ಕ್ರೀಡೆ

ಫೈನಲ್‌ಗೇರಲು ಇಂದು ಡೆಲ್ಲಿ-ಸನ್‌ರೈಸರ್ಸ್‌ ಕಾದಾಟ

ಅಬುಧಾಬಿ: ಕಳೆದ ಕೆಲ ಪಂದ್ಯಗಳಿಂದ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಳೆದ ಕೆಲ ಪಂದ್ಯಗಳಿಂದ ಭರ್ಜರಿ ಲಯದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಐಪಿಎಲ್-13ರಲ್ಲಿ ಭಾನುವಾರ ನಡೆಯಲಿರುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸವಾಲೊಡ್ಡುವ ಅವಕಾಶ ಪಡೆಯಲಿದ್ದರೆ, ಸೋತ ತಂಡ 3ನೇ ಸ್ಥಾನಕ್ಕೆ ತೃಪ್ತಿಪಡಲಿದೆ.

ಡೆಲ್ಲಿ ತಂಡ ಟೂರ್ನಿಯಲ್ಲಿ ಆಡಿದ ಕೊನೆಯ 6 ಪಂದ್ಯಗಳಲ್ಲಿ 5ರಲ್ಲಿ ಸೋಲು ಕಂಡು ಪರದಾಡುತ್ತಿದ್ದರೆ, ಸನ್‌ರೈಸರ್ಸ್‌ ತಂಡ ಕೊನೆಯ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಬೀಗುತ್ತಿದೆ. ಲೀಗ್ ಹಂತದ ಎರಡೂ ಮುಖಾಮುಖಿಗಳಲ್ಲಿ ಗೆದ್ದ ವಿಶ್ವಾಸವನ್ನೂ ಡೇವಿಡ್ ವಾರ್ನರ್ ಬಳಗ ಹೊಂದಿದೆ. ಆದರೆ ಡೆಲ್ಲಿ ತಂಡ ಲೀಗ್ ಹಂತದಲ್ಲಿ ಒಟ್ಟಾರೆ 8 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿತ್ತು. ಟೂರ್ನಿಯ ಮೊದಲ 9 ಪಂದ್ಯಗಳಲ್ಲಿ 7ರಲ್ಲಿ ಜಯಿಸಿದ್ದ ಭರ್ಜರಿ ನಿರ್ವಹಣೆಯನ್ನು ಶ್ರೇಯಸ್ ಅಯ್ಯರ್ ಬಳಗ ಪುನರಾವರ್ತಿಸಿದರೆ ಫೈನಲ್‌ಗೇರಲು ರೋಚಕ ಕಾದಾಟ ಏರ್ಪಡಲಿದೆ.

ಡೆಲ್ಲಿಗೆ ಲಯ ಕಂಡುಕೊಳ್ಳುವ ತವಕ

ಟೂರ್ನಿಯ ಮೊದಲಾರ್ಧದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಸಲದ ಹಾಟ್ ಫೇವರಿಟ್ ತಂಡದಂತೆ ಕಂಡಿತ್ತು. ಆದರೆ ಕಳೆದ 6 ಪಂದ್ಯಗಳಲ್ಲಿ ಡೆಲ್ಲಿ ತಂಡ ಲಯ ತಪ್ಪಿದೆ. ಅದರಲ್ಲೂ ಮೊದಲ ಕ್ವಾಲಿೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಹೀನಾಯ ಸೋಲು ಡೆಲ್ಲಿ ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡಿದಂತಿತ್ತು. ಟೂರ್ನಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್‌ಗೇರಿದ ಸಾಧನೆ ಮಾಡಬೇಕಾದರೆ ಡೆಲ್ಲಿ ತಂಡ ಪುಟಿದೇಳಬೇಕಾದ ಅಗತ್ಯವಿದೆ. ಭಾರತೀಯ ಬ್ಯಾಟ್ಸ್‌ಮನ್‌ಗಳೇ ಡೆಲ್ಲಿ ತಂಡದ ಬಲವೆನಿಸಿದ್ದರೂ, ಕಳೆದ ಕೆಲ ಪಂದ್ಯಗಳಿಂದ ಅವರು ಕೈಕೊಡುತ್ತಿದ್ದಾರೆ. ಸತತ 2 ಶತಕ ಸಿಡಿಸಿ ಮಿಂಚಿದ್ದ ಶಿಖರ್ ಧವನ್ (525 ರನ್) ಇದೀಗ ಪರದಾಡುತ್ತಿದ್ದಾರೆ. ಪೃಥ್ವಿ ಷಾ ಕೆಟ್ಟ ಫಾರ್ಮ್‌ನಲ್ಲಿದ್ದರೆ, ಅಜಿಂಕ್ಯ ರಹಾನೆ ಆಡಿದ 7 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಮಿಂಚಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಕೂಡ ಅಸ್ಥಿರ ನಿರ್ವಹಣೆ ತೋರಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಕಗಿಸೊ ರಬಾಡ (25 ವಿಕೆಟ್), ಆನ್ರಿಚ್ ನೋರ್ಜೆ (20) ಮಿಂಚುತ್ತಿದ್ದರೂ, ಮುಂಬೈ ವಿರುದ್ಧದ ಕಳೆದ ಪಂದ್ಯದಲ್ಲಿ ದುಬಾರಿ ಆಗಿದ್ದರು. ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ (13) ಮಾತ್ರ ಮುಂಬೈ ತಂಡವನ್ನು ಕಟ್ಟಿಹಾಕಲು ಹೋರಾಡಿದ್ದರು.

