ಜೈಪುರ: ಟಿ20 ವಿಶ್ವಕಪ್ ಗೆಲುವೊನ ಬಳಿಕ ಟೀಮ್ ಇಂಡಿಯಾ ಕೋಚ್ ಹುದ್ದೆಯಿಂದ ರಿಲೀವ್ ಆಗಿರುವ ರಾಹುಲ್ ದ್ರಾವಿಡ್ ಸದ್ಯ ಸುದೀರ್ಘ ವಿರಾಮ ಪಡೆದುಕೊಂಡಿದ್ದು, ಅವರು 18ನೇ ಆವೃತ್ತಿಯ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ವಿಶ್ವದ ಮಿಲಿಯನ್ ಡಾಲರ್ ಟೂರ್ನಿಗೆ ಕಮ್ಬ್ಯಾಕ್ ಮಾಡಲಿದ್ಧಾರೆ ಎಂದು ಹೇಳಲಾಗಿದೆ. ಇದರ ಬೆನ್ನಲ್ಲೇ ಫ್ರಾಂಚೈಸಿಯ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಕುಮಾರ್ ಸಂಗಕ್ಕರ ರಾಜಸ್ಥಾನ ರಾಯಲ್ಸ್ ತೊರೆಯಲಿದ್ಧಾರೆ ಎಂದು ಹೇಳಲಾಗಿದ್ದು, ಬೇರೊಂದು ತಂಡ ಸೇರ್ಪಡೆಯಾಗುವುದು ಖಚಿತವಾಗಿದೆ.
ರಾಹುಲ್ ದ್ರಾವಿಡ್ ಅಚರೊಂದಿಗೆ ಟೀಮ್ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಕೂಡ ರಾಜಸ್ಥಾನ ರಾಯಲ್ಸ್ ಸೇರಲಿದ್ದಾರೆ ಎಂದು ಹೇಳಲಾಗಿದ್ದು, ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ, ಫ್ರಾಂಚೈಸಿಯ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಕುಮಾರ್ ಸಂಗಕ್ಕರ ತಂಡವನ್ನು ತೊರೆಯುವುದು ಕನ್ಫರ್ಮ್ ಆಗಿದೆ. ಈ ಕುರಿತು ಮಾಹಿತಿಯೊಂದು ಕ್ರೀಡಾವಲಯದಲ್ಲಿ ಹರಿದಾಡುತ್ತಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಕುಮಾರ್ ಸಂಗಕ್ಕರ ಅವರು ಹಾಲಿ ಚಾಂಪಿಯನ್ಸ್ ಕಲ್ಕತ್ತಾ ನೈಟ್ರೈಡರ್ಸ್ ಸೇರ್ಪಡೆಯಾಗುತ್ತಾರೆ ಎಂದು ಹೇಳಲಾಗಿದ್ದು, ಈ ವಿಚಾರವಾಗಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಗೌತಮ್ ಗಂಭೀರ್ (ಮೆಂಟರ್), ಅಭಿಷೇಕ್ ನಾಯರ್ (ಸಹಾಯಕ ಕೋಚ್) ನಿರ್ಗಮನದಿಂದ ಕೆಲ ಸ್ಥಾನಗಳು ಖಾಲಿಯಾಗಿದ್ದು, ಫ್ರಾಂಚೈಸಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ.
ಕುಮಾರ್ ಸಂಗಕ್ಕರ ಸದ್ಯ ಮೆಂಟರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಈ ಸಂಬಂಧ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಕೆಕೆಆರ್ ಮಾತ್ರವಲ್ಲದೇ ಬೇರೆ ಫ್ರಾಂಚೈಸಿಗಳು ಕೂಡ ಕುಮಾರ್ ಸಂಗಕ್ಕರಗೆ ಆಫರ್ ನೀಡಿದ್ದು, ಅಂತಿಮ ಚಿತ್ರಣ ಐಪಿಎಲ್ ಶುರುವಾಗುವ ವೇಳೆಗೆ ಹೊರಬೀಳಲಿದೆ. ಅಂತಿಮವಾಗಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.