ಕ್ರೀಡೆ

ಚಹಾಲ್​ರನ್ನು 15ನೇ ಮಹಡಿಯ ಬಾಲ್ಕನಿಯ ಕಳಗೆ ನೇತಾಡಿಸಿದ ಮುಂಬೈ ಆಟಗಾರನ್ಯಾರು? ಸೆಹ್ವಾಗ್​ ಹೇಳಿದ್ದೇನು?

ನವದೆಹಲಿ: ಪ್ರಸ್ತುತ ಐಪಿಎಲ್​ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್​ ಪರ ಆಡುತ್ತಿರುವ ಸ್ಪಿನ್ನರ್​ ಯಜುವೇಂದ್ರ ಚಹಾಲ್​, ಈ ಹಿಂದಿನ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್​ ಪರ ಆಡುವಾಗ ನಡೆದ ಭಯಾನಕ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.

ಮುಂಬೈ ತಂಡದ ಪಾನಮತ್ತ ಆಟಗಾರನೊಬ್ಬ ತನ್ನನ್ನು ಹೋಟೆಲ್​ ಒಂದರ 15ನೇ ಮಹಡಿಯ ಬಾಲ್ಕನಿಯಿಂದ ಮದ್ಯದ ಅಮಲಿನಲ್ಲಿ ಉಲ್ಟಾ ನೇತಾಡಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಟೀಮ್​ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್​ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಕುಡಿದ ಅಮಲಿನಲ್ಲಿ ಚಹಾಲ್​ಗೆ ಆ ರೀತಿ ಮಾಡಿದ ಆಟಗಾರನ ಹೆಸರನ್ನು ಬಹಿರಂಗಪಡಿಸುವುದು ಮುಖ್ಯವಾಗಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ, ಅದನ್ನು ತಮಾಷೆಯಾಗಿ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಅಲ್ಲಿ ಏನಾಯಿತು ಮತ್ತು ಇದರ ಗಂಭೀರತೆಯನ್ನು ಪರಿಗಣಿಸಿ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ ಎಂದು ಸೆಹ್ವಾಗ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಟೀಮ್​ ಇಂಡಿಯಾದ ಮಾಜಿ ಕೋಚ್​ ರವಿಶಾಸ್ತ್ರೀ ಕೂಡ ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಖಂಡಿತ ಇದು ನಗುವ ವಿಷಯವೇ ಇಲ್ಲ. ಚಹಾಲ್​ಗೆ ಆ ರೀತಿ ಮಾಡಿದ ವ್ಯಕ್ತಿ ಯಾರೆಂದು ನನಗೆ ತಿಳಿದಿಲ್ಲ. ಕೆಲವರಿಗೆ ಇದು ತಮಾಷೆ ಎನಿಸಬಹುದು. ಆದರೆ, ನನಗಿದು ತಮಾಷೆ ಅನಿಸುತ್ತಿಲ್ಲ. ಆ ರೀತಿ ಮಾಡಲು ಪ್ರಯತ್ನಿಸಿದ ವ್ಯಕ್ತಿಯು ಸೂಕ್ತವಲ್ಲದ ಮನಸ್ಥಿತಿಯಲ್ಲಿರುವುದನ್ನು ತೋರಿಸುತ್ತದೆ. ನಿಜಕ್ಕೂ ಇದು ಸ್ವೀಕಾರ್ಹವಲ್ಲ. ಇದು ಆಜೀವ ನಿಷೇಧ ಹೇರುವಂತಹ ಅಪರಾಧವಾಗಿದೆ ಎಂದಿದ್ದಾರೆ.

ಆರ್​ಆರ್​ ತಂಡ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿತ್ತು. 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ನಾನು ಮುಂಬೈ ಪರ ಆಡುವಾಗ ನಡೆದ ಘಟನೆ ಇದಾಗಿದೆ. ಪಂದ್ಯದ ಬಳಿಕ ಪಾರ್ಟಿ ನಡೆಯಿತು. ಈ ವೇಳೆ ಓರ್ವ ಆಟಗಾರ ತುಂಬಾ ಕುಡಿದಿದ್ದ, ಆತನ ಹೆಸರನ್ನು ಹೇಳಲು ಆಗುವುದಿಲ್ಲ. ಆತ ತುಂಬಾ ಕುಡಿದಿದ್ದ. ಬಹಳ ಸಮಯದವರೆಗೆ ನನ್ನನ್ನೇ ನೋಡುತ್ತಿದ್ದ. ಸ್ವಲ್ಪ ಸಮಯದ ಬಳಿಕ ನನ್ನನ್ನು ಕರೆದು ಹೊರಗಡೆ ಕರೆದುಕೊಂಡು ಹೋದ. ಇದಾದ ನಂತರ ನನ್ನನ್ನು ಹಿಡಿದು ಬಾಲ್ಕನಿಯಿಂದ ಕೆಳಗಡೆ ನೇತಾಡಿಸಿದ ಎಂದು ಚಹಾಲ್​ ವಿಡಿಯೋದಲ್ಲಿ ವಿವರಿಸಿದ್ದಾರೆ. ಈ ವಿಡಿಯೋ ವೈರಲ್​ ಆಗಿದ್ದು, ಆ ಪಾನಮತ್ತ ಆಟಗಾರ ಯಾರಿರಬಹುದು ಎಂಬ ಚರ್ಚೆ ಬಹಳ ಜೋರಾಗಿ ನಡೆಯುತ್ತಿದೆ. (ಏಜೆನ್ಸೀಸ್​)