ಕ್ರೀಡೆ

VIDEO| ಕ್ಯಾಚ್​ ಬಿಟ್ಟಿದ್ದಕ್ಕೆ ಸಹ ಆಟಗಾರನ ಕೆನ್ನೆಗೆ ಬಾರಿಸಿದ ಪಾಕಿಸ್ತಾನ ವೇಗಿ ಹ್ಯಾರೀಸ್​ ರೌಫ್!​

ಇಸ್ಲಮಾಬಾದ್​: ಪ್ರಸ್ತುತ ನಡೆಯುತ್ತಿರುವ ಪಾಕಿಸ್ತಾನ ಸೂಪರ್​ ಲೀಗ್​ (ಪಿಎಸ್​ಎಲ್​) 2022 ಟೂರ್ನಿಯಲ್ಲಿ ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ಘಟನೆ ನಡೆದಿದೆ. ಲಾಹೋರ್ ಖಲಂದರ್ಸ್​ ತಂಡದ ವೇಗಿ ಹ್ಯಾರೀಸ್​ ರೌಫ್​, ಸಹ ಆಟಗಾರ ಕಮ್ರಾನ್​ ಗುಲಾಮ್​​ ಕಪಾಳಕ್ಕೆ ಬಾರಿಸಿರುವುದು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

ಸೋಮವಾರ (ಫೆ.22) ಪೇಶಾವರ್​ ಜಲ್ಮಿ ತಂಡದ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಕಮ್ರಾನ್​ ಗುಲಾಮ್​ ಕ್ಯಾಚ್​ ಬಿಟ್ಟಿದ್ದಕ್ಕೆ ಕೋಪಗೊಂಡ ಹ್ಯಾರೀಸ್​ ರೌಫ್​ ಕಪಾಳಕ್ಕೆ ಬಾರಿಸಿದರು.

ರೌಫ್​ ಎಸೆದ ಓವರ್​ನಲ್ಲಿ ಪೇಶಾವರ ಜಲ್ಮಿ ತಂಡದ ಮೊಹಮ್ಮದ್​ ಹ್ಯಾರೀಸ್ ಬ್ಯಾಟ್​ ಬೀಸಿದರು. ಈ ವೇಳೆ ಚೆಂಡು​ ಬೌಂಡರಿ ಬಳಿಯಿದ್ದ ಕ್ಷೇತ್ರ ರಕ್ಷಕ ಗುಲಾಮ್​ ಕೈ ಸೇರುತ್ತದೆ. ವಿಕೆಟ್​ ಬಿದ್ದ ಖುಷಿಯಲ್ಲಿ ಸಂಭ್ರಮಾಚರಣೆ ಮಾಡುವ ವೇಳೆ ರೌಫ್​, ಗುಲಾಮ್​ ಕೆನ್ನಗೆ ಜೋರಾಗಿ ಬಾರಿಸುತ್ತಾರೆ. ಆದರೆ, ಸ್ಪಲ್ಪವೂ ಕೋಪಗೊಳ್ಳದ ಗುಲಾಮ್​ ಕೂಲ್​ ಆಗಿಯೇ ಇರುತ್ತಾರೆ. ಆದರೆ, ರೌಫ್​ ಮಾತ್ರ ಉದ್ವೇಗಕ್ಕೆ ಒಳಗಾಗಿರುತ್ತಾರೆ.

ರೌಫ್​, ಭಾವೋದ್ವೇಗಕ್ಕೆ ಒಳಗಾಗಲು ಕಾರಣವೇನೆಂದರೆ, ಅದೇ ಓವರ್​ನಲ್ಲಿ ಗುಲಾಮ್​ ಎದುರಾಳಿ ತಂಡದ ಆಟಗಾರ ಹಜರತುಲ್ಲಾ ಜಜಾಯ್​ ಕ್ಯಾಚ್​ ಬಿಟ್ಟಿರುತ್ತಾರೆ. ಈ ವೇಳೆ ರೌಫ್​, ಗುಲಾಮ್​ ಕಡೆಗೆ ಕೆಂಗಣ್ಣ ಬೀರಿರುತ್ತಾರೆ.

ರೌಫ್​ ಕಪಾಳಕ್ಕೆ ಬಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ರೌಫ್​ ವರ್ತನೆ ನೋಡಿ ಕೋಪಗೊಂಡಿರುವ ಪಾಕ್​ ಕ್ರೀಡಾಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಈ ವರ್ತನೆ ಒಳ್ಳೆಯ ಆಟಗಾರನ ಲಕ್ಷಣವಲ್ಲ ಎಂದು ಜರಿದಿದ್ದಾರೆ. (ಏಜೆನ್ಸೀಸ್​)