ಮೆಲ್ಬೋರ್ನ್: ವಿಶ್ವ ನಂ. 1 ಆಟಗಾರ ರಾಫೆಲ್ ನಡಾಲ್ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ನಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ದುರ್ವರ್ತನೆಗಳಿಂದಲೇ ಹೆಚ್ಚು ಸುದ್ದಿಯಾಗಿರುವ ‘ಬ್ಯಾಡ್ ಬಾಯ್’ ನಿಕ್ ರ್ಕಿಗಿಯೋಸ್ ವಿರುದ್ಧ ಹೋರಾಟಯುತ ಗೆಲುವು ದಾಖಲಿಸುವ ಮೂಲಕ ಎಡಗೈ ಆಟಗಾರ ನಡಾಲ್ ಮುನ್ನಡೆದರು. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಚ್ಚರಿಯ ಫಲಿತಾಂಶಗಳು ಮುಂದುವರಿದಿದ್ದು, 2016ರ ಚಾಂಪಿಯನ್ ಏಂಜೆಲಿಕ್ ಕೆರ್ಬರ್, 9ನೇ ಶ್ರೇಯಾಂಕಿತೆ ಕಿಕಿ ಬೆರ್ಟೆನ್ಸ್ 4ನೇ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಈ ನಡುವೆ 4ನೇ ಶ್ರೇಯಾಂಕಿತೆ ಸಿಮೋನಾ ಹಲೆಪ್ ಕ್ವಾರ್ಟರ್ಫೈನಲ್ಗೇರುವಲ್ಲಿ ಸಫಲರಾಗಿದ್ದರೆ, ಸ್ಪೇನ್ ತಾರೆ ಗಾರ್ಬಿನ್ ಮುಗುರುಜಾ 2 ವರ್ಷಗಳ ಬಳಿಕ ಗ್ರಾಂಡ್ ಸ್ಲಾಂ ಎಂಟರ ಘಟ್ಟಕ್ಕೇರಿ ಹಿಂದಿನ ಲಯಕ್ಕೆ ಮರಳಿದ್ದಾರೆ.
ಅಗ್ರ ಶ್ರೇಯಾಂಕಿತ ಸ್ಪೇನ್ ತಾರೆ ರಾಫೆಲ್ ನಡಾಲ್, ರಾಡ್ ಲೆವರ್ ಅರೇನಾದಲ್ಲಿ ಸೋಮವಾರ ನಡೆದ 4ನೇ ಸುತ್ತಿನ ಪಂದ್ಯದಲ್ಲಿ ಆತಿಥೇಯರ ನೆಚ್ಚಿನ ಆಟಗಾರ ರ್ಕಿಗಿಯೋಸ್ರನ್ನು 6-3, 3-6, 7-6 (8-6), 7-6 (7-4) ಸೆಟ್ಗಳಿಂದ ಮಣಿಸಿದರು. ಹೆಲಿಕಾಪ್ಟರ್ ಅವಘಡದಲ್ಲಿ ಸಾವನ್ನಪ್ಪಿದ ಅಮೆರಿಕದ ಬಾಸ್ಕೆಟ್ಬಾಲ್ ದಿಗ್ಗಜ ಕೋಬ್ ಬ್ರಿಯಾಂಟ್ಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ರ್ಕಿಗಿಯೋಸ್, ಲಾಸ್ ಏಂಜಲಿಸ್ ಲೇಕರ್ಸ್ ತಂಡದ ಜೆರ್ಸಿ ಧರಿಸಿ ಕೋರ್ಟ್ಗೆ ಆಗಮಿಸಿದ್ದರು. ರೋಜರ್ ಫೆಡರರ್ರ 20 ಗ್ರಾಂಡ್ ಸ್ಲಾಂ ಗೆಲುವಿನ ದಾಖಲೆ ಸರಿಗಟ್ಟುವ ಹಂಬಲದಲ್ಲಿರುವ ನಡಾಲ್ ಎಂಟರ ಘಟ್ಟದಲ್ಲಿ 5ನೇ ಶ್ರೇಯಾಂಕಿತ ಡೊಮಿನಿಕ್ ಥೀಮ್ ವಿರುದ್ಧ ಸೆಣಸಲಿದ್ದಾರೆ.