ಭರ್ಜರಿ ಲಯದಲ್ಲಿದೆ ಸನ್‌ರೈಸರ್ಸ್‌

ಸನ್‌ರೈಸರ್ಸ್‌ ತಂಡ 2016ರ ಬಳಿಕ ಮತ್ತೊಮ್ಮೆ ಫೈನಲ್‌ಗೇರುವ ತವಕದಲ್ಲಿದೆ. 2016ರಲ್ಲೂ ಸನ್‌ರೈಸರ್ಸ್‌ ತಂಡ ಲೀಗ್ ಹಂತದ ಕೊನೆಯ 3 ಪಂದ್ಯ ಗೆದ್ದು ಪ್ಲೇಆಫ್​ಗೇರಿತ್ತು. ಬಳಿಕ ಮತ್ತೆ 3 ಪಂದ್ಯ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿತ್ತು. ಇದೀಗ ಅದೇ ನಿರ್ವಹಣೆಯನ್ನು ಪುನರಾವರ್ತಿಸುವ ಹಂಬಲದಲ್ಲಿದೆ. ವೆಸ್ಟ್ ಇಂಡೀಸ್ ಆಲ್ರೌಂಡರ್ ಜೇಸನ್ ಹೋಲ್ಡರ್ ಸೇರ್ಪಡೆಯ ಬಳಿಕ ಸನ್‌ರೈಸರ್ಸ್‌ ತಂಡ ಸಮತೋಲನ ಕಂಡಿದ್ದು, ಮಧ್ಯಮ ಕ್ರಮಾಂಕಕ್ಕೂ ಸ್ವಲ್ಪ ಬಲ ಬಂದಿದೆ. ಬ್ಯಾಟ್ಸ್‌ಮನ್‌ಗಳ ಸಮಯೋಚಿತ ಆಟದ ಜತೆಗೆ ಬೌಲಿಂಗ್‌ನಲ್ಲೂ ಗಮನಾರ್ಹ ನಿರ್ವಹಣೆ ಬರುತ್ತಿದೆ. ಸ್ಪಿನ್ನರ್ ರಶೀದ್ ಖಾನ್ ಟೂರ್ನಿಯುದ್ದಕ್ಕೂ ಓವರ್‌ಗೆ 6ಕ್ಕಿಂತ ಕಡಿಮೆ ರನ್ ನೀಡುತ್ತ ಬಂದಿದ್ದರೆ, ವೇಗಿ ಟಿ. ನಟರಾಜನ್ ಸ್ಲಾಗ್ ಓವರ್‌ಗಳಲ್ಲಿ ಮಾರಕ ಯಾರ್ಕರ್ ಎಸೆತಗಳ ಮೂಲಕ ಗಮನಸೆಳೆದಿದ್ದಾರೆ.

