ನವದೆಹಲಿ: ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್, ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರನ್ನು ಕೊಂಡಾಡಿದ್ದಾರೆ. ಪಂತ್ ಅವರನ್ನು ನಿರ್ಭೀತ ಕ್ರಿಕೆಟಿಗ ಎಂದು ಕರೆದಿದ್ದಾರೆ.
ಕಳೆದ ಭಾನುವಾರ ಇಂಗ್ಲೆಂಡ್ ವಿರುದ್ಧ ನಡೆದ ಕೊನೆಯ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಅಮೋಘ ಆಟವಾಡಿದ ಪಂತ್ ಅವರನ್ನು ಮಾಜಿ ಕ್ರಿಕೆಟಿಗರು ಹೊಗಳುತ್ತಿದ್ದಾರೆ. ಅಜೇಯ 125 ರನ್ ಗಳಿಸುವ ಮೂಲಕ ಇಂಗ್ಲೆಂಡ್ ವಿರುದ್ಧದ ಗೆಲುವಿನಲ್ಲಿ ಪಂತ್ ಪ್ರಮುಖ ಪಾತ್ರವಹಿಸಿದರು. ಅವರ ಆಟವನ್ನು ವಿಶ್ಲೇಷಿಸಿರುವ ಅಖ್ತರ್, ಪಂತ್ ಏಕಾಂಗಿಯಾಗಿ ಭಾರತಕ್ಕೆ ಸರಣಿಯನ್ನು ಗೆಲ್ಲಿಸಿಕೊಟ್ಟರು ಎಂದಿದ್ದಾರೆ.
ಪಂತ್ ಓರ್ವ ನಿರ್ಭೀತ ಕ್ರಿಕೆಟಿಗ. ಅವರು ಕಟ್ ಶಾಟ್, ಪುಲ್ ಶಾಟ್, ರಿವರ್ಸ್ ಸ್ವೀಪ್, ಸ್ಲಾಗ್ ಸ್ವೀಪ್ ಮತ್ತು ಪ್ಯಾಡಲ್ ಸ್ವೀಪ್ ಸೇರಿದಂತೆ ವಿವಿಧ ರೀತಿ ಹೊಡೆತಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದರು ಮತ್ತು ಇದೀಗ ಇಂಗ್ಲೆಂಡ್ನಲ್ಲಿ ಏಕಾಂಗಿಯಾಗಿ ಸರಣಿ ಜಯಿಸಿಕೊಟ್ಟಿದ್ದಾರೆ ಎಂದು ತಮ್ಮದೇ ಯೂಟ್ಯೂಬ್ ಚಾನೆಲ್ನಲ್ಲಿ ಅಖ್ತರ್ ಅವರು ಪಂತ್ರನ್ನು ಕೊಂಡಾಡಿದ್ದಾರೆ.
ಇದೇ ವಿಡಿಯೋದಲ್ಲಿ ಪಂತ್ಗೆ ಫಿಟ್ನೆಸ್ ಮೇಲೆ ಗಮನ ಹರಿಸಲು ಅಖ್ತರ್ ಸಲಹೆ ನೀಡಿದ್ದಾರೆ. ಕೊಂಚ ತೂಕ ಕಳೆದುಕೊಳ್ಳುವಂತೆ ಹೇಳಿದ್ದಾರೆ. ಒಳ್ಳೆಯ ಫಿಟ್ನೆಸ್ ಸಾಧಿಸಿದರೆ, ಕ್ರಿಕೆಟಿಗ ಜೊತೆಗೆ ಮಾಡೆಲ್ ಆಗಿ ಒಳ್ಳೆಯ ಹಣವನ್ನೂ ಸಂಪಾದಿಸಬಹುದು ಎಂದಿದ್ದಾರೆ.
ಕೊಂಚ ದಪ್ಪವಾಗಿರುವಂತೆ ಪಂತ್ ಕಾಣಿಸುತ್ತಾರೆ. ಅದರ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬ ಭರವಸೆ ಇದೆ. ಪಂತ್ ನೋಡಲು ತುಂಬಾ ಚೆನ್ನಾಗಿದ್ದಾರೆ. ಫಿಟ್ನೆಸ್ ಕಾಪಾಡಿಕೊಂಡರೆ, ಮಾಡೆಲ್ ಆಗಿ ಕೋಟ್ಯಂತರ ರೂಪಾಯಿ ಸಂಪಾದಿಸಬಹುದು. ಭಾರತೀಯ ಮಾರುಕಟ್ಟೆ ದೊಡ್ಡದು. ಒಬ್ಬ ವ್ಯಕ್ತಿಯು ಭಾರತದಲ್ಲಿ ಸೂಪರ್‌ಸ್ಟಾರ್ ಆಗುವಾಗ, ಅವರ ಮೇಲೆ ಸಾಕಷ್ಟು ಹೂಡಿಕೆ ಮಾಡಲಾಗುತ್ತದೆ ಎಂದು ಪಾಕಿಸ್ತಾನದ ದಂತಕಥೆ ವೇಗಿ ಹೇಳಿದರು.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಭಾರತ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ 2-1 ಅಂತರದಿಂದ ಸರಣಿ ಜಯಿಸಿದೆ. ಟೆಸ್ಟ್ ಪಂದ್ಯದನ್ನು 2-2 ರೊಂದಿಗೆ ಸಮಬಲ ಸಾಧಿಸಿದೆ. ಇದೀಗ ವಿಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ಜುಲೈ 27ರಿಂದ ಪಂದ್ಯಗಳು ಆರಂಭವಾಗಲಿದೆ. (ಏಜೆನ್ಸೀಸ್)