ಮೆಡ್ವೆಡೇವ್ಗೆ ಸೋಲುಣಿಸಿದ ವಾವ್ರಿಂಕಾ: ವಿಶ್ವ ನಂ. 4 ರಷ್ಯಾ ಆಟಗಾರ ಡೆನಿಲ್ ಮೆಡ್ವೆಡೇವ್ಗೆ ಮಾಜಿ ಚಾಂಪಿಯನ್ ಸ್ವಿಸ್ ತಾರೆ ಸ್ಟಾನಿಸ್ಲಾಸ್ ವಾವ್ರಿಂಕಾ 4ನೇ ಸುತ್ತಿನಲ್ಲಿ ಸೋಲುಣಿಸಿದರು. 2014ರ ಫೈನಲ್ನಲ್ಲಿ ನಡಾಲ್ರನ್ನು ಮಣಿಸಿ ಚಾಂಪಿಯನ್ ಆಗಿದ್ದ ವಾವ್ರಿಂಕಾ, 6-2, 2-6, 4-6, 7-6 (7-2), 6-2ರಿಂದ 23 ವರ್ಷದ ಮೆಡ್ವೆಡ್ವೇವ್ರನ್ನು ಹೊರದಬ್ಬಿದರು. ಈ ಮೂಲಕ ವಾವ್ರಿಂಕಾ ಹಾಲಿ ಆಟಗಾರರಲ್ಲಿ ಫೆಡರರ್, ನಡಾಲ್, ಜೋಕೊವಿಕ್ ಮತ್ತು ಆಂಡಿ ಮರ್ರೆ ಬಳಿಕ ಗರಿಷ್ಠ 18 ಬಾರಿ ಗ್ರಾಂಡ್ ಸ್ಲಾಂ ಕ್ವಾರ್ಟರ್ಫೈನಲ್ಗೇರಿದ ಸಾಧನೆ ಮಾಡಿದರು. ಆಸ್ಟ್ರಿಯಾದ ಡೊಮಿನಿಕ್ ಥೀಮ್ 6-2, 6-4, 6-4ರಿಂದ ಫ್ರಾನ್ಸ್ನ ಗೇಲ್ ಮಾನ್ಫಿಲ್ಸ್ಗೆ ಸೋಲುಣಿಸಿ ಕ್ವಾರ್ಟರ್ಫೈನಲ್ಗೇರಿದರು. 7ನೇ ಶ್ರೇಯಾಂಕಿತ ಜರ್ಮನಿ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ 4ನೇ ಸುತ್ತಿನಲ್ಲಿ 6-4, 6-4, 6-4ರಿಂದ ರಷ್ಯಾದ ಆಂಡ್ರೆ ರುಬ್ಲೆವ್ರನ್ನು ಪರಾಭವಗೊಳಿಸಿ ಮುನ್ನಡೆದರು. -ಏಜೆನ್ಸೀಸ್
ಎರಡು ಬಾರಿಯ ಗ್ರಾಂಡ್ ಸ್ಲಾಂ ಚಾಂಪಿಯನ್ ಗಾರ್ಬಿನ್ ಮುಗುರುಜಾ 9ನೇ ಶ್ರೇಯಾಂಕಿತೆ ಕಿಕಿ ಬೆರ್ಟೆನ್ಸ್ಗೆ 68 ನಿಮಿಷಗಳ ಕಾದಾಟದಲ್ಲಿ ಸೋಲುಣಿಸಿದ್ದಾರೆ. ಶ್ರೇಯಾಂಕ ರಹಿತೆಯಾಗಿ ಕಣಕ್ಕಿಳಿದಿರುವ ಮಾಜಿ ವಿಶ್ವ ನಂ. 1 ಮುಗುರುಜಾ 6-3, 6-3 ನೇರಸೆಟ್ಗಳಿಂದ ಡಚ್ ಆಟಗಾರ್ತಿ ಬೆರ್ಟೆನ್ಸ್ ರನ್ನು ಮಣಿಸಿದರು. ಇದರಿಂದ ಮಹಿಳಾ ಸಿಂಗಲ್ಸ್ನ ಅಗ್ರ 10 ಶ್ರೇಯಾಂಕಿತೆಯರಲ್ಲಿ 3 ಆಟಗಾರ್ತಿಯರು ಮಾತ್ರ ಕಣದಲ್ಲಿ ಉಳಿದಿದ್ದಾರೆ. ಅವರೆಂದರೆ ಅಗ್ರ ಶ್ರೇಯಾಂಕಿತೆ ಆಶ್ಲೆಗ್ ಬಾರ್ಟಿ, 7ನೇ ಶ್ರೇಯಾಂಕಿತೆ ಪೆಟ್ರಾ ಕ್ವಿಟೋವಾ ಮತ್ತು 4ನೇ ಶ್ರೇಯಾಂಕಿತೆ ಸಿಮೋನಾ ಹಲೆಪ್.
