ಕ್ರೀಡೆ

ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್ಸ್​​ ಜಾವಲಿನ್​ ಥ್ರೋ ಫೈನಲ್​ಗೆ ಅರ್ಹತೆ ಪಡೆದ​ ಚಿನ್ನದ ಹುಡುಗ ನೀರಜ್​ ಚೋಪ್ರಾ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ನೀರಜ್​ ಚೋಪ್ರ ತನ್ನ ಯಶಸ್ಸಿನ ಓಟವನ್ನು ಮುಂದುವರಿಸಿದ್ದಾರೆ. ಇದೀಗ ಅರ್ಹತಾ ಸುತ್ತಿನ ಮೊದಲ ಎಸೆತದಲ್ಲೇ 88.39 ಮೀಟರ್ ಜಾವಲಿನ್​ ಥ್ರೋ ಮಾಡುವ ಮೂಲಕ​ ಅಮೆರಿಕದ ಒರೆಗಾನ್ ರಾಜ್ಯದ ಯುಜಿನ್​ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್ಸ್​ನ​ ಪುರುಷರ ಜಾವಲಿನ್​ ಥ್ರೋ ಫೈನಲ್​ಗೆ ನೀರಜ್​ ಅರ್ಹತೆ ಪಡೆದಿದ್ದಾರೆ.

ನೀರಜ್​ ಅವರು ಅರ್ಹತಾ ಸುತ್ತಿನ ಎ ಗುಂಪಿನಲ್ಲಿದ್ದರು. ತಮ್ಮ ಮೊದಲ ಎಸೆತದಲ್ಲೇ 88.39 ಮೀಟರ್​ ಥ್ರೋನೊಂದಿಗೆ ಯಶಸ್ಸು ಸಾಧಿಸುವ ಮೂಲಕ ಫೈನಲ್​ಗೆ ಲಗ್ಗೆ ಇಟ್ಟಿರುವ ನೀರಜ್​, ಭಾನುವಾರ ಬೆಳಗ್ಗೆ ನಡೆಯಲಿರುವ ಮಹತ್ವದ ಸ್ಪರ್ಧೆಯಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೆ, ಭಾರತಕ್ಕೆ ಚಿನ್ನದ ಪದಕ ಬರುವ ನಿರೀಕ್ಷೆಯು ಇದೆ.

ವಿಶ್ವ ಚಾಂಪಿಯನ್ಸ್​ ಫೈನಲ್​ಗೆ ಅರ್ಹತೆ ಪಡೆಯಲು 83.50 ಮೀಟರ್​ ಅನ್ನು ಅರ್ಹತಾ ಗುರುತನ್ನಾಗಿ ನಿಗದಿ ಮಾಡಲಾಗಿದೆ. ಆದರೆ, ನೀರಜ್​ 88.39 ಮೀಟರ್​ ಎಸೆಯುವ ಮೂಲಕ ಮೊದಲ ಯತ್ನದಲ್ಲೇ ಯಶಸ್ಸು ಸಾಧಿಸಿದರು. ಗ್ರೆನಾಡದ ಅಂಡರ್ಸನ್​ ಪೀಟರ್ಸ್​ 89.91 ಮೀಟರ್​ ಎಸೆಯುವ ಮೂಲಕ ಎಲ್ಲರ ಗಮನವನ್ನು ಸೆಳೆದರು ಮತ್ತು ಫೈನಲ್​ಗೆ ಲಗ್ಗೆ ಇಟ್ಟರು.

ಭಾರತದ ರೋಹಿತ್ ಯಾದವ್ 80.42 ಮೀಟರ್​ ಎಸೆತದೊಂದಿಗೆ ಅರ್ಹತಾ ಸುತ್ತಿನಲ್ಲಿ 10 ನೇ ಸ್ಥಾನ ಗಳಿಸಿ ಫೈನಲ್‌ಗೆ ಅರ್ಹತೆ ಪಡೆದರು.

24 ವರ್ಷ ವಯಸ್ಸಿನ ನೀರಜ್​, 2021ರ ಆಗಸ್ಟ್​ 7ರಂದು ಟೋಕಿಯೋ ಒಲಿಂಪಿಕ್ಸ್​ನಲ್ಲಿ 87.58 ಮೀಟರ್​ ದೂರಕ್ಕೆ ಜಾವೆಲಿನ್​ ಎಸೆದು ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದಾರೆ. 2021ರ ಮಾರ್ಚ್​ನಲ್ಲಿ ಪಟಿಯಾಲಾದಲ್ಲಿ ಜಾವೆಲಿನ್​ ಅನ್ನು 88.07 ಮೀಟರ್​ ದೂರಕ್ಕೆ ಎಸೆದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಕಳೆದ ಜೂನ್​ 15ರಂದು ಫಿನ್‌ಲ್ಯಾಂಡ್‌ನ ಸ್ಪರ್ಧೆಯ ಮೊದಲ ಸುತ್ತಿನಲ್ಲಿ 86.92 ಮೀಟರ್​​ ದೂರಕ್ಕೆ ಜಾವೆಲಿನ್​ ಎಸೆದ ನೀರಜ್​, 2ನೇ ಅವಕಾಶದಲ್ಲಿ 89.30 ಮೀಟರ್​ ದೂರಕ್ಕೆ ಜಾವೆಲಿನ್​ ಮುಟ್ಟಿಸಿದರು. ಆ ಮೂಲಕ ತನ್ನದೇ ಹಿಂದಿನ ದಾಖಲೆಯನ್ನು ಮುರಿದರು. ಇದಾದ ಬಳಿಕ ಜೂನ್​ 30ರಂದು ಸ್ಟಾಕ್​ಹೋಮ್​​ನಲ್ಲಿ ನಡೆದ ಡೈಮಂಡ್​​ ಲೀಗ್​ನಲ್ಲಿ 89.94 ಮೀಟರ್​ ದೂರಕ್ಕೆ ಜಾವೆಲಿನ್​ ಎಸೆಯುವ ಮೂಲಕ ಎರಡನೇ ಸ್ಥಾನದೊಂದಿಗೆ ತಮ್ಮ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. ಕೇವಲ 6 ಸೆಂಟಿ ಮೀಟರ್​ ಅಂತರದೊಂದಿಗೆ 90 ಮೀಟರ್​ ಸಾಧನೆಯಿಂದ ನೀರಜ್​ ಹಿಂದುಳಿದಿದ್ದಾರೆ. ಇಂದಿಗೂ 89.94 ಮೀಟರ್​ ಎಸೆತವೇ ನೀರಜ್​​ ಅವರ ಬೆಸ್ಟ್​ ಥ್ರೋ ಆಗಿ ಉಳಿದುಕೊಂಡಿದೆ. (ಏಜೆನ್ಸೀಸ್​)