ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ನಂತರ ರಾತ್ರಿಯ ವೇಳೆ ನಡೆಯುವ ಪಾರ್ಟಿಗಳ ಬಗ್ಗೆ ದಕ್ಷಿಣ ಆಫ್ರಿಕಾ ಮೂಲದ ಚಿಯರ್ ಗರ್ಲ್ ಗೇಬ್ರಿಯೆಲಾ ಪಾಸ್ಕ್ವಾಲೊಟ್ಟೊ ಶಾಕಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ಪಂದ್ಯದ ನಂತರದ ಪಾರ್ಟಿಗಳಲ್ಲಿ ಕ್ರಿಕೆಟಿಗರು ಅಸಭ್ಯವಾಗಿ ವರ್ತಿಸುತ್ತಾರೆಂದು ಗೇಬ್ರಿಯೆಲಾ ಆರೋಪಿಸಿದ್ದಕ್ಕೆ ಮುಂಬೈ ತಂದಡ ಚಿಯರ್ ಲೀಡರ್ಸ್ ತಂಡದಿಂದ ಅವರನ್ನು ವಜಾಗೊಳಿಸಲಾಗಿತ್ತು. ಇದು ಭಾರಿ ಸುದ್ದಿಯಾಗಿತ್ತು. ಅಲ್ಲದೆ, ವಜಾಗೊಳಿಸಿದ ಬೆನ್ನಲ್ಲೇ ಟ್ವೀಟ್ ಮೂಲಕ ಐಪಿಎಲ್ ಮ್ಯಾನೇಜ್‌ಮೆಂಟ್ ಬಗ್ಗೆ ಗೇಬ್ರಿಯೆಲಾ ವಿಷ ಕಾರಿದ್ದರು.
ಗೇಬ್ರಿಯೆಲಾರನ್ನು ವಜಾಗೊಳಿಸಿ ಆಫ್ರಿಕಾಗೆ ವಾಪಸ್ ಕಳುಹಿಸಿದ ಬಳಿಕ ತನ್ನ @Iplgirl ಟ್ವಿಟರ್ ಖಾತೆಯಲ್ಲಿಯೂ ಐಪಿಎಲ್ ಕುರಿತು ಬರೆದುಕೊಂಡಿದ್ದಾರೆ. ನನ್ನ ಬ್ಲಾಗ್ ಅನ್ನು ಹಗುರವಾಗಿ ಮತ್ತು ತಮಾಷೆಯಾಗಿ ತೆಗೆದುಕೊಳ್ಳಬೇಕು. ಅದರಲ್ಲಿ ಗಂಭೀರವಾಗಿ ಅಥವಾ ಹೃದಯಕ್ಕೆ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಆ ರೀತಿಯ ಸೀನ್ ಕ್ರಿಯೆಟ್ ಮಾಡಬಾರದು. ನನ್ನ ಬ್ಲಾಗ್ ಕೇವಲ ಕ್ರಿಕೆಟಿಗರ ಬಗ್ಗೆ ಮಾತ್ರ ಆಧರಿಸಿಲ್ಲ. ಅದರಲ್ಲಿ ಕೆಲವೇ ವಾಕ್ಯಗಳನ್ನು ಮಾತ್ರ ಅವರ ಬಗ್ಗೆ ಬರೆದಿದ್ದೇನೆ. ಇದರಿಂದ ಅವರಿಗೆ ಭಯವಾದಂತೆ ಕಾಣುತ್ತದೆ ಎಂದು ಗೇಬ್ರಿಯೆಲಾ ಬರೆದಿದ್ದಾರೆ.
