ಕೊಲಂಬೊ: ಏಷ್ಯಾಕಪ್ ಏಕದಿನ ಟೂರ್ನಿಯ ಸೂಪರ್-4 ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಕುತೂಹಲಕಾರಿ ಹಣಾಹಣಿಗೆ ಮಳೆ ಅಡ್ಡಿಪಡಿಸಿದೆ. ನಾಯಕ ರೋಹಿತ್ ಶರ್ಮ ಹಾಗೂ ಶುಭಮಾನ್ ಗಿಲ್ ಶತಕದ ಜತೆಯಾಟವಾಡಿ ಭಾರತಕ್ಕೆ ಭದ್ರ ಆರಂಭ ಒದಗಿಸಿದ ಬಳಿಕ ಸುರಿದ ಭಾರಿ ಮಳೆಯಿಂದ ಪಂದ್ಯವನ್ನು ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲಾಗಿದೆ. ಮಳೆಗೆ ಒದ್ದೆಯಾಗಿದ್ದ ಮೈದಾನವನ್ನು ಒಣಗಿಸಲು ಆರ್. ಪ್ರೇಮದಾಸ ಕ್ರೀಡಾಂಗಣದ ಸಿಬ್ಬಂದಿ ಕಠಿಣ ಪರಿಶ್ರಮ ಪಟ್ಟರೂ, ಮಳೆ ಮತ್ತೆ ಮರುಕಳಿಸಿದ ಕಾರಣ ಪಂದ್ಯವನ್ನು ಮೀಸಲು ದಿನಕ್ಕೆ ವಿಸ್ತರಿಸುವುದು ಅನಿವಾರ‌್ಯವೆನಿಸಿತು.
ಮಳೆ ಮುನ್ಸೂಚನೆಯ ನಡುವೆ ಪಂದ್ಯ ನಿಗದಿತ ಸಮಯಕ್ಕೆ ಆರಂಭಗೊಂಡಿತು. ಟಾಸ್ ಗೆದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಟೀಮ್ ಇಂಡಿಯಾವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನ ನೀಡಿದರು. ನಾಯಕ ರೋಹಿತ್ ಶರ್ಮ (56 ರನ್, 49 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಶುಭಮಾನ್ ಗಿಲ್ (58 ರನ್, 52 ಎಸೆತ, 10 ಬೌಂಡರಿ) ಅರ್ಧಶತಕ ಸಿಡಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ ಇವರಿಬ್ಬರು ಕೇವಲ 3 ರನ್ ಅಂತರದಲ್ಲಿ ಔಟಾದ ಬೆನ್ನಲ್ಲೇ, ಭಾರತ ತಂಡ 24.1 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್‌ಗಳಿಸಿದ್ದಾಗ ಮಳೆಯಿಂದ ಆಟ ಸ್ಥಗಿತಗೊಂಡಿತು. ಆಗ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (8*) ಮತ್ತು ಮರಳಿ ಕಣಕ್ಕಿಳಿದಿರುವ ಕನ್ನಡಿಗ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ (17*) 3ನೇ ವಿಕೆಟ್‌ಗೆ 24 ರನ್ ಪೇರಿಸಿ ಕ್ರೀಸ್‌ನಲ್ಲಿದ್ದರು. ಬಳಿಕ ಆಟ ಪುನರಾರಂಭಗೊಳ್ಳಲು ಮಳೆ ಅವಕಾಶ ನೀಡಲಿಲ್ಲ. ಸೋಮವಾರ 24.1 ಓವರ್‌ಗಳಿಂದಲೇ ಟೀಮ್ ಇಂಡಿಯಾ ಬ್ಯಾಟಿಂಗ್ ಮುಂದುವರಿಸಲಿದೆ.