯಾಟ್ರಿಕ್ ಸೋಲಿನ ರುಚಿ ಕಂಡಿದೆ. ಶಾರ್ಜಾದಲ್ಲಿ ಆರಂಭಿಕ ಎರಡು ಪಂದ್ಯಗಳನ್ನು ಗೆದ್ದ ಬಳಿಕ ದುಬೈ ಹಾಗೂ ಅಬುದಾಬಿಯಲ್ಲಿ ಸೋತಿರುವ ರಾಜಸ್ಥಾನ ತಂಡ, ಇದೀಗ ಶಾರ್ಜಾ ನೆಲದಲ್ಲೇ ಗೆಲುವಿನ ಹಳಿಗೇರುವ ತವಕದಲ್ಲಿದೆ. ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಯುಎಇ ತಲುಪಿದ್ದರೂ ಸದ್ಯ ಕ್ವಾರಂಟೈನ್‌ನಲ್ಲಿರುವುದರಿಂದ ಡೆಲ್ಲಿ ವಿರುದ್ಧದ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಮತ್ತೊಂದೆಡೆ, ಡೆಲ್ಲಿ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದೆ.

*ಗೆಲುವಿನ ವಿಶ್ವಾಸದಲ್ಲಿ ರಾಜಸ್ಥಾನ

ರಾಜಸ್ಥಾನ ರಾಯಲ್ಸ್ ಇದುವರೆಗೂ ಆಡಿರುವ 5 ಪಂದ್ಯಗಳಲ್ಲಿ 2 ಗೆಲುವು, 3 ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ತಂಡದ ಲಕ್ಕಿ ಮೈದಾನ ಶಾರ್ಜಾದಲ್ಲೇ ಜಯ ದಾಖಲಿಸಲು ಹೋರಾಡುತ್ತಿದೆ. ನಾಯಕ ಸ್ಟೀವನ್ ಸ್ಮಿತ್, ಸಂಜು ಸ್ಯಾಮ್ಸನ್ ಆರಂಭಿಕ ಹಂತದಲ್ಲಿ ಸಂಪೂರ್ಣ ವಿಫಲರಾಗುತ್ತಿದ್ದಾರೆ. ಸ್ಯಾಮ್ಸನ್ ಆರಂಭಿಕ 2 ಪಂದ್ಯಗಳಲ್ಲಿ ಸಿಡಿದರೂ ಸತತ 3 ಪಂದ್ಯಗಳಲ್ಲಿ ರನ್‌ಗಳಿಸಲು ಪರದಾಡಿದ್ದಾರೆ. ಮುಂಬೈ ಎದುರು ಜೋಸ್ ಬಟ್ಲರ್ ಹೊರತುಪಡಿಸಿ ಬ್ಯಾಟಿಂಗ್ ವಿಭಾಗದ ಸಂಪೂರ್ಣ ವೈಫಲ್ಯ ಅನುಭವಿಸಿತ್ತು. ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಮುಂಬೈ ಎದುರು ತಂಡದಲ್ಲಿ ಸ್ಥಾನ ಪಡೆದರೂ ಕನಿಷ್ಠ ಖಾತೆ ತೆರೆಯಲು ವಿಫಲರಾಗಿದ್ದರು. ಯುವ ಆಟಗಾರರ ಪೈಕಿ ಕಾರ್ತಿಕ್ ತ್ಯಾಗಿ ಹೊರತುಪಡಿಸಿ ಸಿಕ್ಕ ಮೊದಲ ಅವಕಾಶವನ್ನೇ ಸೂಕ್ತವಾಗಿ ಬಳಸಿಕೊಂಡರು.

*ಆತ್ಮವಿಶ್ವಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್

ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಜಯ ದಾಖಲಿಸಿ ಏಕೈಕ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವಿನ ನಾಗಾಲೋಟದಲ್ಲಿ ಮುಂದುವರಿಯವ ವಿಶ್ವಾಸದಲ್ಲಿದೆ. ನಾಯಕ ಶ್ರೇಯಸ್ ಅಯ್ಯರ್, ಆರಂಭಿಕ ಪೃಥ್ವಿ ಷಾ, ರಿಷಭ್ ಪಂತ್ ಭರ್ಜರಿ ಫಾರ್ಮ್‌ನಲ್ಲಿದ್ದರೆ, ಮಾರ್ಕಸ್ ಸ್ಟೋಯಿನಿಸ್ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ. ಕಗಿಸೊ ರಬಾಡ, ಆನ್ರಿಚ್ ನೋರ್ಜೆ ಜೋಡಿ ಲೀಗ್‌ನಲ್ಲಿ ಇದುವರೆಗೆ 19 ವಿಕೆಟ್ ಹಂಚಿಕೊಂಡಿದೆ.