ಐಪಿಎಲ್ ಮತ್ತು ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಗೇಬ್ರಿಯೆಲಾ ವಿಷಯದಲ್ಲಿ ಮೌನ ವಹಿಸಲು ನಿರ್ಧಿರಿಸಿತು. ಆದರೆ, ಗೇಬ್ರಿಯೆಲಾಗೆ ಇತರ ಚಿಯರ್ ಲೀಡರ್ಗಳ ಬೆಂಬಲವು ಇರುವುದರಿಂದ ಈ ವಿಚಾರ ಬೆಳಕಿಗೆ ಬಂದಿದೆ. ರಾತ್ರಿಯ ಪಾರ್ಟಿ ವೇಳೆ ಕ್ರಿಕೆಟಿಗರು ನಮ್ಮನ್ನು ಮಾಂಸದ ತುಣುಕುಗಳಂತೆ ನೋಡುತ್ತಿದ್ದರು. ಅವರು ಕುಡಿದ ನಂತರ ಆರಾಮವಾಗಿ ನಮ್ಮನ್ನು ಸ್ಪರ್ಶಿಸಿ, ಅನುಚಿತವಾಗಿ ವರ್ತಿಸುತ್ತಿದ್ದರು. ನಾವು ಸುಲಭವಾಗಿ ದೊರೆಯುತ್ತೇವೆ ಎಂದು ಅಂದುಕೊಂಡಿದ್ದಾರೆ ಎಂದು ಗೇಬ್ರಿಯೆಲಾ ಬರೆದುಕೊಂಡಿದ್ದಾರೆ. ಆಕೆಯ ಧ್ವನಿಗೆ ಮಿಸ್ಟರ್ ಲಿಕ್ಸ್ ಎಂಬುವರು ಬೆಂಬಲ ವ್ಯಕ್ತಪಡಿಸಿದ್ದಾರೆ.
@IPLGirl ಎಂಬ ಟ್ವಿಟರ್ ಖಾತೆಯಿಂದ ಐಪಿಎಲ್ ಅನುಭವಗಳನ್ನು ಟ್ವೀಟ್ ಮಾಡುವಾಗ ಗೇಬ್ರಿಯೆಲಾ ಮೊದಲು ಗಮನ ಸೆಳೆದಿದ್ದರು. ಇದಾದ ಬಳಿಕ ಅವರು ಅನಾಮಧೇಯ ಬ್ಲಾಗ್ ಬರೆಯಲು ಆರಂಭಿಸಿದ್ದು, ಅದರಲ್ಲಿ ಕ್ರಿಕೆಟಿಗರು ಮತ್ತು ಐಪಿಎಲ್ ಪಾರ್ಟಿಗಳ ಬಗ್ಗೆ ಬರೆದಿದ್ದಾರೆ. ಆಕೆಯ ಈ ನಡೆಯಿಂದಲೇ ಆಕೆಯನ್ನು ವಜಾಗೊಳಿಸಿ ಮನೆಗೆ ಕಳುಹಿಸಲಾಗಿದೆ ಎಂದು ಚಿಯರ್ ಲೀಡರ್ ಒಬ್ಬರು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಗೇಬ್ರಿಯೆಲಾ, ನಾನು ಅಪರಾಧಿ ಎಂಬಂತೆ ನನ್ನನ್ನು ಮನೆಗೆ ವಾಪಸ್ಸು ಕಳುಹಿಸಲಾಯಿತು. ನಾನು ಡ್ರಗ್ಸ್ ತೆಗೆದುಕೊಂಡಿದ್ದೇನೆಂದು ಬಿಂಬಿಸಲಾಯಿತು ಮತ್ತು ಅದಕ್ಕಿಂತ ದೊಡ್ಡ ಅಪರಾಧ ಮಾಡಿದ್ದೇನೆಂದು ಪರಿಗಣಿಸಲಾಯಿತು. ನನಗಾದ ಅನುಭವ ಹೇಳಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಇಂತಹ ಪಾರ್ಟಿಗಳಲ್ಲಿ ಎಲ್ಲಾ ಕಡೆಯಲ್ಲೂ ಕ್ಯಾಮರಾಗಳಿದ್ದವು. ಇದನ್ನೆಲ್ಲಾ ಕ್ಯಾಮರಾವೂ ಗಮನಿಸಿದೆ. ನಮ್ಮನ್ನು ಮಾಂಸದ ತುಂಡುಗಳಂತೆ ನಡೆಸಿಕೊಂಡರು. ನಾವು ಎಲ್ಲಿಗೂ ಒಂಟಿಯಾಗಿ ಹೋಗಲು ಆಗುತ್ತಿರಲಿಲ್ಲ ಎಂದಿರುವ ಗೇಬ್ರಿಯೆಲಾ, ಯಾವುದೇ ಒಬ್ಬ ವ್ಯಕ್ತಿಯ ಕಡೆಗೆ ಬೊಟ್ಟು ಮಾಡಿ ಬರೆದಿಲ್ಲ. ಕ್ರಿಕೆಟಿಗ ದೂರು ನೀಡಿದ್ದಾನೆ ಅಂದರೆ ಆತ ತಪ್ಪಿತಸ್ಥ ಆತ್ಮಸಾಕ್ಷಿಯನ್ನು ಹೊಂದಿದ್ದಾನೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)