ಕ್ರೀಡೆ

ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು ವಿವಾಹಕ್ಕೆ ವಿಶೇಷ ರೀತಿಯಲ್ಲಿ ಶುಭ ಹಾರೈಸಿದ ಕ್ರಿಕೆಟ್​ ದಿಗ್ಗಜ ಸಚಿನ್​!

ಮುಂಬೈ: ಡಿ. 22ರಂದು ರಾಜಸ್ಥಾನದ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು ಮತ್ತು ಉದ್ಯಮಿ ವೆಂಕಟ ದತ್ತ ಸಾಯಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ರನ್ನು ಅವರ ಮುಂಬೈ ನಿವಾಸದಲ್ಲಿ ಭೇಟಿಯಾಗಿ ವಿವಾಹಕ್ಕೆ ಆಹ್ವಾನಿಸಿದರು. ನಂತರ ಸಚಿನ್​ ಸಾಮಾಜಿಕ ಜಾಲತಾಣದಲ್ಲಿ ಸಿಂಧು ವಿವಾಹಕ್ಕೆ ವಿಶೇಷವಾದ ರೀತಿಯಲ್ಲಿ ಶುಭಹಾರೈಸಿದರು.

"ಬ್ಯಾಡ್ಮಿಂಟನ್​ ಆಟದಲ್ಲಿ ಸ್ಕೋರ್​ಗಳು ಯಾವಾಗಲೂ "ಲವ್​'ನಿಂದ ಶುರುವಾಗುತ್ತವೆ. ವೆಂಕಟ ದತ್ತ ಸಾಯಿ ಜತೆಗಿನ ನಿಮ್ಮ ಪ್ರಯಾಣವೂ ಎಂದೆಂದಿಗೂ "ಲವ್​' (ಪ್ರೀತಿ) ಜತೆ ಮುಂದುವರಿಯಲಿ. ಪಿವಿ ಸಿಂಧು ನಿಮ್ಮ ಜೀವನದ ಅತಿದೊಡ್ಡ ದಿನಕ್ಕೆ ನನ್ನನ್ನು ವೈಯಕ್ತಿಕವಾಗಿ ಬಂದು ಆಹ್ವಾನಿಸಿರುವುದಕ್ಕೆ ಧನ್ಯವಾದಗಳು. ನಿಮ್ಮಿಬ್ಬರ ಜೀವನದಲ್ಲೂ ನೆನಪುಗಳ ಸ್ಮ್ಯಾಷ್​ ಮತ್ತು ಸಂತಸಗಳ ರ್ಯಾಲಿ ನಿರಂತರವಾಗಿರಲಿ' ಎಂದು ಸಚಿನ್​ ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಹಾರೈಸಿದ್ದಾರೆ.

ಪ್ರಸಕ್ತ ಪೊಸಿಸೆಕ್ಸ್​ ಟೆಕ್ನಾಲಜಿಯಲ್ಲಿ ಕಾರ್ಯಕಾರಿ ನಿರ್ದೇಶಕರಾಗಿರುವ ವೆಂಕಟ ದತ್ತ ಸಾಯಿ ಈ ಮುನ್ನ ಐಪಿಎಲ್​ ತಂಡವೊಂದರ ಜತೆಗೂ ಕಾರ್ಯನಿರ್ವಹಿಸಿದ್ದರು ಎಂಬುದು ವಿಶೇಷ. ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದಿರುವ ವೆಂಕಟದತ್ತ ಈ ಮುನ್ನ ಜೆಎಸ್​ಡಬ್ಲ್ಯು ಸಂಸ್ಥೆ ಜತೆಗೆ ಕಿರು ಅವಧಿಗೆ ಕಾರ್ಯನಿರ್ವಹಿಸಿದ್ದರು. ಜೆಎಸ್​ಡಬ್ಲ್ಯು ಸಂಸ್ಥೆ ಐಪಿಎಲ್​ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಸಹ-ಒಡೆತನವನ್ನೂ ಹೊಂದಿದೆ. ಹೀಗಾಗಿ ವೆಂಕಟದತ್ತ ಕೂಡ ಆ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಮ್ಯಾನೇಜ್​ ಮಾಡಿದ್ದರು.