ಕ್ರೀಡೆ

ಮುಖಕ್ಕೆ ಚೆಂಡು ಬಡಿದು ರಚಿನ್ ರವೀಂದ್ರಗೆ ಗಂಭೀರ ಗಾಯ; Pak ವಿರುದ್ಧ ಕೇಳಿ ಬಂತು ಗಂಭೀರ ಆರೋಪ

ಲಾಹೋರ್​: ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ (Pak) ಹಾಗೂ ನ್ಯೂಜಿಲೆಂಡ್ (Newzealand) ನಡುವಿನ ತ್ರಿಕೋನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ತಂಡವು 78 ರನ್​ಗಳ ಭರ್ಜರಿ ಜಯ ಸಾಧಿಸಿದ್ದು, ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಭರ್ಜರಿ ತಯಾರಿ ನಡೆಸಿದೆ. ಆದರೆ, ಪಂದ್ಯ ನಡೆಯುತ್ತಿದ್ದ ವೇಳೆ ಕನ್ನಡಿಗ ರಚಿನ್ ರವೀಂದ್ರ ಗಾಯಗೊಂಡಿದ್ದು, ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಅನುಮಾನ ಎಂದು ಹೇಳಲಾಗಿದೆ.

ಪಾಕಿಸ್ತಾನದ (Pak) ವಿರುದ್ಧದ ತ್ರಿಕೋನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ಗ್ಲೆನ್ ಫಿಲಿಪ್ಸ್​ (106 ರನ್, 74 ಎಸೆತ, 6 ಬೌಂಡರಿ, 7 ಸಿಕ್ಸರ್​), ಡೆರಿಲ್ ಮಿಚೆಲ್ (81 ರನ್, 84 ಎಸೆತ, 2 ಬೌಂಡರಿ, 4 ಸಿಕ್ಸರ್​), ಕೇನ್​ ವಿಲಿಯಮ್ಸನ್​ (58 ರನ್​, 89 ಎಸೆತ, 7 ಬೌಂಡರಿ) ಉಪಯುಕ್ತ ಆಟದ ಫಲವಾಗಿ 50 ಓವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 330 ರನ್ ಗಳಿಸಿತು. ಬೃಹತ್​ ಮೊತ್ತ ಬೆನ್ನತ್ತಿದ್ದ ಪಾಕಿಸ್ತಾನ ತಂಡವನ್ನು ಇನ್ನಿಲ್ಲದಂತೆ ಕಾಡಿದ ನ್ಯೂಜಿಲೆಂಡ್​ ಬೌಲರ್​ಗಳು ಆತಿಥೇಯರ ವಿರುದ್ಧ ತಂಡಕ್ಕೆ 78 ರನ್​ಗಳ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.

37ನೇ ಓವರ್​ನಲ್ಲಿ ಮೈಕೆಲ್ ಬ್ರೇಸ್​ವೆಲ್​ ಎಸೆತವನ್ನು ಪಾಕ್ ಬ್ಯಾಟರ್​ ಖುಷ್ದಿಲ್​ ಷಾ ಸಿಕ್ಸರ್ ಬಾರಿಸಲು ಆನ್​ಸೈಡ್​ ಕಡೆಗೆ ಸ್ವೀಪ್ ಮಾಡಿ ಜೋರಾಗಿ ಬ್ಯಾಟ್ ಬೀಸಿದರು. ಈ ವೇಳೆ ಆನ್​ಸೈಡ್​​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಚಿನ್ ತಮ್ಮತ್ತ ಬಮದ ಚೆಂಡನ್ನು ಕ್ಯಾಚ್​ ಆಗಿ ಪರಿವರ್ತಸಿಲು ಮುಂದಾದರು. ಆದರೆ, ಚೆಂಡು ಸೀದಾ ಅವರ ಮುಖಕ್ಕೆ ಬಡಿದ ಪರಿಣಾಮ ಗಂಭೀರ ಗಾಯವಾಗಿದ್ದು, ರಕ್ತಸಿಕ್ತವಾಗಿದ್ದ ರಚಿನ್​ ತಕ್ಷಣವೇ ಮೈದಾನವನ್ನು ತೊರೆದಿದ್ದಾರೆ. ಇದೀಗ ಈ ವಿಚಾರ ಚರ್ಚಾಸ್ಪದವಾಗಿದೆ.

ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಲಾಹೋರ್​ನಲ್ಲಿರುವ ಗಡಾಫಿ ಕ್ರೀಡಾಂಗಣವನ್ನು ಬಹುಕೋಟಿ ವೆಚ್ಚದಲ್ಲಿ ನವೀಕರಣ ಮಾಡಿದ್ದು, ಕೆಲ ದಿನಗಳ ಹಿಂದಷ್ಟೇ ಉದ್ಘಾಟನೆ ಮಾಡಲಾಗಿತ್ತು. ಆದರೆ, ಮೈದಾನದಲ್ಲಿ ಅಳವಡಿಸಲಾಗಿರುವ ಫ್ಲಡ್​ ಲೈಟ್​ಗಳ ಮಂದ ಬೆಳಕಿನಿಂದಾಗಿ ಚೆಂಡು ಸರಿಯಾಗಿ ಕಾಣದೇ ರಚಿನ್ ರವೀಂದ್ರ ಗಾಯಗೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಚಾಂಪಿಯನ್ಸ್ ಟ್ರೋಫಿ ಪ್ರಮುಖ ಆಟಗಾರ ಗಾಯಗೊಂಡಿರುವುದು ನ್ಯೂಜಿಲೆಂಡ್​ಗೆ ದೊಡ್ ಡತಲೆನೋವಾಗಿ ಪರಿಣಮಿಸಿದೆ.