ಟೀಮ್ ನ್ಯೂಸ್:

ರಾಜಸ್ಥಾನ ರಾಯಲ್ಸ್: ಗೆಲುವು ದಾಖಲಿಸಲು ಪರದಾಡುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಕೆಲ ಬದಲಾವಣೆ ಕಾಣುವುದು ನಿಶ್ಚಿತ. ಕಳೆದ ಪಂದ್ಯದಲ್ಲಿ 3 ಬದಲಾವಣೆ ಮಾಡಿಕೊಂಡಿದ್ದ ರಾಯಲ್ಸ್ ತಂಡ, ಕೆಲ ಅನುಭವಿ ಆಟಗಾರರಿಗೆ ಕೊಕ್ ನೀಡಿತ್ತು. ಕಾರ್ತಿಕ್ ತ್ಯಾಗಿ ಪದಾರ್ಪಣೆ ಪಂದ್ಯದಲ್ಲೇ ಗಮನಸೆಳೆದಿರುವ ಕಾರಣ ಮತ್ತೊಂದು ಅವಕಾಶ ನೀಡಬಹುದು. ದುಬಾರಿಯಾಗಿದ್ದ ಅಂಕಿತ್ ರಜಪೂತ್ ಬದಲಿಗೆ ಜೈದೇವ್ ಉನಾದ್ಕತ್ ವಾಪಸಾಗಬಹುದು. ಶೂನ್ಯ ಸುತ್ತಿದ್ದ ಯಶಸ್ವಿ ಜೈಸ್ವಾಲ್ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಪಂದ್ಯ: ಮುಂಬೈ ಇಂಡಿಯನ್ಸ್ ಎದುರು 57 ರನ್ ಸೋಲು.

* ಸಂಭಾವ್ಯ ತಂಡ: ಯಶಸ್ವಿ ಜೈಸ್ವಾಲ್, ಜೋಶ್ ಬಟ್ಲರ್ (ವಿಕೀ), ಸ್ಟೀವನ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ಮಹಿಪಾಲ್ ಲೊಮ್ರೊರ್, ಟಾಮ್ ಕರ‌್ರನ್, ರಾಹುಲ್ ತೆವಾಟಿಯಾ, ಜ್ರೋಾ ಆರ್ಚರ್, ಶ್ರೇಯಸ್ ಗೋಪಾಲ್, ಅಂಕಿತ್ ರಜಪೂತ್/ಜೈದೇವ್ ಉನಾದ್ಕತ್, ಕಾರ್ತಿಕ್ ತ್ಯಾಗಿ.

ಡೆಲ್ಲಿ ಕ್ಯಾಪಿಟಲ್ಸ್: ತಂಡ ಗೆಲುವಿನ ಲಯದಲ್ಲಿರುವುದರಿಂದ ಬದಲಾವಣೆ ಸಾಧ್ಯತೆ ಕಡಿಮೆ. ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಕಾಣದಿದ್ದರೂ ಮಧ್ಯಮ ವೇಗದ ಬೌಲರ್ ಹರ್ಷಲ್ ಪಟೇಲ್ ಅನುಭವಿ ಇಶಾಂತ್ ಶರ್ಮ ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಕಳೆದ ಪಂದ್ಯ: ಆರ್‌ಸಿಬಿ ಎದುರು 59 ರನ್ ಜಯ.

* ಸಂಭಾವ್ಯ ತಂಡ: ಪೃಥ್ವಿ ಷಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ವಿಕೀ), ಮಾರ್ಕಸ್ ಸ್ಟೋಯಿನಿಸ್, ಶಿಮ್ರೋನ್ ಹೆಟ್ಮೆಯೆರ್, ಆರ್.ಅಶ್ವಿನ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್/ಇಶಾಂತ್ ಶರ್ಮ, ಕಗಿಸೊ ರಬಾಡ, ಅನ್ರಿಚ್ ನೋರ್ಜೆ

ಪಂದ್ಯ ಆರಂಭ: ರಾತ್ರಿ : 7.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 20, ರಾಜಸ್ಥಾನ ರಾಯಲ್ಸ್: 11, ಡೆಲ್ಲಿ ಕ್ಯಾಪಿಟಲ್ಸ್: 9.