ಬೆಂಗಳೂರು: ಕಳೆದ ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರೋಚಿತ ಸೋಲು ಕಂಡರು. ಆರ್ಸಿಬಿ ಆಟಕ್ಕೆ ಅಭಿಮಾನಿಗಳು ಫಿದಾ ಆದರು. ಇನ್ನು ಈ ಪಂದ್ಯದಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದು ಆರ್ಸಿಬಿ ಮಹಿಳಾ ಅಭಿಮಾನಿ ಹಿಡಿದ ಬ್ಯಾನರ್.
ಬ್ಯಾನರ್ ಎಷ್ಟರ ಮಟ್ಟಿಗೆ ಸುದ್ದಿಯಾಗಿದೆ ಅಂದರೆ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಹಾಗಾದರೆ ಆ ಬ್ಯಾನರ್ನಲ್ಲಿ ಏನಿತ್ತು ಎಂದು ನೋಡುವುದಾದರೆ, ಆರ್ಸಿಬಿ ಐಪಿಎಲ್ ಟ್ರೋಫಿ ಜಯಿಸುವವರೆಗೂ ನಾನು ಮದುವೆ ಆಗುವುದಿಲ್ಲ ಎಂದು ಬರೆಯಲಾಗಿತ್ತು. ಅಲ್ಲಿಗೆ ತಿಳಿಯುತ್ತೆ ಆರ್ಸಿಬಿ ಮೇಲೆ ಎಷ್ಟು ಅಭಿಮಾನ ಇದೆ ಅಂತಾ. ಆರ್ಸಿಬಿಗಾಗಿ ಮದುವೆಯನ್ನು ಪಕ್ಕಕ್ಕಿಟ್ಟ ಪಕ್ಕಾ ಅಭಿಮಾನಿಗೆ ಆರ್ಸಿಬಿ ಬಳಗವೂ ಕೂಡ ಫಿದಾ ಆಗಿದೆ. ಹೇಳಬೇಕೆಂದರೆ, ಆಟಕ್ಕಿಂತ ಹೆಚ್ಚಾಗಿ ಮಹಿಳಾ ಅಭಿಮಾನಿಯ ಬ್ಯಾನರ್ ಸದ್ದು ಮಾಡಿದೆ.
ಇನ್ನು ಮಹಿಳಾ ಅಭಿಮಾನಿ ಬ್ಯಾನರ್ ಹಿಡಿದು ನಿಂತಿರುವ ಫೋಟೋವನ್ನು ಟೀಮ್ ಇಂಡಿಯಾದ ಕ್ರಿಕೆಟಿಗ ಅಮಿತ್ ಶರ್ಮಾ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ನಿಜವಾಗಿಯೂ ಆಕೆಯ ಪಾಲಕರು ಚಿಂತಿಸಬೇಕಾದ ವಿಷಯವಿದು ಎಂದು ಬರೆದುಕೊಂಡಿದ್ದಾರೆ. ಅಮಿತ್ ಮಿಶ್ರಾ ಅವರ ಕಾಮೆಂಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಆರಂಭಿಕ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 60 ರನ್ ಪೇರಿಸಿ ಆಘಾತಕ್ಕೊಳಗಾಯಿತು. ಬಳಿಕ ರಾಬಿನ್-ಶಿವಂ ಜೋಡಿ 3ನೇ ವಿಕೆಟ್‌ಗೆ 74 ಎಸೆತಗಳಲ್ಲಿ 165 ರನ್ ಜತೆಯವಾಡಿದ ಪರಿಣಾಮ 4 ವಿಕೆಟ್‌ಗೆ 216 ರನ್ ಕಲೆಹಾಕಿತು. ಈ ಬೃಹತ್ ಸವಾಲು ಬೆನ್ನಟ್ಟಿದ ಆರ್‌ಸಿಬಿಗೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕೈಕೊಟ್ಟರು. ನಂತರ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಹೋರಾಟದ ನಡುವೆ 9 ವಿಕೆಟ್‌ಗೆ 193 ರನ್ ಕಲೆಹಾಕಲಷ್ಟೇ ಶಕ್ತವಾಯಿತು. (ಏಜೆನ್ಸೀಸ್)