ಕ್ರೀಡೆ

VIDEO| ಐಪಿಎಲ್​ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದಕ್ಕೆ ಶ್ರೀಶಾಂತ್​ ಏನು ಮಾಡಿದ್ರು ನೋಡಿ...

ಬೆಂಗಳೂರು: ಶನಿವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆರಂಭವಾದ ಬಹುನಿರೀಕ್ಷಿತ ಐಪಿಎಲ್ 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಭಾನುವಾರ (ಫೆ.13) ಮುಗಿದೆ. ಮೊದಲು ಮತ್ತು ಎರಡನೇ ದಿನದ ಹರಾಜು ಪ್ರಕ್ರಿಯೆಯಲ್ಲಿ ಸಾಕಷ್ಟು ಆಟಗಾರರು ಬಿಕರಿಯಾಗಿದ್ದರೆ, ಕೆಲ ಘಟಾನುಘಟಿ ಆಟಗಾರರು ಸೇಲಾಗದೇ ಉಳಿದಿರುವುದು ಅಚ್ಚರಿಗೂ ಕಾರಣವಾಗಿದೆ.

ಟೀಮ್​ ಇಂಡಿಯಾ ಬೌಲರ್​ ಎಸ್​. ಶ್ರೀಶಾಂತ್​ ಕೂಡ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ಶ್ರೀಶಾಂತ್​ ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಬಾಲಿವುಡ್​ ಹಾಡು "ರುಕ್​ ಜಾನಾ ನಹೀನ್​" ಹಾಡಿದ್ದಾರೆ. ಅಲ್ಲದೆ, ಯಾವಾಗಲೂ ಕೃತಜ್ಞನಾಗಿರುತ್ತೇನೆ ಮತ್ತು ಯಾವಾಗಲೂ ಎದುರು ನೋಡುತ್ತೇನೆ. ಓಂ ನಮಃ ಶಿವಾಯ ಎಂದು ಬರೆದುಕೊಂಡಿದ್ದಾರೆ.

ಶ್ರೀಶಾಂತ್​ ಮ್ಯಾಚ್​ ಫಿಕ್ಸಿಂಗ್​ ಪ್ರಕರಣದ​ ಆರೋಪಿಯಾಗಿದ್ದು, ಯಾವಾಗ ಬೇಕಾದರೂ ವಿಚಾರಣೆಗೆ ಕರೆಯಬಹುದು. ಸುಮ್ಮನೇ ಅವರ ಮೇಲೆ ದುಡ್ಡು ಹಾಕುವ ಬದಲು ಯುವ ಆಟಗಾರರನ್ನು ಖರೀದಿಸಿದರೆ ಮುಂದೆ ಉಪಯೋಗವಾಗಲಿದ್ದಾರೆ ಎಂಬ ಕಾರಣಕ್ಕೆ ಐಪಿಎಲ್​ ಫ್ರಾಂಚೈಸಿಗಳು ಶ್ರೀಶಾಂತ್​ರನ್ನು ಖರೀದಿಸಲು ಮುಂದೆ ಬರಲಿಲ್ಲ.

ಶ್ರೀಶಾಂತ್​ಗೆ ಮೂಲ ದರ 50 ಲಕ್ಷ ರೂ. ನಿಗದಿಯಾಗಿತ್ತು. ಆದರೆ, ಎರಡೂ ದಿನವೂ ಯಾವೊಂದು ತಂಡವೂ ಕೂಡ ಅವರನ್ನು ಖರೀದಿಸುವ ಮನಸ್ಸು ಮಾಡಲಿಲ್ಲ.

2013ರಲ್ಲಿ ಐಪಿಎಲ್ ಪಂದ್ಯವೊಂದರಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಬಿಸಿಸಿಐ ಶ್ರೀಶಾಂತ್ ಅವರನ್ನು ಏಳು ವರ್ಷಗಳ ಕಾಲ ಅಮಾನತುಗೊಳಿಸಿತ್ತು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳ ಪರ ಆಡುತ್ತಿದ್ದ ಶ್ರೀಶಾಂತ್ ತನ್ನ ನಿಷೇಧವನ್ನು ತೆಗೆದುಹಾಕಿದ ನಂತರ ದೇಶೀಯ ಕ್ರೀಡೆಗೆ ಮರಳಿದ್ದಾರೆ. ಈ ವರ್ಷ ಐಪಿಎಲ್​ ಆಡಲು ಶ್ರೀಶಾಂತ್​ ಬಯಸಿದ್ದರು. ಆದರೆ, ಅದು ವಿಫಲವಾಗಿದೆ. ಶ್ರೀಶಾಂತ್ ತಮ್ಮ ವೃತ್ತಿಜೀವನದಲ್ಲಿ ಪಂಜಾಬ್, ಕೇರಳ ಮತ್ತು ರಾಜಸ್ಥಾನಕ್ಕಾಗಿ 44 ಐಪಿಎಲ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​)