ಅಹಮದಾಬಾದ್: ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಒಪ್ಪಂದ ವಿಶ್ವಕಪ್ನೊಂದಿಗೆ ಕೊನೆಗೊಂಡಿದೆ. ಆದರೆ ಹುದ್ದೆಯಲ್ಲಿ ಮುಂದುವರಿಯುವ ಅಥವಾ ಪದತ್ಯಾಗ ಮಾಡುವ ಕುರಿತು ಅವರು ಫೈನಲ್ ಬಳಿಕವೂ ಗುಟ್ಟುಬಿಟ್ಟುಕೊಡಲಿಲ್ಲ.
"ಆ ಬಗ್ಗೆ ನಾನಿನ್ನೂ ಯೋಚಿಸಿಲ್ಲ. ಯಾಕೆಂದರೆ ಇದುವರೆಗೆ ನನ್ನ ಗಮನ ವಿಶ್ವಕಪ್ ಮೇಲೆ ಮಾತ್ರ ಇತ್ತು' ಎಂದು 50 ವರ್ಷದ ದ್ರಾವಿಡ್ ಹೇಳಿದ್ದಾರೆ. ಟೂರ್ನಿಯುದ್ದಕ್ಕೂ ಬಹುತೇಕ ತೆರೆಮರೆಯಲ್ಲಿದ್ದ ದ್ರಾವಿಡ್, ಭಾನುವಾರ ಫೈನಲ್ ಸೋಲಿನ ಬಳಿಕ ಬೇರೆಯವರನ್ನು ಕಳುಹಿಸುವ ಬದಲಾಗಿ ತಾವೇ ಸುದ್ದಿಗೋಷ್ಠಿಗೆ ಹಾಜರಾಗಿದ್ದು ವಿಶೇಷ ಮೆಚ್ಚುಗೆಗೂ ಪಾತ್ರವಾಗಿದೆ.
ಐಸಿಸಿ ಟ್ರೋಫಿ ಗೆಲುವೊಂದನ್ನು ಬಿಟ್ಟು ದ್ರಾವಿಡ್ ಅವಧಿಯಲ್ಲಿ ಭಾರತ ಉತ್ತಮ ಯಶಸ್ಸನ್ನೇ ಕಂಡಿದೆ. ಹೀಗಾಗಿ ಅದೊಂದನ್ನು ಸಾಧಿಸುವವರೆಗೆ ದ್ರಾವಿಡ್ ಹುದ್ದೆಯಲ್ಲಿ ಮುಂದುವರಿದರೆ ಅಚ್ಚರಿಯೂ ಇಲ್ಲ. ದ್ರಾವಿಡ್ ಮನಸ್ಸು ಮಾಡದಿದ್ದರೆ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ$್ಮಣ್ ಕೋಚ್ ಆಗಿ ಪೂರ್ಣ ಪ್ರಮಾಣದ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯೂ ಹೆಚ್ಚಿದೆ.