ಕ್ರೀಡೆ

ಇದೇನು ಪ್ರೀ ವೆಡ್ಡಿಂಗ್​ ಫೋಟೋಶೂಟಾ? ಇಂಡೋ-ಪಾಕ್​ ಕ್ರಿಕೆಟ್​ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಟ್ರೋಲ್​

ನವದೆಹಲಿ: ಅಕ್ಟೋಬರ್​ 16ರಿಂದ ಟಿ20 ವಿಶ್ವಕಪ್​ ಶುರುವಾಗಲಿದ್ದು, ದಿನಗಣನೆ ಆರಂಭವಾಗಿದೆ. ಮಹತ್ವ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ 16 ತಂಡಗಳ ನಾಯಕರು ಶನಿವಾರದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು.

ಪತ್ರಿಕಾಗೋಷ್ಠಿಯ ಬಳಿಕ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಮತ್ತು ಪಾಕಿಸ್ತಾನದ ನಾಯಕ್​ ಬಾಬರ್​ ಅಜಾಮ್​ ಸೇರಿದಂತೆ ಎಲ್ಲ ತಂಡದ ನಾಯಕರು ಫೋಟೋಶೂಟ್​ನಲ್ಲಿ ಭಾಗವಹಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್​ ಆಗಿವೆ. ಇದನ್ನು ನೋಡಿ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ.

ಜಂಟಿಯಾಗಿ ವಿವಿಧ ಭಂಗಿಗಳಲ್ಲಿ ಫೋಟೋಶೂಟ್​ ಮಾಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿ ಎಂದೇ ಬಿಂಬಿತವಾಗಿರುವ ಭಾರತ ಮತ್ತು ಪಾಕ್​ ತಂಡದ ನಾಯಕರು ತೆಗಿಸಿರುವ ಫೋಟೋವನ್ನು ಉಭಯ ರಾಷ್ಟ್ರದ ಕ್ರಿಕೆಟ್​ ಅಭಿಮಾನಿಗಳು ಟ್ರೋಲ್​ ಮಾಡಿದ್ದಾರೆ.

ಇದೇನು ಪ್ರೀ ವೆಡ್ಡಿಂಗ್​ ಫೋಟೋಶೂಟಾ? ಎಂದು ಮೀಮ್ಸ್​ಗಳನ್ನು ಹರಿಬಿಡುವ ಮೂಲಕ ವಿಶ್ವಕಪ್​ ಟಿ20 ತಂಡಗಳ ನಾಯಕರ ಫೋಟೋಶೂಟ್​ ಅನ್ನು ಟೀಕಿಸುತ್ತಿದ್ದಾರೆ. (ಏಜೆನ್ಸೀಸ್​)