ಕ್ರೀಡೆ

ಕುತೂಹಲ ಕೆರಳಿಸಿದೆ ವಾಂಖೆಡೆ ಪಿಚ್! ಮುಂಬೈ ಟೆಸ್ಟ್‌ಗೆ ಕಾಡುವುದೇ ಮಳೆ?

ಮುಂಬೈ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಗೆಲುವಿನ ಸನಿಹ ಬಂದರೂ, ಕಾನ್ಪುರ ಪಿಚ್ ಹೆಚ್ಚಿನ ನೆರವು ನೀಡದ ಕಾರಣ ಭಾರತ ತಂಡ ಡ್ರಾಕ್ಕೆ ತೃಪ್ತಿಪಟ್ಟಿತ್ತು. ಹೀಗಾಗಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ನಡೆಯಲಿರುವ 2ನೇ ಹಾಗೂ ನಿರ್ಣಾಯಕ ಅಂತಿಮ ಟೆಸ್ಟ್ ಪಂದ್ಯಕ್ಕೆ ಸಂಪೂರ್ಣವಾಗಿ ಸ್ಪಿನ್ ಸ್ನೇಹಿಯಾದ ಪಿಚ್ ನಿರ್ಮಾಣಗೊಳ್ಳುವ ನಿರೀಕ್ಷೆ ಇದೆ. ಆದರೆ ಪಿಚ್ ಹಸಿರಾಗಿರಲಿದೆ ಎಂದು ಕೆಲ ವರದಿಗಳು ತಿಳಿಸಿವೆ. ಇದರಿಂದಾಗಿ ವಾಂಖೆಡೆ ಪಿಚ್ ಬಗ್ಗೆ ಹೆಚ್ಚಿನ ಕುತೂಹಲ ಮೂಡಿದೆ.

ಮೊದಲ ದಿನದಿಂದಲೇ ಸ್ಪಿನ್ನರ್‌ಗಳಿಗೆ ನೆರವಾಗುವ ಪಿಚ್ ಸಿದ್ಧಗೊಳಿಸಿದ್ದೇವೆ. ಆತಿಥೇಯ ತಂಡದ ಬಲಕ್ಕೆ ತಕ್ಕ ಪಿಚ್ ನಿರ್ಮಿಸಿದ್ದೇವೆ ಎಂದು ಆತಿಥೇಯ ಮುಂಬೈ ಕ್ರಿಕೆಟ್ ಸಂಸ್ಥೆಯ ಮೂಲಗಳು ತಿಳಿಸಿವೆ. ಇದರಿಂದಾಗಿ ಈ ಬಾರಿ ಕಿವೀಸ್‌ಗೆ ಹೆಚ್ಚಿನ ಸ್ಪಿನ್ ಸವಾಲು ಎದುರಾಗುವ ನಿರೀಕ್ಷೆ ಇದೆ. ಆದರೆ, ಪಿಚ್‌ನಲ್ಲಿ ಹೆಚ್ಚಿನ ಹುಲ್ಲು ಇರಲಿದೆ. ಹೀಗಾಗಿ ಹೆಚ್ಚಿನ ತಿರುವು ಇರಲಾರದು. ಪಂದ್ಯಕ್ಕೆ ಮುನ್ನ ಹುಲ್ಲು ಸ್ವಲ್ಪಮಟ್ಟಿಗೆ ಕತ್ತರಿಸಲ್ಪಟ್ಟರೂ, ಹಸಿರಾಗಿಯೇ ಕಾಣಿಸಲಿದೆ ಎಂದು ಬಿಸಿಸಿಐ ಪಿಚ್ ಸಮಿತಿಯ ಮೂಲಗಳು ತಿಳಿಸಿವೆ ಎಂಬುದಾಗಿ ಇನ್ನೊಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲದೆ ಅಲ್ಲದೆ ಮಳೆಯಿಂದಾಗಿ ಪಿಚ್ ಮೇಲೆ ತೇವಾಂಶ ಉಳಿದುಕೊಂಡರೆ ಕೂಡ ವೇಗಿಗಳಿಗೆ ಅದು ನೆರವಾಗಲಿದೆ. ಇದರಿಂದ ಭಾರತ ಮತ್ತೊಮ್ಮೆ 3 ಸ್ಪಿನ್ನರ್ ಗಳನ್ನು ಆಡಿಸುವ ಬಗ್ಗೆ ಅನುಮಾನವಿದೆ. ಮೂರನೇ ವೇಗಿಯಾಗಿ ಅಥವಾ ಇಶಾಂತ್ ಶರ್ಮ ಬದಲಿಗೆ ಮೊಹಮದ್ ಸಿರಾಜ್ ಆಡಲಿದ್ದಾರೆ ಎಂದೂ ಹೇಳಲಾಗಿದೆ. ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ವಿರಾಟ್ ಕೊಹ್ಲಿ ಗುರುವಾರ ಪಿಚ್ ಪರಿಶೀಲಿಸಿದ ಬಳಿಕವೇ ತಂಡ ಸಂಯೋಜನೆ ಅಂತಿಮವಾಗಲಿದೆ ಎನ್ನಲಾಗಿದೆ.

