ಕ್ರೀಡೆ

ನಿರಂತರವಾಗಿ ಅವಮಾನಿಸಲಾಗುತ್ತಿದೆ; Ashwin ನಿವೃತ್ತಿ ಕುರಿತು ಸ್ಫೋಟಕ ಹೇಳಿಕೆ ನೀಡಿದ ತಂದೆ

ಚೆನ್ನೈ: ಹಾಲಿ ನಡೆಯುತ್ತಿರುವ ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ನಡುವೆಯೇ  ಟೀಮ್​ ಇಂಡಿಯಾದ (Team India) ಸ್ಪಿನ್​ ಮಾಂತ್ರಿಕ ರವಿಚಂದ್ರನ್​ ಅಶ್ವಿನ್ (R Ashwin) ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿಯನ್ನು (Retirement) ಘೋಷಿಸಿದ್ದು, ಈ ಬೆಳವಣೀಗೆ ಹಲವರಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಕೆಲವರು ಅಶ್ವಿನ್​ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡರೆ ಹಲವರು ಟೀಕಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ನಡುವೆಯೇ ಅಶ್ವಿನ್​ ಅವರ ತಂದೆ ನೀಡಿರುವ ಹೇಳಿಕೆ ಕ್ರೀಡಾ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು, ಹೊಸ ಸಂಚಲನ ಮೂಡಿಸಿದೆ.

ಆಸ್ಟ್ರೇಲಿಯಾದಲ್ಲಿ ನಿವೃತ್ತಿ ಘೋಷಿಸಿದ ಬಳಿಕ ಭಾರತಕ್ಕೆ ಮರಳಿ ಅಶ್ವಿನ್​ಗೆ (Ashwin) ಭರ್ಜರಿ ಸ್ವಾಗತ ದೊರೆತ್ತಿದ್ದು, ಅವರನ್ನು ಪತ್ನಿ, ಪುತ್ರಿಯರು, ಪೋಷಕರು ಹಾಗೂ ಅಭಿಮಾನಿಗಳು ಬರಮಾಡಿಕೊಂಡಿದ್ದಾರೆ. ಇನ್ನೂ ಈ ವೇಳೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಶ್ವಿನ್​ ಅವರ ತಂದೆ ನೀಡಿರುವ ಹೇಳಿಕೆ ಸಖತ್​ ವೈರಲ್​ ಆಗುತ್ತಿದೆ.

ಆತ ನಿವೃತ್ತಿ ಘೋಷಿಸುವ ವಿಚಾರ ನನಗೂ ಕೊನೆಯ ಕ್ಷಣದಲ್ಲಿ ಗೊತ್ತಾಯಿತು. ಆತನ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದು ನನಗೆ ತಿಳಿದಿಲ್ಲ. ಆತ ನಿವೃತ್ತಿ ಘೋಷಿಸಿರುವ ವಿಚಾರವನ್ನು ನಾನು ಪೂರ್ಣಪ್ರಮಾಣದಲ್ಲಿ ಒಪ್ಪಿಕೊಳ್ಳುತ್ತೇನೆ. ಆದರೆ, ಆತ ನಿವೃತ್ತಿ ಘೋಷಿಸಿದ ರೀತಿ, ಒಂದು ಕಡೆ ನನಗೆ ತುಂಬಾ ಸಂತೋಷ ನೀಡಿದ್ದರೆ, ಮತ್ತೊಂದೆಡೆ ನನಗೆ ನೋವುಂಟು ಮಾಡಿದೆ. ಏಕೆಂದರೆ ಅವನು ತನ್ನ ಆಟವನ್ನು ಮುಂದುವರಿಸಬೇಕಾಗಿತ್ತು. ನಿವೃತ್ತಿ ಎಂಬುದು ಅಶ್ವಿನ್ ಅವರ ನಿರ್ಧಾರವಾಗಿದ್ದು, ನಾನು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.

ಅಶ್ವಿನ್​ ನಿವೃತ್ತಿ ತೆಗೆದುಕೊಂಡ ರೀತಿಗೆ ಹಲವು ಕಾರಣಗಳಿರಬಹುದು. ಅದು ಅಶ್ವಿನ್​ಗೆ ಮಾತ್ರ ಗೊತ್ತು, ಇದರಲ್ಲಿ ತಂಡದಲ್ಲಿ ಆತನಿಗೆ ಆಗುತ್ತಿದ್ದ ಅವಮಾನವೂ ಕಾರಣವಾಗಿರಬಹುದು. ಆತನ ನಿವೃತ್ತಿ ನಮಗೆ ಭಾವನಾತ್ಮಕ ಕ್ಷಣವಾಗಿದೆ ಏಕೆಂದರೆ ಅವರು 14-15 ವರ್ಷಗಳ ಕಾಲ ತಂಡದಲ್ಲಿ ಆಡಿದರು. ಹೀಗಾಗಿ ಅವರ ಹಠಾತ್ ನಿವೃತ್ತಿ ನಮಗೆ ಆಘಾತ ತಂದಿತು. ಆತನನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ ಎಂದು ನಾವು ಭಾವಿಸುತ್ತೇವೆ. ಹೀಗಾಗಿ ಇದನ್ನೆಲ್ಲಾ ಇನ್ನೆಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ ಹೇಳಿ ಹಾಗಾಗಿಯೇ ನಿವೃತ್ತಿ ನಿರ್ಧಾರ ಮಾಡಿರಬಹುದು ಎಂದು ಅಶ್ವಿನ್​ ಅವರ ತಂದೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಅಂದಹಾಗೆ ಅಶ್ವಿನ್​ (R Ashwin) ಅವರು 106 ಟೆಸ್ಟ್‌ ಪಂದ್ಯಗಳಲ್ಲಿ 24ರ ಸರಾಸರಿಯಲ್ಲಿ 537 ವಿಕೆಟ್‌ಗಳನ್ನು ಪಡೆದು ಟೆಸ್ಟ್​ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. 132 ಟೆಸ್ಟ್‌ಗಳಲ್ಲಿ 619 ವಿಕೆಟ್‌ಗಳನ್ನು ಪಡೆದಿರುವ ಟೀಮ್​ ಇಂಡಿಯಾದ ದಿಗ್ಗಜ ಆಟಗಾರ ಅನಿಲ್ ಕುಂಬ್ಳೆ ಬಳಿಕ ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ವೃತ್ತಿ ಬದುಕನ್ನು ಅಶ್ವಿನ್​ ಕೊನೆಗೊಳಿಸಿದರು. ಬೌಲಿಂಗ್​ನಲ್ಲಿ ಮಾತ್ರವಲ್ಲದೆ, ಆರು ಶತಕಗಳು ಮತ್ತು 14 ಅರ್ಧಶತಕಗಳೊಂದಿಗೆ 3503 ಟೆಸ್ಟ್ ರನ್‌ಗಳನ್ನು ಗಳಿಸಿ, ಬ್ಯಾಟಿಂಗ್​ನಲ್ಲೂ ಮಿಂಚಿದ್ದಾರೆ. 3000ಕ್ಕೂ ಹೆಚ್ಚು ರನ್ ಮತ್ತು 300 ವಿಕೆಟ್‌ಗಳೊಂದಿಗೆ 11 ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ.