ಕ್ರೀಡೆ

ಪಿವಿ ಸಿಂಧು-ವೆಂಕಟ ದತ್ತ 'ಲವ್​ ಆಲ್'​! ಬ್ಯಾಡ್ಮಿಂಟನ್​ ತಾರೆ ನಿಶ್ಚಿತಾರ್ಥ...

ಹೈದರಾಬಾದ್​: ಭಾರತದ ಅಗ್ರ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು ಮತ್ತು ಹೈದರಾಬಾದ್​ ಉದ್ಯಮಿ ವೆಂಕಟ ದತ್ತ ಸಾಯಿ ಅವರ ನಿಶ್ಚಿತಾರ್ಥ ಶನಿವಾರ ನಡೆದಿದೆ. ಡಿಸೆಂಬರ್​ 22ರಂದು ರಾಜಸ್ಥಾನದ ಉದಯಪುರದಲ್ಲಿ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

"ಮಿಸ್​ ಟು ಮಿಸ್ಸೆಸ್​' ಎಂಬ ಲಕದ ಎದುರು ಕೇಕ್​ ಕತ್ತರಿಸಿ ವೆಂಕಟ ದತ್ತಗೆ ತಿನ್ನಿಸುತ್ತಿರುವ ಚಿತ್ರದೊಂದಿಗೆ 29 ವರ್ಷದ ಸಿಂಧು, "ಪ್ರೀತಿಯು ಕರೆದಾಗ ಅದನ್ನು ಹಿಂಬಾಲಿಸು. ಏಕೆಂದರೆ ಪ್ರೀತಿಯು ತನ್ನನ್ನು ಬಿಟ್ಟು ಬೇರೇನನ್ನೂ ನೀಡುವುದಿಲ್ಲ' ಎಂಬ ಜನಪ್ರಿಯ ಲೆಬನನ್​ ಕವಿ ಕಹ್ಲಿಲ್​ ಗಿಬ್ರನ್​ರ ಪ್ರೇಮಸಂದೇಶವನ್ನು ಪ್ರಕಟಿಸುವ ಮೂಲಕ ನಿಶ್ಚಿತಾರ್ಥವನ್ನು ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

2 ವಾರಗಳ ಹಿಂದೆ ಲಖನೌದಲ್ಲಿ ಪಿವಿ ಸಿಂಧು, ಸಯ್ಯದ್​ ಮೋದಿ ಬ್ಯಾಡ್ಮಿಂಟನ್​ ಟೂರ್ನಿ ಜಯಿಸುವ ಮೂಲಕ ಎರಡೂವರೆ ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಸಿಂಧು ವಿವಾಹವಾಗುತ್ತಿರುವ ಸುದ್ದಿಯೂ ಖಚಿತಪಟ್ಟಿತ್ತು. ಅದ್ದೂರಿ ವಿವಾಹ ಸಮಾರಂಭಕ್ಕೆ ಪೂರ್ವಭಾವಿಯಾಗಿ ಡಿ. 20ರಿಂದಲೇ ಸಂಭ್ರಮೋತ್ಸವ ಶುರುವಾಗಲಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಷಾ, ವಿದೇಶಾಂಗ ಸಚಿವ ಜೈಶಂಕರ್​, ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಸಹಿತ ಗಣ್ಯರನ್ನು ಸಿಂಧು ಈಗಾಗಲೆ ವಿವಾಹಕ್ಕೆ ಆಹ್ವಾನಿಸಿದ್ದಾರೆ. ಡಿಸೆಂಬರ್​ 24ರಂದು ಹೈದರಾಬಾದ್​ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.