ಅಭ್ಯಾಸಕ್ಕೆ ಮಳೆ ಅಡಚಣೆ

ಮಳೆ ಅಡಚಣೆಯಿಂದಾಗಿ ಭಾರತ-ನ್ಯೂಜಿಲೆಂಡ್ ತಂಡಗಳಿಗೆ ಬುಧವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ದಕ್ಷಿಣ ಮುಂಬೈನಲ್ಲಿ ಬೆಳಗ್ಗೆಯಿಂದಲೇ ಸುರಿದ ಮಳೆಯಿಂದಾಗಿ ವಾಂಖೆಡೆ ಮೈದಾನವನ್ನು ಹೊದಿಕೆಯಿಂದ ಮುಚ್ಚಲಾಗಿತ್ತು. ಇದರಿಂದಾಗಿ ಉಭಯ ತಂಡಗಳ ಅಭ್ಯಾಸ ಅವಧಿಯನ್ನು ರದ್ದುಗೊಳಿಸಲಾಯಿತು. ಕಾನ್ಪುರ ಟೆಸ್ಟ್ ಮುಗಿದ ಬಳಿಕ ಉಭಯ ತಂಡಗಳು ಮಂಗಳವಾರ ಸಂಜೆ ಮುಂಬೈಗೆ ಆಗಮಿಸಿದ್ದವು. ಹವಾಮಾನ ವರದಿಯ ಪ್ರಕಾರ, ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಅಡಚಣೆ ತರುವ ಭೀತಿ ಇದೆ. ಆದರೆ 2ನೇ ದಿನದಾಟದಿಂದ ಮಳೆ ಕಾಡುವ ಸಾಧ್ಯತೆ ಇಲ್ಲ.

ದ. ಆಫ್ರಿಕಾ ಪ್ರವಾಸಕ್ಕೆ ತಂಡ ಆಯ್ಕೆ ವಿಳಂಬ?

ಕರೊನಾ ವೈರಸ್ ಹೊಸ ತಳಿ ಒಮಿಕ್ರಾನ್ ಆತಂಕದಿಂದಾಗಿ ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಅನಿಶ್ಚಿತತೆ ಎದುರಿಸಿದೆ. ಕೇಂದ್ರ ಸರ್ಕಾರದಿಂದ ಇನ್ನೂ ಸ್ಪಷ್ಟ ಸೂಚನೆ ಬಾರದಿರುವುದರಿಂದ ಬಿಸಿಸಿಐಗೆ ಪ್ರವಾಸ ಮುಂದುವರಿಸುವ ಬಗ್ಗೆ ಗೊಂದಲ ಉಂಟಾಗಿದೆ. ಇದರಿಂದಾಗಿ ಪ್ರವಾಸಕ್ಕೆ ಭಾರತ ತಂಡದ ಆಯ್ಕೆಯೂ ವಿಳಂಬಗೊಂಡಿದೆ. ಈ ಹಿಂದಿನ ಯೋಜನೆಯ ಪ್ರಕಾರ, ಕಾನ್ಪುರ ಟೆಸ್ಟ್ ಬೆನ್ನಲ್ಲೇ ತಂಡ ಪ್ರಕಟಗೊಳ್ಳಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರದಿಂದ ಇನ್ನೂ ಹಸಿರು ನಿಶಾನೆ ಸಿಗದಿರುವುದರಿಂದ ಡಿಸೆಂಬರ್ 8 ಅಥವಾ 9ರಂದು ನಿಗದಿಯಂತೆ ಭಾರತ ತಂಡ ಪ್ರಯಾಣ ಬೆಳೆಸುವುದು ಕೂಡ ಅನುಮಾನವೆನಿಸಿದೆ. ಇದರಿಂದ ಪ್ರವಾಸದ ಪಂದ್ಯಗಳ ವೇಳಾಪಟ್ಟಿಯನ್ನೂ ಬದಲಾಯಿಸಬೇಕಾದ ಅನಿವಾರ‌್ಯತೆ ಎದುರಾಗಬಹುದು. ಒಟ್ಟಾರೆ ಮುಂದಿನ 48 ಗಂಟೆಗಳಲ್ಲಿ ಎಲ್ಲವೂ ಸ್ಪಷ್ಟವಾಗುವ ನಿರೀಕ್ಷೆ ಇದೆ.