ಟೀಮ್ ನ್ಯೂಸ್:

ಡೆಲ್ಲಿ ಕ್ಯಾಪಿಟಲ್ಸ್: ಸತತ ಸೋಲಿನ ನಡುವೆಯೂ ತಂಡದಲ್ಲಿ ಹೆಚ್ಚಿನ ಬದಲಾವಣೆಗೆ ಅವಕಾಶವಿಲ್ಲದಂತಾಗಿದೆ. ವೇಗಿ ಡೇನಿಯಲ್ ಸ್ಯಾಮ್ಸ್ ಪರಿಣಾಮಕಾರಿ ಎನಿಸಿಲ್ಲ. ಹೀಗಾಗಿ ಬ್ಯಾಟಿಂಗ್ ಬಲಪಡಿಸಲು ಶಿಮ್ರೋನ್ ಹೆಟ್ಮೆಯರ್ ಮತ್ತೆ ತಂಡದೊಳಗೆ ಬರಬಹುದು. ಆಗ ಮಾರ್ಕಸ್ ಸ್ಟೋಯಿನಿಸ್ 4 ಓವರ್‌ಗಳ ಬೌಲಿಂಗ್ ಕೋಟಾ ಪೂರ್ಣಗೊಳಿಸಬೇಕಾಗುತ್ತದೆ.

ಕಳೆದ ಪಂದ್ಯ: ಮೊದಲ ಕ್ವಾಲಿಫೈಯರ್‌ನಲ್ಲಿ ಮುಂಬೈ ವಿರುದ್ಧ 57 ರನ್ ಸೋಲು.

ಸನ್‌ರೈಸರ್ಸ್‌ ಹೈದರಾಬಾದ್: ತೊಡೆಸಂಧು ಗಾಯದಿಂದಾಗಿ ಎಲಿಮಿನೇಟರ್ ಪಂದ್ಯ ತಪ್ಪಿಸಿಕೊಂಡಿದ್ದ ವೃದ್ಧಿಮಾನ್ ಸಾಹ ಈ ಪಂದ್ಯಕ್ಕೂ ಲಭ್ಯರಾಗುವುದು ಅನುಮಾನ. ಹೀಗಾಗಿ ಶ್ರೀವತ್ಸ ಗೋಸ್ವಾಮಿ ಅವರೇ ಮತ್ತೊಮ್ಮೆ ವಿಕೆಟ್ ಕೀಪರ್ ಸ್ಥಾನವನ್ನು ತುಂಬಬಹುದು. 4 ವಿದೇಶಿ ಆಟಗಾರರ ಸ್ಥಾನ ಭದ್ರವಾಗಿರುವುದರಿಂದ ಬೇರ್‌ಸ್ಟೋ ಮತ್ತೆ ಬೆಂಚು ಕಾಯಿಸಬೇಕಾಗುತ್ತದೆ.

ಕಳೆದ ಪಂದ್ಯ: ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ವಿರುದ್ಧ 6 ವಿಕೆಟ್ ಜಯ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 17

ಸನ್‌ರೈಸರ್ಸ್‌: 11

ಡೆಲ್ಲಿ: 6

ಲೀಗ್ ಮುಖಾಮುಖಿ;

1. ಸನ್‌ರೈಸರ್ಸ್‌ಗೆ 15 ರನ್ ಜಯ.

2. ಸನ್‌ರೈಸರ್ಸ್‌ಗೆ 88 ರನ್ ಜಯ.

6: ಡೆಲ್ಲಿ ತಂಡ ಐಪಿಎಲ್ ಪ್ಲೇಆಫ್​/ನಾಕೌಟ್‌ನಲ್ಲಿ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಸೋತಿದೆ. ಏಕೈಕ ಗೆಲುವು ಕಳೆದ ವರ್ಷದ ಎಲಿಮಿನೇಟರ್‌ನಲ್ಲಿ ಸನ್‌ರೈಸರ್ಸ್‌ ವಿರುದ್ಧವೇ ಬಂದಿತ್ತು.

9: ಅಬುಧಾಬಿಯಲ್ಲಿ ನಡೆದ ಕಳೆದ 9 ಪಂದ್ಯಗಳಲ್ಲಿ 8ರಲ್ಲಿ ಚೇಸಿಂಗ್ ಮಾಡಿದ ತಂಡವೇ ಜಯಿಸಿದೆ.