ನವದೆಹಲಿ: ಇಂದು ಭಾರತೀಯ ಕ್ರೀಡಾಭಿಮಾನಿಗಳ ಪಾಲಿಗೆ ಅತ್ಯಂತ ಸ್ಮರಣೀಯ ಕ್ಷಣವಾಗಿದೆ. ಭಾರತರ ಪುರುಷರ ತಂಡವು ಇಂಡೋನೇಷ್ಯಾ ತಂಡವನ್ನು ಮಣಿಸಿ ಚೊಚ್ಚಲ ಥಾಮಸ್ ಕಪ್ ಗೆಲ್ಲುವ ಮೂಲಕ ಹೊಸ ಇತಿಹಾಸವನ್ನು ಬರೆದಿದೆ.
ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಆಂಥೋನಿ ಗಿಂಟಿಂಗ್ ಅವರನ್ನು 20 ವರ್ಷದ ಲಕ್ಷ್ಯಾ ಸೇನ್ ಮಣಿಸುವ ಮೂಲಕ ನಾಕೌಟ್ ಹಂತಗಳ ಬಳಿಕ ಭಾರತಕ್ಕೆ 1-0 ಮುನ್ನಡೆಯನ್ನು ತಂದುಕೊಟ್ಟರು. ಸೇನ್ ಅವರು ಗಿಂಟಿಂಗ್ ವಿರುದ್ಧ 8-21, 21-17, 21-16 ಅಂತರದಲ್ಲಿ ಜಯಗಳಿಸಿದರು.
ಭಾರತದ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಅವರು ತಮ್ಮ ಎದುರಾಳಿ ಮೊಹಮ್ಮದ್ ಅಹ್ಸನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ಜೋಡಿಯನ್ನು 18-21, 23-21, 21-19 ಅಂತರದಲ್ಲಿ ಸೋಲಿಸುವ ಮೂಲಕ ಭಾರತಕ್ಕೆ 2-0 ಮುನ್ನಡೆಯನ್ನು ತಂದುಕೊಟ್ಟರು. ಕೊನೆಯಲ್ಲಿ ಕಿಡಂಬಿ ಶ್ರೀಕಾಂತ್, ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಜೊನಾಟನ್ ಕ್ರಿಸ್ಟಿಯನ್ನು ಅವರನ್ನು 21-15, 23-21ರಿಂದ ಸೋಲಿಸಿ ಸ್ಪರ್ಧೆಗೆ ಅಂತ್ಯ ಹಾಡುವ ಮೂಲಕ 3-0 ಅಂತರದಲ್ಲಿ ಥಾಮಸ್ ಕಪ್ ಅನ್ನು ಎತ್ತಿಹಿಡಿದರು.
ಪ್ರಧಾನಿ ಮೋದಿ ಮೆಚ್ಚುಗೆ
ಪ್ರಧಾನಿ ಮೋದಿ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ಬ್ಯಾಡ್ಮಿಂಟನ್ ತಂಡ ಇತಿಹಾಸ ಬರೆದಿದೆ. ಥಾಮಸ್ ಕಪ್ ಗೆಲುವಿನಿಂದ ಇಡೀ ಭಾರತ ದೇಶವೇ ಸಂಭ್ರಮಿಸುತ್ತಿದೆ. ನಮ್ಮ ನಿಪುಣ ತಂಡಕ್ಕೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗಾಗಿ ಅವರಿಗೆ ಶುಭಾಶಯಗಳನ್ನು ತಿಳಿಸುತ್ತೇನೆ. ಈ ಗೆಲುವು ಮುಂಬರುವ ಹಲವು ಕ್ರೀಡಾ ಪಟುಗಳಿಗೆ ಪ್ರೇರಣೆ ನೀಡಲಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)