ಕ್ರೀಡೆ

VIDEO: ಹೈದರಾಬಾದ್​ನಲ್ಲಿ ಅಭ್ಯಾಸ ಆರಂಭಿಸಿದ ವಿಶ್ವ ಚಾಂಪಿಯನ್​ ಪಿವಿ ಸಿಂಧು

ಹೈದರಾಬಾದ್​: ಕರೊನಾ ವೈರಸ್​ ಭೀತಿಯಿಂದಾಗಿ ಮನೆಯಲ್ಲೇ ಲಾಕ್​ ಆಗಿದ್ದ ವಿಶ್ವ ಚಾಂಪಿಯನ್​ ಪಿವಿ ಸಿಂಧು ಬುಧವಾರ ಅಭ್ಯಾಸ ಆರಂಭಿಸಿದರು. ಕ್ರೀಡಾ ಚಟುವಟಿಕೆ, ಜಿಮ್​ ಕಳೆದ ನಾಲ್ಕೂ ತಿಂಗಳಿಂದ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ಸಿಂಧು, ಇದೀಗ ಎಂದಿನಂತೆ ಅಭ್ಯಾಸಕ್ಕೆ ಮರಳಿದ್ದಾರೆ. ತಮ್ಮ ಎರಡನೇ ಮನೆಯಂತಾಗಿರುವ ಸುಚಿತ್ರಾ ಅಕಾಡೆಮಿಯಲ್ಲಿ ಫಿಟ್ನೆಸ್​ ಟ್ರೇನರ್​ ಎಂ ಶ್ರೀಕಾಂತ್​ ವರ್ಮ ಅವರ ಮಾರ್ಗದರ್ಶನದಲ್ಲಿ ಸಿಂಧು ಸುಮಾರು 3 ಗಂಟೆಗಳ ಕಾಲ ದೈಹಿಕ ಕಸರತ್ತು ನಡೆಸಿದರು.

ಇದನ್ನೂ ಓದಿ:

ಕಳೆದ ವರ್ಷ ಆಗಸ್ಟ್​ ತಿಂಗಳಲ್ಲಿ ವಿಶ್ವಚಾಂಪಿಯನ್​ಪಟ್ಟ ಅಲಂಕರಿಸಿದ್ದ ಸಿಂಧು, ಬಳಿಕ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದರು. ಕನಿಷ್ಠ ಎರಡು ವಾರಗಳ ಕಾಲ ಕಠಿಣವಾಗಿ ದೈಹಿಕ ಕಸರತ್ತಿನ ಅಗತ್ಯವಿದೆ. ತುಂಬಾ ಕಷ್ಟವಾಗುತ್ತಿದ್ದರೂ ಅಸಾಧ್ಯವೆನಿಲ್ಲ ಎಂದು ಸಿಂಧು ಪ್ರತಿಕ್ರಿಯಿಸಿದ್ದಾರೆ. ಮನೆಯಲ್ಲೇ ಇದ್ದು ಬೇಜಾರಾಗಿತ್ತು. ಮನೆಯಲ್ಲಿ ಅಪ್ಪನ ಸಲಹೆಯಂತೆ ಕೆಲವೊಂದು ವ್ಯಾಯಾಮ ಅಭ್ಯಾಸ ನಡೆಸಿದ್ದೆ, ಒಲಿಂಪಿಕ್ಸ್​ನಲ್ಲಿ ಪದಕ ಜಯಿಸುವುದೇ ನನ್ನ ಗುರಿ ಎಂದು 25 ವರ್ಷದ ಹೈದರಾಬಾದ್​ ಷಟ್ಲರ್​ ತಿಳಿಸಿದ್ದಾರೆ. 2016ರ ರಿಯೋ ಒಲಿಂಪಿಕ್ಸ್​ನಲ್ಲೂ ಸಿಂಧು ರಜತ ಗೆದ್ದಿದ್ದರು.

ಜಿಮ್​ನಲ್ಲಿ ನಡೆಸುತ್ತಿರುವ ಕಸರತ್ತಿನ ಫೋಟೋಗಳನ್ನು ಸಿಂಧು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದೇ ರೀತಿ ಡಬಲ್ಸ್​ ವಿಭಾಗದ ಸ್ಟಾರ್​ ಆಟಗಾತಿರ್ ಸಿಕ್ಕಿ ರೆಡ್ಡಿ ಕೂಡ ಬುಧವಾರದಿಂದ ಅಭ್ಯಾಸ ಆರಂಭಿಸಿದರು.