ಕ್ರೀಡೆ

ನಿಮ್ಮ ಬಯೋಪಿಕ್ ಮಾಡಿದ್ರೆ ಯಾವ ಹೀರೋ ನಿಮ್ಮ ಪಾತ್ರಕ್ಕೆ ಸೂಕ್ತ? ದ್ರಾವಿಡ್ ಕೊಟ್ಟ ಉತ್ತರ ವೈರಲ್​​

ನವದೆಹಲಿ: ಸಿನಿಮಾ ಇಂಡಸ್ಟ್ರಿಯಲ್ಲಿ ಬಯೋಪಿಕ್ ಟ್ರೆಂಡ್ ಮತ್ತೆ ಶುರುವಾಗಿದೆ. ಈಗಾಗಲೇ ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್, ಕಪಿಲ್​ ದೇವ್ ಹಾಗೂ ನಟ ಸಂಜಯ್ ದತ್ ಅವರ ಜೀವನವನ್ನು ತೆರೆಯ ಮೇಲೆ ತರಲಾಗಿದೆ. ಝೀರೋ ಇಂದ ಹೀರೋ ಆದಂತಹ ಸ್ಫೂರ್ತಿದಾಯಕ ಕತೆಗಳು ಬೆಳ್ಳಿತೆರೆಯ ಮೇಲೆ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಶೀಘ್ರದಲ್ಲೇ ಇನ್ನಷ್ಟು ಬಯೋಪಿಕ್‌ಗಳು ಬರಲಿವೆ.

ದಿಗ್ಗಜ ಕ್ರಿಕೆಟಿಗ ಯುವರಾಜ್ ಸಿಂಗ್ ಜೀವನಾಧಾರಿತ ಸಿನಿಮಾ ಈಗಾಗಲೇ ಅಧಿಕೃತವಾಗಿ ಘೋಷಣೆಯಾಗಿದೆ. ಇದನ್ನು ಬಾಲಿವುಡ್‌ನ ದೊಡ್ಡ ನಿರ್ಮಾಣ ಸಂಸ್ಥೆ ಟಿ-ಸೀರೀಸ್ ನಿರ್ಮಿಸುತ್ತಿದೆ. ಇದರ ಬೆನ್ನಲ್ಲೇ ಟೀಮ್​ ಇಂಡಿಯಾದ ಮಾಜಿ ಕೋಚ್ ರಾಹುಲ್​ ದ್ರಾವಿಡ್​ ತಮ್ಮ ಬಯೋಪಿಕ್​ ಕುರಿತಾದ ಪ್ರಶ್ನೆಗೆ ನೀಡಿದ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಿಯೆಟ್ (CEAT) ನಡೆಸಿಕೊಟ್ಟ ಕ್ರಿಕೆಟ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಾಹುಲ್​ ದ್ರಾವಿಡ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕುತೂಹಲಕಾರಿ ಪ್ರಶ್ನೆಯೊಂದು ಎದುರಾಯಿತು. ನಿಮ್ಮ ಬಯೋಪಿಕ್‌ ಸಿನಿಮಾ ಮಾಡಿದರೆ ಯಾವ ಹೀರೋ ನಿಮ್ಮ​ ಪಾತ್ರಕ್ಕೆ ಸೂಕ್ತ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ದ್ರಾವಿಡ್ ಕೊಟ್ಟ ಉತ್ತರ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ. ಅಷ್ಟಕ್ಕೂ ದ್ರಾವಿಡ್ ಹೇಳಿದ್ದೇನೆಂದರೆ, ಭಾರಿ ಸಂಭಾವನೆ ಕೊಟ್ಟರೆ ನಾನೇ ನಟಿಸುತ್ತೇನೆ ಅಂದರು. ಹೆಚ್ಚಾಗಿ ಸೀರಿಯಸ್ ಆಗಿರುವ ದ್ರಾವಿಡ್ ನಗುವುದು ಅಪರೂಪ. ಹೀಗೆ ತಮಾಷೆ ಮಾಡಿ ಎಲ್ಲರನ್ನೂ ನಗಿಸುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಅಂದಹಾಗೆ ಸಿಯೆಟ್ ಸಂಸ್ಥೆಯು ದ್ರಾವಿಡ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.

ಸಿಯೆಟ್ ಆಯೋಜಿಸಿದ್ದ ಕ್ರಿಕೆಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಹಾಗೂ ದಾಖಲೆಗಳ ಸರದಾರ ವಿರಾಟ್​ ಕೊಹ್ಲಿ ಕೂಡ ಭಾಗವಹಿಸಿದ್ದರು. ರೋಹಿತ್, ಕೊಹ್ಲಿ ಮತ್ತು ದ್ರಾವಿಡ್ ಆಗಮನದಿಂದ ಈ ಕಾರ್ಯಕ್ರಮಕ್ಕೆ ಜೋಶ್ ಬಂದಿತ್ತು. ಕೊಹ್ಲಿಗೆ ವರ್ಷದ ಅತ್ಯುತ್ತಮ ಏಕದಿನ ಬ್ಯಾಟರ್​ ಪ್ರಶಸ್ತಿ ನೀಡಲಾಯಿತು.

ಸ್ಟಾರ್ ವೇಗಿ ಮೊಹಮ್ಮದ್ ಶಮಿ ವರ್ಷದ ಅತ್ಯುತ್ತಮ ಏಕದಿನ ಬೌಲರ್ ಪ್ರಶಸ್ತಿ ಪಡೆದರು. ಯಂಗ್ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಅತ್ಯುತ್ತಮ ಟೆಸ್ಟ್ ಬ್ಯಾಟರ್ ಪ್ರಶಸ್ತಿಗೆ ಆಯ್ಕೆಯಾದರು. ಐಪಿಎಲ್‌ ಫೈನಲ್​ನಲ್ಲಿ ಗೆಲುವು ಸಾಧಿಸಿದ್ದಕ್ಕೆ ಕೆಕೆಆರ್​ ನಾಯಕ ಶ್ರೇಯಸ್​ ಅಯ್ಯರ್​ಗೆ ಸ್ಟಾರ್ ಸ್ಪೋರ್ಟ್ಸ್ ಟಿ20 ನಾಯಕತ್ವ ಪ್ರಶಸ್ತಿಯನ್ನು ನೀಡಲಾಯಿತು. (ಏಜೆನ್ಸೀಸ್​)