ಕ್ರೀಡೆ

ರಬಾಡ ಮಾರಕ ದಾಳಿ; ದಶಕದ ಬಳಿಕ ಏಷ್ಯಾದಲ್ಲಿ ಟೆಸ್ಟ್​ ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾ!

ಮೀರ್ಪುರ: ವೇಗಿ ಕಗಿಸೊ ರಬಾಡ (39ಕ್ಕೆ 6) ಮಾರಕ ಬೌಲಿಂಗ್​ ದಾಳಿ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ದ. ಆಫ್ರಿಕಾ ತಂಡ ಏಷ್ಯಾದಲ್ಲಿ 10 ವರ್ಷಗಳ ಬಳಿಕ ಟೆಸ್ಟ್​ ಪಂದ್ಯ ಗೆದ್ದ ಸಾಧನೆ ಮಾಡಿದೆ. 2014ರಲ್ಲಿ ಕೊನೆಯದಾಗಿ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ಹರಿಣಗಳ ಪಡೆ ಗೆಲುವು ಸಾಧಿಸಿತ್ತು.

7 ವಿಕೆಟ್​ಗೆ 283 ರನ್​ಗಳಿಂದ 4ನೇ ದಿನದಾಟ ಆರಂಭಿಸಿದ ಬಾಂಗ್ಲಾ 307 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ 106 ರನ್​ ಸವಾಲು ಪಡೆದ ದ. ಆಫ್ರಿಕಾ 22 ಓವರ್​ಗಳಲ್ಲಿ 3 ವಿಕೆಟ್​ ನಷ್ಟದಲ್ಲಿ ಗುರಿ ತಲುಪಿತು. ಈ ಮೂಲಕ ಏಡನ್​ ಮಾರ್ಕ್ರಮ್​ ಪಡೆ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 2ನೇ ಟೆಸ್ಟ್​ ಮಂಗಳವಾರದಿಂದ ಚಟ್ಟೋಗ್ರಾಮ್​ನಲ್ಲಿ ನಡೆಯಲಿದೆ.

ಬಾಂಗ್ಲಾದೇಶ: 106 ಮತ್ತು 307 (ಮೆಹಿದಿ ಹಸನ್​ 97, ರಬಾಡ 46ಕ್ಕೆ 6, ಕೇಶವ್​ 105ಕ್ಕೆ 3), ದ. ಆಫ್ರಿಕಾ: 308 ಮತ್ತು 3 ವಿಕೆಟ್​ಗೆ 106 (ಜಾರ್ಜಿ 41, ಸ್ಟಬ್ಸ್​ 30*, ಮಾರ್ಕ್ರಮ್​ 20, ತೈಜುಲ್​ 43ಕ್ಕೆ 3). ಪಂದ್ಯಶ್ರೇಷ್ಠ: ಕೈಲ್​ ವೆರೇಯ್ನ್​

ಡಬ್ಲ್ಯುಟಿಸಿಯಲ್ಲಿ 4ನೇ ಸ್ಥಾನಕ್ಕೇರಿದ ಹರಿಣಗಳ ಪಡೆ

ಮೀರ್ಪುರ ಟೆಸ್ಟ್​ ಜಯದೊಂದಿಗೆ ದ. ಆಫ್ರಿಕಾ ತಂಡ 3ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ದ. ಆಫ್ರಿಕಾ ಈಗ ಶೇ. 47.62 ಅಂಕ ಕಲೆಹಾಕಿದ್ದು, ಫೈನಲ್​ಗೇರುವ ಅವಕಾಶ ವೃದ್ಧಿಸಿಕೊಂಡಿದೆ. ನ್ಯೂಜಿಲೆಂಡ್​ (ಶೇ. 44.44) 5ನೇ ಸ್ಥಾನಕ್ಕಿಳಿದಿದೆ. ಭಾರತ (ಶೇ.68.06), ಆಸ್ಟ್ರೆಲಿಯಾ (ಶೇ.62.50), ಶ್ರೀಲಂಕಾ (ಶೇ. 55.56) ಮೊದಲ 3 ಸ್ಥಾನದಲ್ಲಿವೆ.