ಎರಡು ಗ್ರಾಂಡ್ ಸ್ಲಾಂ ಒಡತಿ ಸಿಮೋನಾ ಹಲೆಪ್ ನೇರಸೆಟ್ ಗೆಲುವಿನೊಂದಿಗೆ ಕ್ವಾರ್ಟರ್ಫೈನಲ್ಗೇರಿದರು. ರೊಮೆನಿಯಾ ತಾರೆ ಹಲೆಪ್ 4ನೇ ಸುತ್ತಿನಲ್ಲಿ 16ನೇ ಶ್ರೇಯಾಂಕಿತೆ ಎಲಿಸ್ ಮೆರ್ಟೆನ್ಸ್ ರನ್ನು 6-4, 6-4ರಿಂದ ಮಣಿಸಿದರು. ಎಂಟರ ಘಟ್ಟದಲ್ಲಿ ಹಲೆಪ್ಗೆ 28ನೇ ಶ್ರೇಯಾಂಕಿತೆ ಅನೆಟ್ ಕೊಂಟಾವಿಟ್ ಸವಾಲು ಎದುರಾಗಲಿದೆ. ಪೋಲೆಂಡ್ ಯುವ ಆಟಗಾರ್ತಿ ಇಗಾ ಸ್ವಿಟೆಕ್ಗೆ ಸೋಲುಣಿಸಿದ ಕೊಂಟಾವಿಟ್ ಟೂರ್ನಿಯ ಎಂಟರ ಘಟ್ಟಕ್ಕೇರಿದ ಮೊದಲ ಈಸ್ಟೋನಿಯಾ ಆಟಗಾರ್ತಿ ಎನಿಸಿದ್ದಾರೆ.
ಕೆರ್ಬರ್ಗೆ ಶಾಕ್
ಜರ್ಮನಿ ತಾರೆ ಏಂಜೆಲಿಕ್ ಕೆರ್ಬರ್ಗೆ ರಷ್ಯಾದ ಅನಸ್ತೇಷಿಯಾ ಪಾವ್ಲುಚೆಂಕೋವಾ 7-6, 7-6, 2-6ರಿಂದ 2 ಗಂಟೆ 37 ನಿಮಿಷಗಳ ಹೋರಾಟದಲ್ಲಿ ಆಘಾತ ನೀಡಿದರು. ಕಳೆದ ಪಂದ್ಯದಲ್ಲಿ 2ನೇ ಶ್ರೇಯಾಂಕದ ಜೆಕ್ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾಗೆ ಸೋಲುಣಿಸಿದ್ದ ಪಾವ್ಲುಚೆಂಕೋವಾ ಮತ್ತೊಂದು ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು. 30ನೇ ಶ್ರೇಯಾಂಕಿತೆ ಪಾವ್ಲುಚೆಂಕೋವಾ 6ನೇ ಬಾರಿ ಗ್ರಾಂಡ್ ಸ್ಲಾಂ ಕ್ವಾರ್ಟರ್ಫೈನಲ್ಗೇರಿದ್ದು, ಸ್ಪೇನ್ ತಾರೆ ಮುಗುರುಜಾರನ್ನು ಎದುರಿಸಲಿದ್ದಾರೆ.