ಕ್ರೀಡೆ

499ರಲ್ಲಿ ನಿಂತ ಆರ್​. ಅಶ್ವಿನ್​ ವಿಕೆಟ್​ ಬೇಟೆ; ವಿಶಾಖಪಟ್ಟಣದಲ್ಲಿ 500ನೇ ವಿಕೆಟ್​ ತಪ್ಪಿಸಿದ ಡಿಆರ್​ಎಸ್​!

ವಿಶಾಖಪಟ್ಟಣ: ಇಂಗ್ಲೆಂಡ್​ ವಿರುದ್ದದ 2ನೇ ಟೆಸ್ಟ್​ನಲ್ಲಿ ಭಾರತ 106 ರನ್​ಗಳಿಂದ ಗೆದ್ದಿತು. ಈ ವೇಳೆ ಭಾರತೀಯ ಸಂಭ್ರಮವನ್ನು ದುಪ್ಪಟ್ಟುಗೊಳಿಸಬಹುದಾಗಿದ್ದ ಆರ್​. ಅಶ್ವಿನ್​ ಅವರ 500ನೇ ವಿಕೆಟ್​ ಸಾಧನೆ ಸ್ವಲ್ಪದರಲ್ಲಿಯೇ ತಪ್ಪಿಹೋಯಿತು. ಇದಕ್ಕೆ ಡಿಆರ್​ಎಸ್​ ಪ್ರಮುಖ ಕಾರಣವಾಯಿತು!

ಅನುಭವಿ ಸ್ಪಿನ್ನರ್​ ಆರ್​. ಅಶ್ವಿನ್​ ಸೋಮವಾರವೇ ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ ಮೈಲಿಗಲ್ಲು ಸ್ಥಾಪಿಸುವತ್ತ ಮುನ್ನುಗ್ಗಿದರೂ 1 ವಿಕೆಟ್​ ಕೊರತೆ ಎದುರಿಸಿದ್ದು, ಇನ್ನು ರಾಜ್​ಕೋಟ್​ ಟೆಸ್ಟ್​ವರೆಗೆ ಕಾಯಬೇಕಾಗಿದೆ.

4ನೇ ದಿನದಾಟದಲ್ಲಿ 2 ವಿಕೆಟ್​ ಕಬಳಿಸಿದ ಅಶ್ವಿನ್​ ವಿಕೆಟ್​ ಗಳಿಕೆಯನ್ನು 499ಕ್ಕೇರಿಸಿಕೊಂಡರು. ಅಶ್ವಿನ್​ ಎಸೆದ ಇನಿಂಗ್ಸ್​ನ 63ನೇ ಓವರ್​ನಲ್ಲಿ ಟಾಮ್​ ಹಾರ್ಟ್ಲಿ ರಿವರ್ಸ್​ ಸ್ವೀಪ್​ ಮಾಡಲು ಯತ್ನಿಸಿದಾಗ ಚೆಂಡು ಅವರ ಬ್ಯಾಟ್​ಗೆ ಕನೆಕ್ಟ್​ ಆಗದೆ ಕೈಗೆ ಬಡಿದು ಕೀಪರ್​ ಹಿಂದಕ್ಕೆ ಹಾರಿದಾಗ ರೋಹಿತ್​ ಶರ್ಮ ಓಡಿಬಂದು ಕ್ಯಾಚ್​ ಹಿಡಿದರು. ಮೈದಾನದ ಅಂಪೈರ್​ ಔಟ್​ ತೀರ್ಪನ್ನು ನೀಡಿದಾಗ ಅಶ್ವಿನ್​ 500ನೇ ವಿಕೆಟ್​ ಪಡೆದರು ಎಂದೇ ಭಾವಿಸಲಾಯಿತು. ಆದರೆ ಹಾರ್ಟ್ಲಿ ಡಿಆರ್​ಎಸ್​ ಮೊರೆ ಹೋದಾಗ ತೃತೀಯ ಅಂಪೈರ್​ ನಾಟೌಟ್​ ತೀರ್ಪಿತ್ತರು. ಮೈದಾನದ ಅಂಪೈರ್​ ಕ್ಯಾಚ್​ ಔಟ್​ ನೀಡಿದ್ದರೆ ತೃತೀಯ ಅಂಪೈರ್​ ಎಲ್​ಬಿಡಬ್ಲ್ಯು ಪರಾಮರ್ಶೆ ನಡೆಸಿದರು. ಈ ಬಗ್ಗೆ ರೋಹಿತ್​ ಮೈದಾನದ ಅಂಪೈರ್​ ಜತೆ ವಾಗ್ವಾದ ನಡೆಸಿದರೂ, ತೃತೀಯ ಅಂಪೈರ್​ ಕ್ಯಾಚ್​ ಪರಾಮರ್ಶೆ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಳ್ಳಲಿಲ್ಲ. ಇದರಿಂದ ಆರ್​. ಅಶ್ವಿನ್​ ಅವರ 500ನೇ ವಿಕೆಟ್​ ಸಂಭ್ರಮವನ್ನು ಕಾಣಲು ವಿಶಾಖಪಟ್ಟಣದ ಪ್ರೇಕ್ಷಕರಿಗೆ ಅವಕಾಶ ಕೂಡಿಬರಲಿಲ್ಲ.

ಕನ್ನಡಿಗ ಅನಿಲ್​ ಕುಂಬ್ಳೆ (619) ಭಾರತ ಪರ 500 ಟೆಸ್ಟ್​ ವಿಕೆಟ್​ ಪಡೆದ ಮೊದಲ ಸಾಧಕರಾಗಿದ್ದು, ಆರ್​. ಅಶ್ವಿನ್​ ಈ ಸಾಧನೆ ಮಾಡಿದ 2ನೇ ಭಾರತೀಯರೆನಿಸುವ ತವಕದಲ್ಲಿದ್ದಾರೆ.