ಕ್ರೀಡೆ

ಇದೇ ಕಾರಣಕ್ಕೆ ಐಪಿಎಲ್​ಗೆ ಗುಡ್​ಬೈ! ಧೋನಿ ನಿಜಕ್ಕೂ ಗ್ರೇಟ್​: ಆರ್​. ಆಶ್ವಿನ್ ಮನದಾಳ | R Ashwin

R Ashwin: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಐಪಿಎಲ್​ಗೂ ಗುಡ್​ಬೈ ಹೇಳಿದರು. ಮುಂಬರುವ ವಿದೇಶಿ ಲೀಗ್​ಗಳಲ್ಲಿ ಆಡಲು ಇಚ್ಛಿಸಿರುವ ಅಶ್ವಿನ್​, ಐಪಿಎಲ್​ ಆಡುವ ಅವಕಾಶವಿದ್ದರೂ ಅಷ್ಟು ಬೇಗ ಏಕೆ ವಿದಾಯ ಹೇಳಿದರು ಎಂಬುದಕ್ಕೆ ಇದೀಗ ಕಾರಣ ಬಹಿರಂಗಪಡಿಸಿದ್ದಾರೆ.

ಮುಂದಿನ ವರ್ಷ ಅಶ್ವಿನ್​ ಇಂಗ್ಲೆಂಡ್​ನ 'ದಿ ಹಂಡ್ರೆಡ್' ಲೀಗ್​ನ ಭಾಗವಾಗುವ ಸಾಧ್ಯತೆಯಿದೆ. ಐಪಿಎಲ್​ನಿಂದ ನಿವೃತ್ತಿ ಹೊಂದುವ ತಮ್ಮ ದಿಢೀರ್​ ನಿರ್ಧಾರದ ಹಿಂದಿನ ಕಾರಣವನ್ನು ಈಗ ಬಹಿರಂಗಪಡಿಸಿರುವ ಮಾಜಿ ಸ್ಪಿನ್ನರ್​, ಎರಡು ತಿಂಗಳ ಕಾಲ ನಿರಂತರವಾಗಿ ಕ್ರಿಕೆಟ್ ಆಡಲು ಸಿದ್ಧವಿಲ್ಲದ ಕಾರಣ ನಾನು ಐಪಿಎಲ್​ನಿಂದ ಹೊರಗುಳಿದೆ ಎಂದಿದ್ದಾರೆ.

ಅಶ್ವಿನ್ ಮನದಾಳ

"ನಾನು ಆರಂಭದಲ್ಲಿ 2025ರ ಐಪಿಎಲ್ ಆವೃತ್ತಿಯಲ್ಲಿ ಆಡಲು ನಿರ್ಧರಿಸಿದ್ದೆ. ಆದರೆ, ಮೂರು ತಿಂಗಳ ಕಾಲ ಸತತವಾಗಿ ಕ್ರಿಕೆಟ್ ಆಡುವುದು ಸ್ವಲ್ಪ ಕಷ್ಟಕರವೆನಿಸಿತು. ನನ್ನ ದೇಹವು ಆ ಮಟ್ಟಿಗಿನ ಸಾಮರ್ಥ್ಯವನ್ನು ಹೊಂದುವುದು ಕಷ್ಟಸಾಧ್ಯ ಎನಿಸಿತು. ಇದೇ ನನ್ನನ್ನು ಐಪಿಎಲ್​ನಿಂದ ಹೊರಗುಳಿಯುವಂತೆ ಮಾಡಿತು. ಅದೇ ರೀತಿ, 44ನೇ ವಯಸ್ಸಿನಲ್ಲಿಯೂ ಚೆನ್ನೈ ಸೂಪರ್​ ಕಿಂಗ್ಸ್ ಪರ ಐಪಿಎಲ್​ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿ ಅವರು ನಿಜಕ್ಕೂ ಗ್ರೇಟ್"​ ಎಂದು ಅಶ್ವಿನ್ ಹೊಗಳಿದ್ದಾರೆ.

ಧೋನಿ ಫಿಟ್ನೆಸ್​

"ಧೋನಿ ನಿಜವಾಗಿಯೂ ಅದ್ಭುತ. ಅವರ ಫಿಟ್ನೆಸ್ ನೋಡಿ ನಾನು ಸದಾ ಅಚ್ಚರಿಗೆ ಒಳಗಾಗುತ್ತೇನೆ. ವಯಸ್ಸು ದಾಟುತ್ತಿದ್ದಂತೆ ಐಪಿಎಲ್‌ನಂತಹ ಟಿ20 ಲೀಗ್‌ಗಳಲ್ಲಿ ಆಡುವುದು ಅಷ್ಟು ಸುಲಭವಲ್ಲ. ಇಲ್ಲಿ ನಾವು, ದೇಶಾದ್ಯಂತ ಪ್ರಯಾಣಿಸಿ ಪಂದ್ಯಗಳನ್ನು ಆಡಬೇಕಾಗುತ್ತದೆ. ಒಂದರ ಬೆನ್ನಲ್ಲೇ ಮತ್ತೊಂದರಂತೆ ಪಂದ್ಯಗಳಿಗೆ ಸಿದ್ಧವಾಗಿರಬೇಕು. ಇದಕ್ಕೆ ನಮ್ಮ ದೇಹವು ಸಹಕರಿಸಬೇಕು. ಈ ವಿಷಯದಲ್ಲಿ ನಾನು ಧೋನಿ ನಿರ್ಧಾರವನ್ನು ಶ್ಲಾಘಿಸುತ್ತೇನೆ" ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ,(ಏಜೆನ್ಸೀಸ್).